ಕಲಬುರಗಿಯಲ್ಲಿ ಜವಳಿ ಪಾರ್ಕ್ ಯೋಜನೆ | 1,700 ಕೋಟಿ ರೂ. ಹೂಡಿಕೆಗೆ ಹೂಡಿಕೆದಾರರಿಂದ ಪ್ರಸ್ತಾಪ : ಸಚಿವ ಪ್ರಿಯಾಂಕ್ ಖರ್ಗೆ

ಬೆಂಗಳೂರು : ಕಲಬುರಗಿ ಜಿಲ್ಲೆಯಲ್ಲಿ ಉದ್ದೇಶಿತ ಮೆಗಾ ಜವಳಿ ಪಾರ್ಕ್ ಯೋಜನೆಯು ಅತ್ಯಂತ ವೇಗವಾಗಿ ಪ್ರಗತಿ ಕಾಣುತ್ತಿದ್ದು, ಈಗಾಗಲೇ ಪ್ರಮುಖ ಹಂತದ ಪ್ರಕ್ರಿಯೆಗಳು ಯಶಸ್ವಿಯಾಗಿ ಪೂರ್ಣಗೊಂಡಿದ್ದು, ಜಿಲ್ಲೆಯ ನಡಿಸಿನ್ನೂರು ಮತ್ತು ಕಿರಂಗಿ ಗ್ರಾಮಗಳ ವ್ಯಾಪ್ತಿಯಲ್ಲಿ ಒಟ್ಟು 1,000 ಎಕರೆ ಜಮೀನನ್ನು ಈ ಮಹತ್ವಾಕಾಂಕ್ಷಿ ಯೋಜನೆಗಾಗಿ ಗುರುತಿಸಲಾಗಿದೆ ಎಂದು ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ತಿಳಿಸಿದ್ದಾರೆ.
ಸೋಮವಾರ ವಿಕಾಸಸೌಧದಲ್ಲಿ ಜವಳಿ ಇಲಾಖೆ ಹಾಗೂ ಕರ್ನಾಟಕ ಕೈಗಾರಿಕಾ ಪ್ರದೇಶ ಅಭಿವೃದ್ಧಿ ಮಂಡಳಿ ಅಧಿಕಾರಿಗಳು, ಹೂಡಿಕೆದಾರರು ಮತ್ತು ವೀಡಿಯೊ ಸಂವಾದದ ಮೂಲಕ ಅವರು ಕಲಬುರಗಿ ಜಿಲ್ಲಾಧಿಕಾರಿಗಳೊಂದಿಗೆ ಸಭೆ ನಡೆಸಿ ಜವಳಿ ಪಾರ್ಕ್ ಪ್ರಗತಿ ಪರಿಶೀಲಿಸಿದರು.
ಜವಳಿ ಪಾರ್ಕ್‍ನ ಉದ್ಘಾಟನೆಗೂ ಮುನ್ನವೆ ಹೂಡಿಕೆದಾರರಿಂದ ಅಭೂತಪೂರ್ವ ಸ್ಪಂದನೆ ವ್ಯಕ್ತವಾಗಿದ್ದು, 8 ಪ್ರಮುಖ ಹೂಡಿಕೆದಾರರಿಂದ ಸುಮಾರು 1,700 ಕೋಟಿ ರೂಪಾಯಿಗಳ ಹೂಡಿಕೆಯ ಪ್ರಸ್ತಾವಗಳು ಹರಿದುಬಂದಿವೆ ಎಂದು ಪ್ರಿಯಾಂಕ್ ಖರ್ಗೆ ಹೇಳಿದರು.
ಜವಳಿ ಪಾರ್ಕಿನಲ್ಲಿ ಆರಂಭಗೊಳ್ಳಲಿರುವ ಘಟಕಗಗಳಿಗೆ ಅನುಕೂಲವಾಗುವಂತೆ 25 ಎಕರೆಯಲ್ಲಿ ಸೌರವಿದ್ಯುತ್ ಘಟಕವನ್ನು ಆರಂಭಿಸಲಾಗುತ್ತಿದ್ದು, ಮಾಲಿನ್ಯರಹಿತ ಹಸಿರುಶಕ್ತಿಯನ್ನು ಬಳಸಿದಂತಾಗುವುದಲ್ಲದೆ ಜಗತ್ತಿನ ತಾಪಮಾನ ಏರಿಕೆ ಹಾಗೂ ಹವಾಮಾನ ವೈಪರೀತ್ಯ ತಡೆಯಲು ಕೊಡುಗೆ ನೀಡಿದಂತಾಗುವುದು ಎಂದು ಅವರು ತಿಳಿಸಿದರು.
