ಬಿಜೆಪಿ-ಜೆಡಿಎಸ್ ನಾಯಕತ್ವವನ್ನು ಅವರ ಶಾಸಕರೇ ತಿರಸ್ಕರಿಸಿದ್ದಾರೆ : ಪ್ರಿಯಾಂಕ್ ಖರ್ಗೆ

ಬೆಂಗಳೂರು : ವಿಧಾನ ಪರಿಷತ್ತಿನ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಐದು ಜನ ಅಭ್ಯರ್ಥಿಗಳು ಗೆಲುವು ಸಾಧಿಸಿರುವುದು ನೋಡಿದರೆ, ಬಿಜೆಪಿ ಹಾಗೂ ಜೆಡಿಎಸ್ ಪಕ್ಷದಲ್ಲಿನ ನಾಯಕತ್ವವನ್ನು ಅವರ ಪಕ್ಷದ ಶಾಸಕರೇ ತಿರಸ್ಕರಿಸಿರುವುದು ಸ್ಪಷ್ಟವಾಗಿ ಕಾಣುತ್ತಿದೆ ಎಂದು ಗೃಹ ಸಚಿವ ಪ್ರಿಯಾಂಕ್ ಖರ್ಗೆ ತಿಳಿಸಿದರು.
ಶುಕ್ರವಾರ ನಗರದಲ್ಲಿ ಸುದ್ದಿಗಾರರ ಪ್ರಶ್ನೆಗಳಿಗೆ ಪ್ರತಿಕ್ರಿಯಿಸಿದ ಅವರು, ಬಿಜೆಪಿ ಹಾಗೂ ಜೆಡಿಎಸ್‍ನವರಿಗೆ ಅವರ ಪಕ್ಷದ ನಾಯಕತ್ವದಲ್ಲಿ ನಂಬಿಕೆಯಿಲ್ಲ. ಇವತ್ತು ನಮ್ಮ ಸರಕಾರದ ಜನಪರ ಯೋಜನೆಗಳು, ಗ್ಯಾರಂಟಿ ಯೋಜನೆಗಳು ಯಾವ ರೀತಿ ಕುಟುಂಬಗಳಿಗೆ ಆರ್ಥಿಕ ಸ್ಥಿರತೆ, ಸ್ವಾಭಿಮಾನದ ಬದುಕು ನೀಡುತ್ತಿವೆ ಎಂಬುದನ್ನು ನೋಡಿ, ಕೆಲವು ಶಾಸಕರು ನಮಗೆ ಆತ್ಮಸಾಕ್ಷಿಯ ಮತಗಳನ್ನು ನೀಡಿದ್ದಾರೆ ಎಂದು ಹೇಳಿದರು.
ಬಿಜೆಪಿ ಹಾಗೂ ಜೆಡಿಎಸ್ ಪಕ್ಷದ ನಾಯಕರು ದಿನಬೆಳಗಾದರೆ ನಮ್ಮನ್ನು ಟೀಕಿಸುತ್ತಿದ್ದರು. ಈ ಚುನಾವಣೆಯಲ್ಲಿ ನಮಗೆ ಹೆಚ್ಚುವರಿಯಾಗಿ 11 ಮತಗಳು ಬಂದಿರುವುದಕ್ಕೆ ನಾವು ಉತ್ತರ ಕೊಡಬೇಕಾ? ಅಥವಾ ವಿಪಕ್ಷಗಳು ಉತ್ತರ ಕೊಡಬೇಕಾ? ಎಂದು ಪ್ರಶ್ನಿಸಿದ ಅವರು, ವಿರೋಧ ಪಕ್ಷದ ಆರ್.ಅಶೋಕ್, ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ, ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ನಾಯಕತ್ವವನ್ನು ಹಾಗೂ ಎರಡು ಪಕ್ಷಗಳ ಮೈತ್ರಿಯನ್ನು ಸ್ವತಃ ಅವರ ಪಕ್ಷದ ಶಾಸಕರೇ ತಿರಸ್ಕರಿಸಿದ್ದಾರೆ ಎಂದು ಪ್ರಿಯಾಂಕ್ ಖರ್ಗೆ ತಿಳಿಸಿದರು.
ನಮ್ಮ ಎಲ್ಲ ಅಭ್ಯರ್ಥಿಗಳು ಮೊದಲ ಪ್ರಾಶಸ್ತ್ಯದ ಮತಗಳನ್ನು ಪಡೆಯುವ ಮೂಲಕ ಗೆಲುವು ಸಾಧಿಸಿದ್ದಾರೆ. ‘ನಾವು ಯಾವ ಶಾಸಕರನ್ನು ಸೆಳೆದಿಲ್ಲ. ನಾವು ಸಂವಿಧಾನ ಬಾಹಿರ ರೀತಿಯಲ್ಲಿ ಚುನಾವಣೆ ಗೆದ್ದಿಲ್ಲ, ಆ ರೀತಿ ಚುನಾವಣೆ ಗೆಲ್ಲಲೂ ಹೋಗುವುದಿಲ್ಲ. ವಿಪಕ್ಷಗಳ ಶಾಸಕರೆ ಸ್ವಯಂಪ್ರೇರಿತವಾಗಿ ಬಂದು ನಮ್ಮ ಅಭ್ಯರ್ಥಿಗಳಿಗೆ ಮತ ಹಾಕಿದ್ದಾರೆ ಎಂದು ಮುಖ್ಯಮಂತ್ರಿ ಹಾಗೂ ಕೆಪಿಸಿಸಿ ಅಧ್ಯಕ್ಷರು ಸ್ಪಷ್ಟವಾಗಿ ಹೇಳಿದ್ದಾರೆ’ ಎಂದು ಅವರು ತಿಳಿಸಿದರು.
