ತಾಲೂಕು ಮಟ್ಟದಲ್ಲಿ ಅಗ್ನಿಶಾಮಕ ಠಾಣೆಗಳ ಸ್ಥಾಪನೆಗೆ ಕ್ರಮ : ಸಚಿವ ಪ್ರಿಯಾಂಕ್ ಖರ್ಗೆ

ಬೆಂಗಳೂರು : ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ಇಲಾಖೆಯನ್ನು ಅಭಿವೃದ್ಧಿಪಡಿಸಲು ರಾಜ್ಯ ಸರಕಾರ ಬದ್ಧವಾಗಿದ್ದು, ಎಲ್ಲ ತಾಲೂಕುಗಳು ಹಾಗೂ ಪ್ರಮುಖ ಹೋಬಳಿ ಮಟ್ಟದಲ್ಲಿ ಅಗ್ನಿಶಾಮಕ ಠಾಣೆಗಳನ್ನು ಸ್ಥಾಪಿಸಲು ಯೋಜನೆ ರೂಪಿಸಲಾಗಿದೆ ಎಂದು ಗೃಹ ಸಚಿವ ಪ್ರಿಯಾಂಕ್ ಖರ್ಗೆ ಭರವಸೆ ನೀಡಿದ್ದಾರೆ.
ಗುರುವಾರ ನಗರದ ಬನ್ನೇರುಘಟ್ಟ ರಸ್ತೆಯಲ್ಲಿರುವ ಡಾ.ಬಿ.ಆರ್.ಅಂಬೇಡ್ಕರ್ ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ಅಕಾಡೆಮಿಯಲ್ಲಿ ಆಯೋಜಿಸಲಾಗಿದ್ದ 2ನೇ ಅಖಿಲ ಭಾರತ ಅಗ್ನಿಶಾಮಕ ಸೇವೆಗಳ ಕ್ರೀಡಾಕೂಟ–2026ರ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡಿದರು.
ದೇಶದ ಪ್ರತಿಯೊಂದು ತಾಲೂಕಿನಲ್ಲೂ ಅಗ್ನಿಶಾಮಕ ಠಾಣೆಗಳನ್ನು ಸ್ಥಾಪಿಸುವ ಕೇಂದ್ರ ಸರಕಾರದ ಆಶಯದಂತೆ, ಕರ್ನಾಟಕದಲ್ಲಿಯೂ ಎಲ್ಲ ತಾಲೂಕು ಹಾಗೂ ಪ್ರಮುಖ ಹೋಬಳಿ ಮಟ್ಟದಲ್ಲಿ ಅಗ್ನಿಶಾಮಕ ಠಾಣೆಗಳನ್ನು ಸ್ಥಾಪಿಸಲಾಗುವುದು. ಇದರಿಂದ ಅಗ್ನಿ ಅವಘಡಗಳು ಮತ್ತು ಇತರ ತುರ್ತು ಸಂದರ್ಭಗಳಲ್ಲಿ ಜನರಿಗೆ ತ್ವರಿತವಾಗಿ ನೆರವು ಒದಗಿಸಲು ಸಾಧ್ಯವಾಗಲಿದೆ ಎಂದು ಅವರು ತಿಳಿಸಿದರು.
ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ಸಿಬ್ಬಂದಿ ಹಗಲು-ರಾತ್ರಿ ಎನ್ನದೆ ಜನರ ಜೀವ ಹಾಗೂ ಆಸ್ತಿಪಾಸ್ತಿಗಳ ರಕ್ಷಣೆಗಾಗಿ ಶ್ರಮಿಸುತ್ತಿದ್ದಾರೆ. ಅಪಾಯಕಾರಿ ಸಂದರ್ಭಗಳಲ್ಲಿ ಧೈರ್ಯ, ದೈಹಿಕ ಸಾಮಥ್ರ್ಯ, ಸಮಯಪ್ರಜ್ಞೆ ಮತ್ತು ತಂಡವಾಗಿ ಕಾರ್ಯನಿರ್ವಹಿಸುವ ಮೂಲಕ ಸಾರ್ವಜನಿಕರ ಸುರಕ್ಷತೆಯನ್ನು ಖಚಿತಪಡಿಸುವ ಈ ಸಿಬ್ಬಂದಿಯ ಸೇವೆ ಮಹತ್ವದ್ದಾಗಿದೆ. ಇಲಾಖೆಗೆ ಅಗತ್ಯವಿರುವ ಸೌಲಭ್ಯಗಳು, ಮೂಲಸೌಕರ್ಯ ಹಾಗೂ ಆರ್ಥಿಕ ನೆರವು ಒದಗಿಸುವ ಮೂಲಕ ಅದರ ಕಾರ್ಯನಿರ್ವಹಣೆಯನ್ನು ಮತ್ತಷ್ಟು ಬಲಪಡಿಸಲಾಗುವುದು ಎಂದು ಅವರು ಹೇಳಿದರು.
ಕ್ರೀಡೆಯು ಇತರರೊಂದಿಗೆ ಸ್ಪರ್ಧಿಸುವುದಕ್ಕೆ ಮಾತ್ರ ಸೀಮಿತವಾಗಿಲ್ಲ. ನಮ್ಮದೇ ಸಾಮಥ್ರ್ಯವನ್ನು ಹಿಂದಿನ ದಿನಕ್ಕಿಂತ ಉತ್ತಮಗೊಳಿಸಿಕೊಳ್ಳುವ ಪ್ರಯತ್ನವೂ ಕ್ರೀಡೆಯ ಪ್ರಮುಖ ಪಾಠವಾಗಿದೆ. ಎಲ್ಲ ಕ್ರೀಡಾಪಟುಗಳು ಶಿಸ್ತು ಪಾಲಿಸಿ, ಸ್ಪರ್ಧಿಗಳನ್ನು ಗೌರವಿಸಿ, ಉತ್ಸಾಹದಿಂದ ಸ್ಪರ್ಧಿಸುವ ಮೂಲಕ ಕ್ರೀಡಾಕೂಟದ ಉದ್ದೇಶವನ್ನು ಸಾರ್ಥಕಗೊಳಿಸಬೇಕು ಎಂದು ಅವರು ಕರೆ ನೀಡಿದರು.
ಸಮಾರಂಭದಲ್ಲಿ ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ಪೊಲೀಸ್ ಮಹಾನಿರ್ದೇಶಕ ಪ್ರಶಾಂತ್ ಕುಮಾರ್ ಠಾಕೂರ್, ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ ಎಂ. ನಂಜುಂಡಸ್ವಾಮಿ, ಉಪ ಮಹಾನಿರ್ದೇಶಕಿ ರೇಣುಕಾ ಕೆ. ಸುಕುಮಾರ್, ಅಗ್ನಿಶಾಮಕ ಸಲಹೆಗಾರ ಪ್ರಶಾಂತ್ ಲೋಂಕರ್, ಉಪ ಅಗ್ನಿಶಾಮಕ ಸಲಹೆಗಾರ ಮೋರೆಶ್ವರ್ ಸೇರಿದಂತೆ ಹಿರಿಯ ಅಧಿಕಾರಿಗಳು ಹಾಗೂ ದೇಶದ ವಿವಿಧ ರಾಜ್ಯಗಳಿಂದ ಆಗಮಿಸಿದ್ದ ಕ್ರೀಡಾಪಟುಗಳು ಉಪಸ್ಥಿತರಿದ್ದರು.






