ಪ್ರಧಾನಿ ಮೋದಿ 12 ವರ್ಷಗಳಲ್ಲಿನ 12 ಸಾಧನೆಗಳನ್ನು ಹೇಳಲಿ : ಪ್ರಿಯಾಂಕ್ ಖರ್ಗೆ

ಬೆಂಗಳೂರು : ‘ದೇಶದ ಮೊದಲ ಪ್ರಧಾನಿ ಜವಾಹರ್ ಲಾಲ್ ನೆಹರೂ ಆಡಳಿತದ ಅವಧಿಯ ದಾಖಲೆಯನ್ನು ಪ್ರಧಾನಿ ಮೋದಿ ಮುರಿದಿದ್ದಾರೆ ಎಂದು ಬಿಜೆಪಿ ಮುಖಂಡರು, ಮೋದಿಯವರಿಗೆ ಅಭಿನಂದನೆ ಸಲ್ಲಿಸುತ್ತಿದ್ದಾರೆ. ಆದರೆ, ಮೋದಿ ಆಡಳಿತದ 12 ವರ್ಷಗಳಲ್ಲಿ ಅವರ 12 ಸಾಧನೆಗಳನ್ನು ಹೇಳಲಿ’ ಎಂದು ಗೃಹ ಸಚಿವ ಪ್ರಿಯಾಂಕ್ ಖರ್ಗೆ ಸವಾಲು ಹಾಕಿದ್ದಾರೆ.
ಬುಧವಾರ ನಗರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ‘ಸ್ಮಾರ್ಟ್ ಸಿಟಿ ಯೋಜನೆ, ಬೇಟಿ ಬಚಾವೋ ಬೇಟಿ ಪಡಾವೋ, ಮೇಕ್ ಇನ್ ಇಂಡಿಯಾ, ಆಯುಷ್ಮಾನ್ ಭಾರತ್, ಉಜ್ವಲ ಯೋಜನೆ, ಜಲ ಜೀವನ್ ಮಿಷನ್ ಸೇರಿದಂತೆ ಮೋದಿಯವರ ಎಲ್ಲ ಯೋಜನೆಗಳು ಕೇವಲ ಘೋಷಣೆಗೆ ಸೀಮಿತವಾಗಿವೆ’ ಎಂದು ಟೀಕಿಸಿದರು.
ದೇಶದ ಆರ್ಥಿಕ ಸ್ಥಿತಿ ಹೇಗಿದೆ?, ರೂಪಾಯಿ ಮೌಲ್ಯ ಎಷ್ಟು ಮೊತ್ತದ ಕುಸಿತ ಆಗಿದೆ. ಅಡುಗೆ ಅನಿಲ, ವಾಣಿಜ್ಯ ಸಿಲಿಂಡರ್‍ನ ಬೆಲೆ ಎಷ್ಟು ಹೆಚ್ಚಳವಾಗಿದೆ. ಪೆಟ್ರೋಲ್, ಡೀಸೆಲ್ ಬೆಲೆ ಎಷ್ಟು ಏರಿಕೆಯಾಗಿದೆ. ಅಗತ್ಯ ವಸ್ತುಗಳ ಬೆಲೆ ಎಲ್ಲಿಗೆ ಹೋಗಿ ಮುಟ್ಟಿದೆ ಎಂಬುದನ್ನು ಹೇಳಬೇಕು. ಅದು ಬಿಟ್ಟು ಯಾವ ಪುರುಷಾರ್ಥಕ್ಕೆ ನೆಹರೂ ಅವರೊಂದಿಗೆ ಮೋದಿಯನ್ನು ಹೋಲಿಕೆ ಮಾಡಬೇಕು ಎಂದು ಅವರು ವಾಗ್ದಾಳಿ ನಡೆಸಿದರು.
