ಆರೆಸ್ಸೆಸ್ ಯಾವ ಕಾನೂನಿನಡಿ ಅಸ್ತಿತ್ವದಲ್ಲಿದೆ : ಪ್ರಿಯಾಂಕ್ ಖರ್ಗೆ

ಬೆಂಗಳೂರು : ಆರೆಸ್ಸೆಸ್ ಅಸ್ತಿತ್ವದಲ್ಲಿದೆಯೇ ಎಂದು ಯಾರೂ ಪ್ರಶ್ನಿಸುತ್ತಿಲ್ಲ, ಅದು ಯಾವ ಕಾನೂನಿನ ಅಡಿಯಲ್ಲಿ ಅಸ್ತಿತ್ವದಲ್ಲಿದೆ ಮತ್ತು ಯಾವ ಕಾನೂನು ಗುರುತಿನ ಅಡಿಯಲ್ಲಿ ಕಾರ್ಯನಿರ್ವಹಿಸುತ್ತದೆಯೇ ಎಂದು ಪ್ರಶ್ನಿಸಲಾಗಿದೆ ಎಂದು ಗೃಹ ಸಚಿವ ಪ್ರಿಯಾಂಕ್ ಖರ್ಗೆ ಸ್ಪಷ್ಟಪಡಿಸಿದ್ದಾರೆ.
ರವಿವಾರ ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ‘ಬಿಜೆಪಿಯ ರಾಷ್ಟ್ರೀಯ ಸಂಘಟನಾ ಕಾರ್ಯಾದರ್ಶಿ ಎಲ್. ಸಂತೋಷ್’ ಅವರ ಹೇಳಿಕೆಗೆ ಉತ್ತರಿಸಿರುವ ಅವರು, ಆರೆಸ್ಸೆಸ್ ನೋಂದಣಿಯ ಅಗತ್ಯವಿಲ್ಲ ಎಂದಾದರೆ, ಆರೆಸ್ಸೆಸ್‍ನ ಕಾನೂನುಬದ್ಧ ಸ್ಥಾನಮಾನವೇನು, ಕಾನೂನುಬದ್ಧವಾಗಿ ಆರೆಸ್ಸೆಸ್ ಅನ್ನು ರಚಿಸುವವರು ಯಾರು, ಅದರ ಆಸ್ತಿಪಾಸ್ತಿಗಳ ಒಡೆತನ ಯಾರದ್ದು ಎಂದು ಪ್ರಶ್ನಿಸಿದ್ದಾರೆ.
ಯಾರ ಹೆಸರಿನಲ್ಲಿ ಆರೆಸ್ಸೆಸ್‍ನ ಬ್ಯಾಂಕ್ ಖಾತೆಗಳನ್ನು ನಿರ್ವಹಿಸಲಾಗುತ್ತದೆ, ಯಾವ ಚೌಕಟ್ಟಿನಡಿ ದೇಣಿಗೆಗಳನ್ನು ಸ್ವೀಕರಿಸಲಾಗುತ್ತದೆ ಮತ್ತು ಲೆಕ್ಕ ಇಡಲಾಗುತ್ತದೆ, ಅದರ ಲೆಕ್ಕಪರಿಶೋಧಿತ ಲೆಕ್ಕಪತ್ರಗಳು ಮತ್ತು ಶಾಸನಬದ್ಧ ವಿವರಗಳು ಎಲ್ಲಿವೆ? ಎಂದು ಪ್ರಿಯಾಂಕ್ ಖರ್ಗೆ ಪ್ರಶ್ನಿಸಿದ್ದಾರೆ.
ಭಾರತದ ಭವಿಷ್ಯವನ್ನು ರೂಪಿಸುವುದಾಗಿ ಹೇಳಿಕೊಳ್ಳುವ ಸಂಘಟನೆಯು ಸಾರ್ವಜನಿಕ ಹೊಣೆಗಾರಿಕೆಯನ್ನು ಸ್ಪಷ್ಟವಾಗಿ ಸ್ಥಾಪಿಸಲು ಏಕೆ ಹಿಂಜರಿಯುತ್ತದೆ ಎಂಬುದು ಪ್ರಮುಖ ಪ್ರಶ್ನೆಯಾಗಿದೆ ಎಂದು ಅವರು ಹೇಳಿದ್ದಾರೆ.






