ಸಿದ್ದರಾಮಯ್ಯರ ರಾಜಕೀಯ ಜೀವನ ಪ್ರೇರಣೆ : ಪ್ರಿಯಾಂಕ್ ಖರ್ಗೆ

ಬೆಂಗಳೂರು : ‘ಸಿದ್ದರಾಮಯ್ಯರ ಮಾರ್ಗದರ್ಶನದಲ್ಲಿ ಪಕ್ಷವನ್ನು ಮತ್ತಷ್ಟು ಬಲಪಡಿಸುವ ಮೂಲಕ, ಕೋಮುವಾದಿ ಶಕ್ತಿಗಳಿಂದ ರಾಜ್ಯವನ್ನು ರಕ್ಷಿಸುವ ಅಗತ್ಯ ಇದೆ. ಸಿದ್ದರಾಮನ ಹುಂಡಿಯಿಂದ ವಿಧಾನಸೌಧದ ವರೆಗೆ ಅವರ ರಾಜಕೀಯ ಜೀವನ ಮುಂಬರುವ ಪೀಳಿಗೆಗೂ ಪ್ರೇರಣೆಯ ಶಾಶ್ವತ ಚಿಲುಮೆಯಾಗಿರಲಿದೆ’ ಎಂದು ಮಾಜಿ ಸಚಿವ ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ.
ಶುಕ್ರವಾರ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಾಕಿರುವ ಅವರು, ‘ಕರ್ನಾಟಕದ ಮುಖ್ಯಮಂತ್ರಿಯಾಗಿ ಸುದೀರ್ಘಾವಧಿ ಸೇವೆ ಸಲ್ಲಿಸಿದ ದಾಖಲೆಯೊಂದಿಗೆ, ಕಾಂಗ್ರೆಸ್ ಪಕ್ಷದ ಜನಪರ ಯೋಜನೆಗಳು, ಸೈದ್ಧಾಂತಿಕ ನಿಲುವುಗಳು, ರಾಜಕೀಯ ಹೋರಾಟಗಳಿಂದ ಸಿದ್ದರಾಮಯ್ಯ ರಾಜ್ಯದ ಜನತೆಯ ಪ್ರೀತಿಗೆ ಪಾತ್ರರಾಗಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
‘ತಮ್ಮ ರಾಜಕೀಯ ಜೀವನದ ಆರಂಭದಿಂದಲೂ ಸಂವಿಧಾನದ ಮೌಲ್ಯಗಳು, ಜಾತ್ಯತೀತ ತತ್ವಗಳಿಗೆ ಬದ್ಧರಾಗಿ, ಪ್ರಬುದ್ಧ ರಾಜಕಾರಣಕ್ಕೆ ಸಿದ್ದರಾಮಯ್ಯ ಮೇಲ್ಪಂಕ್ತಿ ಹಾಕಿದರು. ನಮ್ಮ ತಲೆಮಾರಿನ ರಾಜಕಾರಣಿಗಳು, ಯುವ ನಾಯಕರಿಗೆ ಸ್ಫೂರ್ತಿಯಾಗಿದ್ದಾರೆ. ನನ್ನ ವೈಯಕ್ತಿಕ ರಾಜಕೀಯದಲ್ಲಿ, ಬೆಳವಣಿಗೆಯಲ್ಲಿ ಸಿದ್ದರಾಮಯ್ಯರ ಮಾರ್ಗದರ್ಶನ ಬಹುಮುಖ್ಯ ಪಾತ್ರವಹಿಸಿದೆ. ಐಟಿ-ಬಿಟಿ ಮತ್ತು ಪ್ರವಾಸೋದ್ಯಮದಂತಹ ಮಹತ್ವದ ಖಾತೆಗಳ ಜವಾಬ್ದಾರಿ ವೇಳೆ, ಸಂಪುಟದಲ್ಲಿನ ಅತಿ ಕಿರಿಯ ಸಚಿವ ಎಂಬ ಹಿಂಜರಿಕೆ ಉಂಟಾಗದಂತೆ ನನ್ನಲ್ಲಿ ಆತವಿಶ್ವಾಸ ತುಂಬಿದ್ದರು’ ಎಂದು ಪ್ರಿಯಾಂಕ್ ಖರ್ಗೆ ಸ್ಮರಿಸಿದ್ದಾರೆ.
ಜೊತೆಗೆ, ಜನಪರ ಯೋಜನೆಗಳನ್ನು ರೂಪಿಸಲು ಸ್ವಾತಂತ್ರ್ಯ ನೀಡಿದರು. ಪ್ರಸಕ್ತ ಅವಧಿಯಲ್ಲಿಯೂ ಎರಡು ಪ್ರಮುಖ ಖಾತೆಗಳ ಜವಾಬ್ದಾರಿಯುತ ಹೊಣೆಗಾರಿಕೆಯಲ್ಲಿ ಅವರ ಮಾರ್ಗದರ್ಶನ ಮೌಲ್ಯಯುತವಾಗಿತ್ತು. ಸಿದ್ದರಾಮಯ್ಯರ ನಾಯಕತ್ವದಲ್ಲಿ ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷವು ಭ್ರಷ್ಟಾಚಾರ ಮುಕ್ತ ಆಡಳಿತ, ಅಭಿವೃದ್ಧಿಪರ ಕೆಲಸಗಳನ್ನು ಮಾಡಿದೆ. ಗ್ಯಾರಂಟಿಗಳು ಜನರಿಗೆ ಆರ್ಥಿಕ ಶಕ್ತಿ ತುಂಬಿವೆ. ಇಂತಹ ಮುತ್ಸದ್ಧಿ ನಾಯಕರ ಸಂಪುಟದಲ್ಲಿ ಸಚಿವ ಸ್ಥಾನ ನಿಭಾಯಿಸಿರುವುದು ನನಗೆ ಹೆಮ್ಮೆತ ಸಂಗತಿ ಎಂದು ಅವರು ತಿಳಿಸಿದ್ದಾರೆ.
ಸಿದ್ದರಾಮಯ್ಯ ಅವರು ಮುಖ್ಯಮಂತ್ರಿ ಸ್ಥಾನದಿಂದ ನಿರ್ಗಮಿಸಿರುವುದು ನಮೆಲ್ಲರಿಗೂ ಭಾವುಕ ಸಂಗತಿ. ತಮ್ಮ ಮೌಲ್ಯಗಳಿಗೆ ಕಟಿಬದ್ಧರಾಗಿ, ಸಮಾಜಮುಖಿ ಕಾರ್ಯಗಳಿಂದ ಜನರಿಗೆ ಹತ್ತಿರವಾಗಿದ್ದ ಸಿದ್ದರಾಮಯ್ಯರ ಕೊಡುಗೆಗಳನ್ನು ನೆನಪಿಸಿಕೊಳ್ಳುತ್ತೇನೆ ಎಂದು ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ.