ನೆಹರೂ ಅವರು ಪ್ರಧಾನಿ ಹುದ್ದೆಯನ್ನು ಅಲಂಕರಿಸಿದ ಸಂದರ್ಭದಲ್ಲಿ ದೇಶದ ಪರಿಸ್ಥಿತಿ ಎಲ್ಲಿತ್ತು. ಅವರ ಈ ದೇಶದಲ್ಲಿ ಎಷ್ಟು ಅಣೆಕಟ್ಟೆಗಳನ್ನು ನಿರ್ಮಿಸಿದರು. ಶೈಕ್ಷಣಿಕ ಉನ್ನತಿ ಮತ್ತು ಕೈಗಾರಿಕೆ ಅಭಿವೃದ್ಧಿ ದೃಷ್ಟಿಯಿಂದ ಎಷ್ಟು ಸಾರ್ವಜನಿಕ ಸಂಸ್ಥೆಗಳನ್ನು ಸ್ಥಾಪಿಸಿದರು ಎಂಬುದು ಮುಖ್ಯ. ಆದರೆ, ಮೋದಿ ಅಧಿಕಾರಕ್ಕೆ ಬಂದ ಬಳಿಕ ಯಾವ ಅಣೆಕಟ್ಟನ್ನು ನಿರ್ಮಿಸಿದರು. ಮೋದಿ 12 ವರ್ಷದ ಆಡಳಿತದಲ್ಲಿ ಬರೀ ವೈಫಲ್ಯಗಳೇ ಹೆಚ್ಚಿವೆ ಎಂದು ಪ್ರಿಯಾಂಕ್ ಖರ್ಗೆ ಆರೋಪಿಸಿದರು.
ನೋಂದಣಿಗೆ ಭಯ ಏಕೆ?: ರಾಷ್ಟ್ರೀಯ ಸ್ವಯಂ ಸೇವಕರ ಸಂಘ(ಆರೆಸೆಸ್ಸ್)ದವರು ತಮ್ಮ ಸಂಘಟನೆ ನೋಂದಣಿ ಮಾಡಿಕೊಳ್ಳಲು ಏಕೆ ಭಯ ಪಡುತ್ತಿದ್ದಾರೆ. ‘ಯಾವುದೇ ಸರಕಾರಿ ಸಂಸ್ಥೆಗೆ ಉತ್ತರ ಕೊಡುವಂತಿಲ್ಲ, ನಮಗೆ ಯಾವುದೇ ಸಂವಿಧಾನ, ಕಾನೂನು ಅನ್ವಯವಾಗುವುದಿಲ್ಲ’ ಎಂದು ಬಿಜೆಪಿ ಮುಖಂಡರು ಹೇಳಲಿ ಎಂದು ಪ್ರಿಯಾಂಕ್ ಖರ್ಗೆ ಟೀಕಿಸಿದರು.
ಪ್ರತಿನಿತ್ಯ ವ್ಯಾಪಾರ ಮಾಡುವ ಬೀದಿಬದಿ ವ್ಯಾಪಾರಿಗಳು ಕೂಡ ನೋಂದಣಿ ಮಾಡಿಕೊಳ್ಳುತ್ತಾರೆ. ದೇವಸ್ಥಾನದ ದೇಣಿಗೆಯ ಲೆಕ್ಕವನ್ನೂ ಕೊಡಲಾಗುತ್ತದೆ. ಆರೆಸ್ಸೆಸ್ ನವರು ಆದಾಯ ತೆರಿಗೆ ಇಲಾಖೆ (ಐಟಿ)ಗೆ ಲೆಕ್ಕ ಕೊಡಬಾರದೇ?. ಪರಿಷತ್ ಸದಸ್ಯ ಸಿ.ಟಿ.ರವಿಗೆ ತಮ್ಮ ಇತಿಹಾಸ ಗೊತ್ತಿಲ್ಲ. ಮೊದಲು ಅವರು ತಮ್ಮ ಇತಿಹಾಸವನ್ನು ಅರಿತುಕೊಳ್ಳಲಿ ಎಂದು ಪ್ರಿಯಾಂಕ್ ಖರ್ಗೆ ಸಲಹೆ ನೀಡಿದರು.






