ನನ್ನ ಮೇಲೂ ಈ.ಡಿ. ದಾಳಿಯಾಗುವ ಸಾಧ್ಯತೆ ಇದೆ : ಪ್ರಿಯಾಂಕ್ ಖರ್ಗೆ
"ಕೇಂದ್ರ ತನಿಖಾ ಸಂಸ್ಥೆಗಳು ವಿಪಕ್ಷದವರಿಗೆ ಕಿರುಕುಳ ನೀಡಲು ಮಾತ್ರ ಸೀಮಿತವಾಗಿದೆ"

ಬೆಂಗಳೂರು : ಭಾರತೀಯರು ದೇಶದಲ್ಲಿ ಮತ್ತು ವಿದೇಶದಲ್ಲಿ ಹೂಡಿಕೆ ಮಾಡುವಂತಾಗಬೇಕು ಎಂದು ಪ್ರಧಾನಿ ನರೇಂದ್ರ ಮೋದಿಯವರೇ ಕರೆ ನೀಡಿದ್ದಾರೆ. ಅದೇ ರೀತಿ ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ವಿದೇಶದಲ್ಲಿ ಹೂಡಿಕೆ ಮಾಡಲು ಪ್ರಯತ್ನಿಸುತ್ತಿರುವುದಾಗಿ ಹೇಳಿದ್ದಾರೆ. ಕಾಂಗೋ ಅಥವಾ ಕೆನಡಾ ಸೇರಿ ಎಲ್ಲಿಯೇ ಆಗಲಿ ಹೂಡಿಕೆ ಮಾಡುವುದರಲ್ಲಿ ತಪ್ಪೇನು ಎಂದು ಗೃಹ ಸಚಿವ ಪ್ರಿಯಾಂಕ್ ಖರ್ಗೆ ಪ್ರಶ್ನಿಸಿದ್ದಾರೆ.
ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ.ಡಿ. ಅಧಿಕಾರಿಗಳು ಅನಗತ್ಯವಾಗಿ ಪತ್ರಿಕಾ ಹೇಳಿಕೆ ನೀಡಿ ಗೊಂದಲ ಮೂಡಿಸುವ ಪ್ರಯತ್ನ ಮಾಡುತ್ತಿದ್ದಾರೆ. ಲಂಚ ಪಡೆದು ವಿದೇಶದಲ್ಲಿ ಹೂಡಿಕೆ ಮಾಡಿದ್ದಾರೆ ಎಂದು ಆರೋಪ ಮಾಡಿರುವುದರಲ್ಲಿ ಹುರುಳಿಲ್ಲ. ಜಾರಿ ನಿರ್ದೇಶನಾಲಯ ತಾನು ಮಾಡಿದ ಆರೋಪಕ್ಕೆ ದಾಖಲೆ ನೀಡಲಿ ಎಂದು ಹೇಳಿದರು.
ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಎಷ್ಟು ಬಾರಿ ವಿದೇಶ ಪ್ರವಾಸ ಮಾಡಿದ್ದಾರೆ ಮತ್ತು ಎಷ್ಟು ಬಂಡವಾಳ ಹೂಡಿಕೆ ಮಾಡಿದ್ದಾರೆ ಎಂದು ಬಿಜೆಪಿ ಉಚ್ಚಾಟಿತ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹಲವು ಬಾರಿ ಹೇಳಿದ್ದಾರೆ. ನಾವು ನಮ್ಮ ಪಾಸ್ ಪೋರ್ಟ್‍ಗಳನ್ನು ನೀಡಲು ಸಿದ್ಧರಿದ್ದೇವೆ. ಬಿಜೆಪಿಯವರು ತಮ್ಮ ಪಾಸ್‍ಪೋರ್ಟ್‍ಗಳನ್ನು ಪರಿಶೀಲಿಸಲು ಕೊಡುತ್ತಾರೆಯೇ ಎಂದು ಅವರು ಸವಾಲು ಹಾಕಿದರು.
ನನ್ನ ಮೇಲೂ ಈ.ಡಿ. ದಾಳಿಯಾಗುವ ಸಾಧ್ಯತೆ ಇದೆ. ಕೇಂದ್ರ ತನಿಖಾ ಸಂಸ್ಥೆಗಳು ವಿರೋಧ ಪಕ್ಷದವರಿಗೆ ಕಿರುಕುಳ ನೀಡಲು ಮಾತ್ರ ಸೀಮಿತವಾಗಿದೆ. ರಾಜಕೀಯ ಆರೋಪ ಮಾಡುವುದು, ಚಾರಿತ್ರ್ಯ ಹರಣ ಮಾಡುವುದು ಅವರ ಉದ್ದೇಶವಾಗಿದೆ. ಉಳಿದಂತೆ ಯಾವುದನ್ನೂ ಅವರು ಸಾಬೀತುಪಡಿಸಿಲ್ಲ ಎಂದು ಅವರು ಹೇಳಿದರು.






