ರಾಮ ಮಂದಿರ ನಿರ್ಮಾಣದ ದೇಣಿಗೆ ದುರುಪಯೋಗ ಆರೋಪ | ಪ್ರಧಾನಿ ಹಾಗೂ ಉತ್ತರಪ್ರದೇಶ ಸರಕಾರ ಸ್ಪಷ್ಟನೆ ನೀಡಬೇಕು : ಪ್ರಿಯಾಂಕ್ ಖರ್ಗೆ

ಬೆಂಗಳೂರು : ಅಯೋಧ್ಯೆಯ ರಾಮ ಮಂದಿರ ನಿರ್ಮಾಣಕ್ಕಾಗಿ ಸಂಗ್ರಹಿಸಲಾದ ದೇಣಿಗೆ ಹಣದ ದುರುಪಯೋಗದ ಆರೋಪಗಳ ಕುರಿತು ಪ್ರಧಾನಿ ನರೇಂದ್ರ ಮೋದಿ ಹಾಗೂ ಉತ್ತರ ಪ್ರದೇಶ ಸರಕಾರ ಮೌನ ಮುರಿದು ಸ್ಪಷ್ಟನೆ ನೀಡಬೇಕು ಎಂದು ಗೃಹ ಸಚಿವ ಪ್ರಿಯಾಂಕ್ ಖರ್ಗೆ ಆಗ್ರಹಿಸಿದರು.
ಶನಿವಾರ ನಗರದಲ್ಲಿರುವ ತಮ್ಮ ಗೃಹ ಕಚೇರಿಯಲ್ಲಿ ಸುದ್ದಿಗಾರರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ಸಾರ್ವಜನಿಕರಿಂದ ಸಂಗ್ರಹಿಸಲಾದ ದೇಣಿಗೆ ಹಣದ ಬಳಕೆಯ ಕುರಿತು ಸಂಪೂರ್ಣ ಪಾರದರ್ಶಕತೆ ಇರಬೇಕಿದ್ದು, ಸಂಬಂಧಿತ ಆರೋಪಗಳ ಬಗ್ಗೆ ಸಮಗ್ರ ತನಿಖೆ ನಡೆಸಿ ಸತ್ಯಾಂಶವನ್ನು ದೇಶದ ಜನರ ಮುಂದಿಡಬೇಕು. ಈ ವಿಷಯದಲ್ಲಿ ಜವಾಬ್ದಾರಿಯುತ ಪ್ರತಿಕ್ರಿಯೆ ನೀಡುವುದು ಕೇಂದ್ರ ಸರಕಾರದ ಕರ್ತವ್ಯ ಎಂದು ಹೇಳಿದರು.
ರಾಮ ಮಂದಿರದ ದೇಣಿಗೆ ದುರುಪಯೋಗದ ಕುರಿತು ಪ್ರಧಾನಿ ಎಂದಾದರೂ ಮನ್ ಕೀ ಬಾತ್ ನಲ್ಲಿ ಮಾತನಾಡಿದ್ದಾರೆಯೆ? ರಾಮ ಮಂದಿರದಲ್ಲಿ ಪ್ರಾಣ ಪ್ರತಿಷ್ಠಾಪನೆ ಹಾಗೂ ಉದ್ಘಾಟನೆ ನೆರವೇರಿಸಿದ್ದು ಪ್ರಧಾನಿಯೇ ಅಲ್ಲವೇ? ಮತ್ತೆ ಯಾಕೆ ಈ ವಿಚಾರದಲ್ಲಿ ಮೌನ ವಹಿಸಿದ್ದಾರೆ ಎಂದು ಪ್ರಿಯಾಂಕ್ ಖರ್ಗೆ ಪ್ರಶ್ನಿಸಿದರು.
