ಬಂಗಾರ ತ್ಯಜಿಸುವುದು ʼಅಚ್ಚೆದಿನ್ʼ, ಬದುಕು ತ್ಯಜಿಸುವುದು ʼಅಮೃತ್‌ಕಾಲ್ʼ : ಸಚಿವ ಪ್ರಿಯಾಂಕ್ ಖರ್ಗೆ ಲೇವಡಿ

ಬೆಂಗಳೂರು : ‘ಬಂಗಾರ ತ್ಯಜಿಸುವುದು ಅಚ್ಚೆ ದಿನ್. ಬದುಕು ತ್ಯಜಿಸುವುದು ಅಮೃತ್ ಕಾಲ್. ಇದು ಮೋದಿ ಮ್ಯಾಜಿಕ್. ತಮ್ಮ ವೈಫಲ್ಯದ ಆಡಳಿತದ ಕಾರಣಕ್ಕೆ ಜನರಿಂದ ತ್ಯಾಗವನ್ನು ಬಯಸುವುದಕ್ಕೆ ‘ಅಮೃತ ಕಾಲ’ ಎಂದು ಹೆಸರಿಟ್ಟಿದ್ದಾರೆ ಪ್ರಧಾನಿ ಮೋದಿ’ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಪ್ರಿಯಾಂಕ್ ಖರ್ಗೆ ಇಂದಿಲ್ಲಿ ಲೇವಡಿ ಮಾಡಿದ್ದಾರೆ.
ಶನಿವಾರ ಎಕ್ಸ್ ನಲ್ಲಿ ಪೋಸ್ಟ್ ಹಾಕಿರುವ ಅವರು, ‘ಹೊಣೆಗಾರಿಕೆ ಮತ್ತು ಉತ್ತರದಾಯಿತ್ವದ ಜವಾಬ್ದಾರಿಯನ್ನು ಜನರ ತಲೆಗೆ ವರ್ಗಾಯಿಸುವ ಕಲೆ ಮೋದಿಯವರಿಗೆ ಚೆನ್ನಾಗಿ ತಿಳಿದಿದೆ. ಕೋವಿಡ್ ಸೋಂಕಿನ ನಿರ್ವಹಣೆಯ ವೈಫಲ್ಯದ ಸಮಯದಲ್ಲಿ ತಟ್ಟೆ ಬಡಿಯಿರಿ, ದೀಪ ಹಚ್ಚಿರಿ ಎನ್ನುತ್ತಲೇ ಲಕ್ಷಾಂತರ ಮಂದಿಯನ್ನು ಬಲಿ ಕೊಟ್ಟಿದ್ದಾಯ್ತು’ ಎಂದು ಟೀಕಿಸಿದ್ದಾರೆ.
‘ನೋಟ್ ಬ್ಯಾನ್ ಸಮಯದಲ್ಲಿ ‘50 ದಿನಗಳ ಸಮಯ ಕೊಡಿ, ಪರಿಸ್ಥಿತಿ ಸರಿ ಹೋಗದಿದ್ದರೆ ನೀವು ಕೊಡುವ ಶಿಕ್ಷೆಗೆ ನಾನು ಸಿದ್ದ’ ಎನ್ನುತ್ತಲೇ ನೂರಾರು ಜನರ ಜೀವಕ್ಕೆ ಕಂಟಕವಾಗಿದ್ದಾಯ್ತು. ಇದೀಗ ಹೊಸ ವರಸೆಯಾಗಿ, ಚಿನ್ನ ಖರೀದಿಸಬೇಡಿ, ಪೆಟ್ರೋಲ್ ಮಿತವಾಗಿ ಬಳಸಿ, ಸರಳ ಜೀವನ ನಡೆಸಿ ಎಂಬ ಉಪದೇಶಗಳು ಶುರುವಾಗಿವೆ, ಈ ಉಪದೇಶಗಳು ಯಾವ ಭೀಕರ ದಿನಗಳ ಮುನ್ಸೂಚನೆ? ಎಂದು ಅವರು ಪ್ರಶ್ನಿಸಿದ್ದಾರೆ.
‘2024ರಲ್ಲಿ ‘ಕಾಂಗ್ರೆಸ್ ನಿಮ್ಮ ಮಂಗಳಸೂತ್ರವನ್ನು ಕಸಿಯುತ್ತದೆ’. 2026ರಲ್ಲಿ ಬಂಗಾರದ ಮೇಲಿನ ಆಮದು ಸುಂಕ ಶೇ.6ರಿಂದ ಶೇ.15ಕ್ಕೆ ಏರಿಕೆ, ಬಂಗಾರದ ಬೆಲೆ ಸಾರ್ವಕಾಲಿಕ ಏರಿಕೆ ಹಾಗೂ ಬಂಗಾರ ಖರೀದಿಸಬೇಡಿ ಎಂಬ ಬಿಟ್ಟಿ ಉಪದೇಶ. ಇದೀಗ ಮಂಗಳಸೂತ್ರ ಕಸಿಯಲು ಕೈಹಾಕಿದವರು ಯಾರು? ಇದಕ್ಕೆ ಬಿಜೆಪಿಗರು ಉತ್ತರಿಸುವರೇ?’ ಎಂದು ಪ್ರಿಯಾಂಕ್ ಖರ್ಗೆ ವಾಗ್ದಾಳಿ ನಡೆಸಿದ್ದಾರೆ.
