ಮಂಗಳೂರು ಜಿಲ್ಲಾ ಕಾರಾಗೃಹ | ಜಾಮರ್‌ಗಳಿಂದ ಸಾರ್ವಜನಿಕರಿಗೆ ಆಗುತ್ತಿರುವ ತೊಂದರೆ ಬಗೆಹರಿಸಲು ಕ್ರಮ : ಪ್ರಿಯಾಂಕ್ ಖರ್ಗೆ

ಬೆಂಗಳೂರು : ಮಂಗಳೂರಿನ ಕೋಡಿಯಾಲಬೈಲ್ ಪ್ರದೇಶದಲ್ಲಿರುವ ಜಿಲ್ಲಾ ಕಾರಾಗೃಹದಲ್ಲಿ ಅಳವಡಿಸಿರುವ ಜಾಮರ್ ಗಳಿಂದ ಮೊಬೈಲ್ ನೆಟ್‍ವರ್ಕ್ ಸಿಗದೆ ಸಾರ್ವಜನಿಕರಿಗೆ ಆಗುತ್ತಿರುವ ತೊಂದರೆಗಳನ್ನು ಬಗೆಹರಿಸಲು ಕ್ರಮ ಕೈಗೊಳ್ಳಲಾಗಿದೆ ಎಂದು ಗೃಹ ಸಚಿವ ಪ್ರಿಯಾಂಕ್ ಖರ್ಗೆ ತಿಳಿಸಿದ್ದಾರೆ.
ಮಂಗಳವಾರ ವಿಧಾನಸಭೆಯ ಪ್ರಶ್ನೋತ್ತರ ಕಲಾಪದಲ್ಲಿ ಬಿಜೆಪಿ ಸದಸ್ಯ ವೇದವ್ಯಾಸ ಕಾಮತ್ ಕೇಳಿದ್ದ ಪ್ರಶ್ನೆಗೆ ಲಿಖಿತ ಉತ್ತರ ನೀಡಿರುವ ಅವರು, ಮಂಗಳೂರು ಜಿಲ್ಲಾ ಕಾರಾಗೃಹದಲ್ಲಿ ಐದು ಮೊಬೈಲ್ ಜಾಮರ್ ಗಳನ್ನು ದುರಸ್ಥಿ ಮತ್ತು 4ಜಿ/5ಜಿಗೆ ಮೇಲ್ದರ್ಜೆಗೇರಿಸುವ ಕಾರ್ಯವು ಮುಕ್ತಾಯವಾಗಿದ್ದು, ಈ ಕಾರ್ಯವನ್ನು ಮೆ.ಟೆಲಿಕಮ್ಯೂನಿಕೇಷನ್ಸ್ ಕನ್ಸಲ್ಟಂಟ್ಸ್ ಇಂಡಿಯಾ ಲಿಮಿಟೆಡ್ ನವರು ಕೈಗೊಂಡಿದ್ದರು ಎಂದು ಹೇಳಿದ್ದಾರೆ.
ಕಾರಾಗೃಹದ ಸುತ್ತಮುತ್ತಲಿನ ಸಾರ್ವಜನಿಕರಿಗೆ ಮತ್ತು ಕಾರಾಗೃಹದ ಭದ್ರತೆಗೆ ತೊಂದರೆಯಾಗದಂತೆ ನೆಟ್‍ವರ್ಕ್ ಕುರಿತಂತೆ ಉಂಟಾಗುವ ಸಮಸ್ಯೆಗಳನ್ನು ಪರಿಹರಿಸಲು ಕ್ರಮ ಕೈಗೊಳ್ಳುವಂತೆ ಈಗಾಗಲೆ ಆ ಸಂಸ್ಥೆಯವರಿಗೆ ಸೂಚನೆ ನೀಡಲಾಗಿದೆ. ಅಲ್ಲದೇ, ಸಾರ್ವಜನಿಕರಿಗೆ ಮೊಬೈಲ್ ನೆಟ್‍ವರ್ಕ್ ಸಿಗದೆ ತೊಂದರೆ ಆಗುತ್ತಿರುವ ಬಗ್ಗೆ ಚರ್ಚಿಸಲು ಮೊಬೈಲ್ ನೆಟ್‍ವರ್ಕ್ ಸೇವಾ ಸಂಸ್ಥೆಗಳ ಅಧಿಕಾರಿಗಳು ಮತ್ತು ದೂರಸಂಪರ್ಕ ಇಲಾಖೆಯ ಅಧಿಕಾರಿಗಳೊಂದಿಗೆ ಸಭೆಗಳನ್ನು ನಡೆಸಲಾಗಿದೆ ಎಂದು ಪ್ರಿಯಾಂಕ್ ಖರ್ಗೆ ತಿಳಿಸಿದ್ದಾರೆ.
ಕಾರಾಗೃಹಗಳಲ್ಲಿ ಯಾವುದೆ ಕಾರಣಕ್ಕೂ ಮೊಬೈಲ್ ಸಿಗ್ನಲ್ ದೊರೆಯದಂತೆ ಜಾಮರ್ ಗಳು ಸಂಪೂರ್ಣ ಕಾರ್ಯಕ್ಷಮತೆ ಹೊಂದಿರಬೇಕು ಹಾಗೂ ಸಾರ್ವಜನಿಕರಿಗೆ ಜಾಮರ್ ಗಳ ಪ್ರಭಾವದಿಂದ ತೊಂದರೆ ಉಂಟಾಗಬಾರದು ಎಂದು ಸೂಚನೆಗಳನ್ನು ನೀಡಲಾಗಿದೆ ಎಂದು ಅವರು ಹೇಳಿದ್ದಾರೆ.
ದೂರಸಂಪರ್ಕ ಇಲಾಖೆಯ ಅಧಿಕಾರಿಗಳು ಹಾಗೂ ಎಲ್ಲ ಮೊಬೈಲ್ ನೆಟ್‍ವರ್ಕ್ ಸೇವಾ ಸಂಸ್ಥೆಗಳ ಅಧಿಕಾರಿಗಳು ಕಾಲಕಾಲಕ್ಕೆ ಜಂಟಿ ಸರ್ವೆ ಕೈಗೊಂಡು ಕಾರಾಗೃಹದಲ್ಲಿನ ಜಾಮರ್ ಗಳಿಂದ ಹೊರಭಾಗದ ಸಾರ್ವಜನಿಕರಿಗೆ ನೆಟ್‍ವರ್ಕ್ ಸಿಗ್ನಲ್‍ಗಳ ಸಮಸ್ಯೆಯಾಗುತ್ತಿರುವುದನ್ನು ಪರಿಹರಿಸಲು ಅಗತ್ಯ ಕ್ರಮ ಕೈಗೊಳ್ಳುತ್ತಿದ್ದಾರೆ ಎಂದು ಪ್ರಿಯಾಂಕ್ ಖರ್ಗೆ ತಿಳಿಸಿದ್ದಾರೆ.