ಬಿಡದಿ ಟೌನ್‍ಶಿಪ್ ವಿವಾದದ ಬಗ್ಗೆ ಪ್ರತಿಕ್ರಿಯಿಸಿದ ಅವರು, ನೀತಿ ಸಂಬಂಧಿತ ವಿಚಾರಗಳನ್ನ ಬೀದಿಯಲ್ಲಿ ಚರ್ಚೆ ಮಾಡುವ ಸಂಸ್ಕೃತಿ ಸರಿಯಲ್ಲ. ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಸ್ವತಃ ನಾನು ಬಿಡುವಾಗಿದ್ದೇನೆ. ಮುಖ್ಯಮಂತ್ರಿ ಕರೆದರೆ ಚರ್ಚೆಗೆ ಹೋಗುತ್ತೇನೆ ಎಂದು ಹೇಳಿಕೆ ನೀಡಿದ್ದರು. ಅದರಂತೆ, ಮುಖ್ಯಮಂತ್ರಿ ವಿಧಾನಸೌಧದಲ್ಲಿ ಚರ್ಚೆಗೆ ದಿನಾಂಕ ಹಾಗೂ ಸಮಯ ನಿಗದಿ ಮಾಡಿದ್ದರು ಎಂದು ಹೇಳಿದರು.
ಆದರೆ, ವಿಧಾನಸೌಧಕ್ಕೆ ಚರ್ಚೆಗೆ ಬಾರದ ಕುಮಾರಸ್ವಾಮಿ, ಈಗ ಬೈರಮಂಗಲಕ್ಕೆ ಬನ್ನಿ ಅಲ್ಲೆ ಚರ್ಚೆ ಮಾಡೋಣ ಎಂದು ಕರೆಯುವುದು ಎಷ್ಟು ಸಮಂಜಸ. ಸರಕಾರ ಚರ್ಚೆಗೆ ಆಹ್ವಾನಿಸಿದಾಗ ದಿನಾಂಕ ಸರಿಹೊಂದುವುದಿಲ್ಲ ಎನ್ನುವವರು, ಬಳಿಕ ಬೀದಿಯಲ್ಲಿ ಚರ್ಚೆ ನಡೆಸೋಣ ಎನ್ನುವುದು ಸರಿಯಲ್ಲ ಎಂದು ಪ್ರಿಯಾಂಕ್ ಖರ್ಗೆ ಟೀಕಿಸಿದರು.
ರೈತರು, ಕಾರ್ಮಿಕರು, ಮಹಿಳೆಯರು, ಯುವಕರು ಸೇರಿದಂತೆ ಯಾರದ್ದೇ ಸಮಸ್ಯೆಯಾದರೂ ಅದನ್ನು ಅಧಿಕೃತ ವೇದಿಕೆಯಲ್ಲಿ ಚರ್ಚಿಸುವುದು ಸೂಕ್ತ. ಬೀದಿಯಲ್ಲಿ ಚರ್ಚೆ ನಡೆಸುವ ಪ್ರವೃತ್ತಿ ಪ್ರಜಾಪ್ರಭುತ್ವದ ಸಂಪ್ರದಾಯಕ್ಕೆ ಹೊಂದಿಕೆಯಾಗುವುದಿಲ್ಲ ಎಂದು ಅವರು ಹೇಳಿದರು.
ಮುಖ್ಯಮಂತ್ರಿಯನ್ನು ಚರ್ಚೆಗಾಗಿ ಬೀದಿಗೆ ಆಹ್ವಾನಿಸುವ ಕುಮಾರಸ್ವಾಮಿ, ಸ್ವತಃ ತಾವೆ ಮುಖ್ಯಮಂತ್ರಿಯಾಗಿದ್ದಾಗ ಎಷ್ಟು ಬಾರಿ ವಿರೋಧ ಪಕ್ಷದವರ ಜೊತೆ ಬೀದಿಗೆ ಹೋಗಿ ಚರ್ಚೆ ಮಾಡಿದ್ದಾರೆ? ಅವರ ಹಿರಿತನ, ಅವರು ಅಲಂಕರಿಸಿದ ಹುದ್ದೆಗಳು, ಸ್ಥಾನಮಾನಕ್ಕೆ ಇಂತಹ ಪ್ರವೃತ್ತಿ ಶೋಭೆ ತರುವುದಿಲ್ಲ ಎಂದು ಪ್ರಿಯಾಂಕ್ ಖರ್ಗೆ ತಿಳಿಸಿದರು.