ಜವಳಿ ಪಾರ್ಕ್‍ಗೆ ಗುರುತಿಸಲಾಗಿರುವ ಭೂಮಿಯನ್ನು ಈಗಾಗಲೆ ಕೈಗಾರಿಕಾ ಬಳಕೆಗೆ ಪರಿವರ್ತಿಸಲಾಗಿದ್ದು, ಅರಣ್ಯ ಇಲಾಖೆಯಿಂದಲೂ ಅಗತ್ಯ ಅನುಮತಿಗಳನ್ನು ಪಡೆಯಲಾಗಿದೆ. ಇದಲ್ಲದೆ, ಬಹುಮುಖ್ಯವಾಗಿದ್ದ ಪರಿಸರ ಅನುಮತಿಯು 2025ನೆ ಸಾಲಿನ ಅ.27ರಂದು ಲಭ್ಯವಾಗಿದೆ. ಪಾರ್ಕ್‍ನ ಸಮಗ್ರ ಮಾಸ್ಟರ್ ಪ್ಲಾನ್, ಆರ್ಥಿಕ ಯೋಜನೆ ಹಾಗೂ ವಿವರವಾದ ಯೋಜನಾ ವರದಿ ಸಿದ್ಧಪಡಿಸುವ ಕಾರ್ಯ ಪೂರ್ಣಗೊಂಡಿದೆ ಎಂದು ಅವರು ಹೇಳಿದರು.
ಯೋಜನೆಯ ಸುಗಮ ನಿರ್ವಹಣೆಗಾಗಿ ಈಗಾಗಲೇ ಮೂರು ಪ್ರಮುಖ ಮಂಡಳಿ ಸಭೆಗಳನ್ನು ನಡೆಸಲಾಗಿದೆ. ಈ ಜವಳಿ ಪಾರ್ಕ್ ಸ್ಥಾಪನೆಯಿಂದಾಗಿ ಕಲ್ಯಾಣ ಕರ್ನಾಟಕ ಭಾಗದಲ್ಲಿ ಸಾವಿರಾರು ಉದ್ಯೋಗಾವಕಾಶಗಳು ಸೃಷ್ಟಿಯಾಗಲಿದ್ದು, ಪ್ರಾದೇಶಿಕ ಆರ್ಥಿಕ ಅಭಿವೃದ್ಧಿಗೆ ಹೊಸ ದಿಕ್ಸೂಚಿ ಸಿಗಲಿದೆ ಎಂದು ಪ್ರಿಯಾಂಕ್ ಖರ್ಗೆ ತಿಳಿಸಿದರು.
ಸಭೆಯಲ್ಲಿ ಜವಳಿ ಇಲಾಖೆಯ ಸರಕಾರದ ಕಾರ್ಯದರ್ಶಿ ರೋಹಿಣಿ ಸಿಂಧೂರಿ, ಕರ್ನಾಟಕ ಕೈಗಾರಿಕಾ ಪ್ರದೇಶ ಅಭಿವೃದ್ಧಿ ಮಂಡಳಿ ಮುಖ್ಯಕಾರ್ಯನಿರ್ವಹಣಾಧಿಕಾರಿ ಗೋವಿಂದರೆಡ್ಡಿ, ಕಲಬುರಗಿ ಜಿಲ್ಲಾಧಿಕಾರಿ ಮುಹಮ್ಮದ್ ಇಕ್ರಮುಲ್ಲಾ ಷರೀಷ್ ಸೇರಿದಂತೆ ಇನ್ನಿತರ ಅಧಿಕಾರಿಗಳು ಪಾಲ್ಗೊಂಡಿದ್ದರು.