‘ಐತಿಹಾಸಿಕ ದಾಖಲೆ ಮಟ್ಟದ ಗ್ಯಾಸ್ ಬೆಲೆ ಏರಿಕೆಯ ನಂತರ ಈಗ ಇಂಧನ ತೈಲಗಳ ಬೆಲೆ ಏರಿಕೆಯ ಸರ್ಜಿಕಲ್ ಸ್ಟ್ರೈಕ್ ನಡೆಸಲಾಗಿದೆ. ದುಸ್ತರವಾಗಿರುವ ಜನರ ಬದುಕನ್ನು ಇನ್ನಷ್ಟು ದುಸ್ತರವಾಗಿಸುವ ಅಚ್ಚೆ ದಿನಗಳಲ್ಲಿ ಬಂಗಾರ ತ್ಯಜಿಸುವುದನ್ನು ದೇಶಭಕ್ತಿ ಎನ್ನಲಾಗುತ್ತಿದೆ, ಮುಂದೆ ಅಮೃತ ಕಾಲದಲ್ಲಿ ಬದುಕು ತ್ಯಜಿಸುವುದನ್ನು ದೇಶಭಕ್ತಿ ಎನ್ನಲಾಗುತ್ತದೆ’ ಎಂದು ಅವರು ಟೀಕಿಸಿದ್ದಾರೆ.
‘ಭಾರತವು ಎಕನಾಮಿಕಲ್ ಎಮರ್ಜೆನ್ಸಿ ಸ್ಥಿತಿಯ ಎದುರು ನಿಂತಿದೆಯೇ? ದೇಶದ ಖಜಾನೆಯ ಪರಿಸ್ಥಿತಿ ಹೇಗಿದೆ?. ಇಂಧನ ಭದ್ರತೆಗೆ ಸರಕಾರ ಕೈಗೊಂಡ ಕ್ರಮಗಳೇನು? ಬಂಗಾರ ಖರೀದಿಸಬೇಡಿ ಎಂಬ ಹೇಳಿಕೆ ನೀಡುವ ಮುನ್ನ 85 ಬಿಲಿಯನ್ ಡಾಲರ್ ಗಾತ್ರದ ಭಾರತದ ಜ್ಯುವೆಲ್ಲರಿ ಮಾರ್ಕೆಟ್ ನಂಬಿ ಬದುಕುತ್ತಿರುವ ಕುಟುಂಬಗಳ ರಕ್ಷಣೆಯ ಬಗ್ಗೆ ಯೋಚಿಸಿದ್ದಾರೆಯೇ? ಇವರಿಗೆ ಸರಕಾರ ನೀಡುವ ಪರಿಹಾರಗಳೇನು?’. ಈ ಎಲ್ಲದರ ಬಗ್ಗೆ ಪ್ರಧಾನಿ ಶ್ವೇತಪತ್ರ ಹೊರಡಿಸಲಿ, ಇಲ್ಲವೇ ವಿಶೇಷ ಅಧಿವೇಶನ ಕರೆದು ಚರ್ಚಿಸಲಿ ಅಥವಾ ಪತ್ರಿಕಾಗೋಷ್ಠಿಯನ್ನಾದರೂ ನಡೆಸಿ ನೈಜ ಸ್ಥಿತಿಯನ್ನು ತಿಳಿಸಲಿ’ ಎಂದು ಅವರು ಆಗ್ರಹಿಸಿದ್ದಾರೆ.
ಬಂಗಾರ ತ್ಯೆಜಿಸುವುದು ಅಚ್ಚೆ ದಿನ್.
— Priyank Kharge / ಪ್ರಿಯಾಂಕ್ ಖರ್ಗೆ (@PriyankKharge) May 16, 2026
ಬದುಕು ತ್ಯೆಜಿಸುವುದು ಅಮೃತ್ ಕಾಲ್.
ಇದು ಮೋದಿ ಮ್ಯಾಜಿಕ್!
ತಮ್ಮ ವೈಫಲ್ಯದ ಆಡಳಿತದ ಕಾರಣಕ್ಕೆ ಜನರಿಂದ ತ್ಯಾಗವನ್ನು ಬಯಸುವುದಕ್ಕೆ "ಅಮೃತ ಕಾಲ" ಎಂದು ಹೆಸರಿಟ್ಟಿದ್ದಾರೆ ಪ್ರಧಾನಿ ಮೋದಿ!
ಹೊಣೆಗಾರಿಕೆ ಮತ್ತು ಉತ್ತರದಾಯಿತ್ವದ ಜವಾಬ್ದಾರಿಯನ್ನು ಜನರ ತಲೆಗೆ ವರ್ಗಾಯಿಸುವ ಕಲೆ ಮೋದಿಯವರಿಗೆ ಚೆನ್ನಾಗಿ…