ತಮಿಳುನಾಡು ಸರಕಾರ ಮೇಕೆದಾಟು ಯೋಜನೆ ವಿರೋಧಿಸಿ ನಿರ್ಣಯ ಅಂಗೀಕರಿಸಿರುವ ಕುರಿತು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ತಮಿಳುನಾಡು ಸರಕಾರ ಏನೆ ಮಾಡಲಿ, ಮೇಕೆದಾಟು ವಿಚಾರದಲ್ಲಿ ನ್ಯಾಯಾಲಯದ ಆದೇಶ ಸ್ಪಷ್ಟವಾಗಿದೆ. ನಾವು ಅವರ ಪಾಲಿನ ನೀರನ್ನು ಕಬಳಿಸುತ್ತಿಲ್ಲ. ಹೆಚ್ಚುವರಿಯಾಗಿ ಹರಿದು ಹೋಗುತ್ತಿರುವ ನೀರನ್ನು ಸಂಗ್ರಹ ಮಾಡಿ, ಜನರಿಗೆ ಅನುಕೂಲ ಕಲ್ಪಿಸಲು ಮುಂದಾಗಿದ್ದೇವೆ. ನಮ್ಮ ಜವಾಬ್ದಾರಿ ನಮ್ಮ ರಾಜ್ಯದ ಹಿತಾಸಕ್ತಿ ಕಾಪಾಡೋದು ಎಂದು ಹೇಳಿದರು.
ಮೇಕೆದಾಟು ವಿಚಾರದಲ್ಲಿ ಬಿಜೆಪಿ ಸಂಸದರು ಮೌನ ವಹಿಸಿರುವ ಕುರಿತು ಕೇಳಿದ ಪ್ರಶ್ನೆಗೆ ಉತ್ತರಿಸಿದ ಪ್ರಿಯಾಂಕ್ ಖರ್ಗೆ, ಬಿಜೆಪಿ ಸಂಸದರ ಬಗ್ಗೆ ನಿಮಗೆ(ಮಾಧ್ಯಮಗಳಿಗೆ) ನಿರೀಕ್ಷೆ ಹೆಚ್ಚಿದೆ. 12 ವರ್ಷ ಆಯಿತು ಕೇಂದ್ರದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದು, ಕರ್ನಾಟಕ, ಕನ್ನಡಿಗರ ಯಾವುದಾದರೂ ವಿಚಾರದ ಬಗ್ಗೆ ಇಲ್ಲಿನ ಬಿಜೆಪಿ ಸಂಸದರು ಧ್ವನಿ ಎತ್ತಿದ್ದಾರಾ? ಎಂದು ಪ್ರಶ್ನಿಸಿದರು.
ರಾಜ್ಯ ಬಿಜೆಪಿಯಲ್ಲಿನ ಅಸಮರ್ಥ ನಾಯಕತ್ವ ಇಡೀ ದೇಶದಲ್ಲಿ ಎಲ್ಲೂ ಇಲ್ಲ. ಬೆಂಗಳೂರು ಮೆಟ್ರೋ ಪ್ರಯಾಣ ದರ ಏರಿಕೆಯಾದಾಗ ಪ್ರತಿಭಟನೆ ಮಾಡಿ, ಬಾಲಿಶ ಹೇಳಿಕೆಗಳನ್ನು ನೀಡುವಂತಹ ಬಿಜೆಪಿ ಸಂಸದರಿಂದ ನಮಗೆ ಯಾವ ನಿರೀಕ್ಷೆಯೂ ಇಲ್ಲ ಎಂದು ಅವರು ಹೇಳಿದರು.
‘ಮುಂದಿನ ಎಲ್ಲ ಚುನಾವಣೆಗಳನ್ನು ಕಾಂಗ್ರೆಸ್ ಗೆಲ್ಲಲಿದೆ’: ಕೆಪಿಸಿಸಿ ಅಧ್ಯಕ್ಷ ಬಿ.ಕೆ.ಹರಿಪ್ರಸಾದ್ ಹಾಗೂ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ನಾಯಕತ್ವದಲ್ಲಿ ಮೊದಲ ಬಾರಿಯೆ ವಿಧಾನ ಪರಿಷತ್ತಿನ ಚುನಾವಣೆಯಲ್ಲಿ ಕಾಂಗ್ರೆಸ್ ಗೆಲುವು ಸಾಧಿಸಿರುವ ಕುರಿತು ಕೇಳಿದ ಪ್ರಶ್ನೆಗೆ ಉತ್ತರಿಸಿದ ಪ್ರಿಯಾಂಕ್ ಖರ್ಗೆ, ‘ಗ್ರೇಟರ್ ಬೆಂಗಳೂರು ಪ್ರಾಧಿಕಾರದ ನಗರ ಪಾಲಿಕೆಗಳು, ಜಿಲ್ಲಾ ಪಂಚಾಯತ್, ತಾಲೂಕು ಪಂಚಾಯತ್, ಗ್ರಾಮ ಪಂಚಾಯತ್, ನಗರ ಸ್ಥಳೀಯ ಸಂಸ್ಥೆಗಳು, 2028ರ ವಿಧಾನಸಭೆ ಹಾಗೂ 2029ರ ಲೋಕಸಭಾ ಚುನಾವಣೆಯನ್ನು ಕಾಂಗ್ರೆಸ್ ಗೆಲ್ಲಲಿದೆ’ ಎಂದು ಹೇಳಿದರು.






