ಕ್ಷೇತ್ರಗಳ ಪುನರ್ವಿಂಗಡಣೆ ಪ್ರಸ್ತಾವ ಅವೈಜ್ಞಾನಿಕ, ರಾಜಕೀಯ ಲಾಭದ ಉದ್ದೇಶ ಹೊಂದಿದೆ : ಪ್ರಿಯಾಂಕ್ ಖರ್ಗೆ

ಕಲಬುರಗಿ : ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರ ಉದ್ದೇಶಿಸಿರುವ ಲೋಕಸಭಾ ಕ್ಷೇತ್ರಗಳ ಪುನರ್ವಿಂಗಡಣೆ (ಡಿಲಿಮಿಟೇಶನ್) ಪ್ರಸ್ತಾವ ಅವೈಜ್ಞಾನಿಕವಾಗಿದ್ದು, ರಾಜಕೀಯ ಲಾಭದ ಉದ್ದೇಶ ಹೊಂದಿದೆ. ಜನಸಂಖ್ಯೆ ಆಧಾರದಲ್ಲಿ ಕ್ಷೇತ್ರಗಳ ಪುನರ್ವಿಂಗಡಣೆ ಮಾಡಿದರೆ ಜನಸಂಖ್ಯೆ ನಿಯಂತ್ರಣ, ಶಿಕ್ಷಣ, ಆರೋಗ್ಯ ಹಾಗೂ ಆರ್ಥಿಕ ಅಭಿವೃದ್ಧಿಯಲ್ಲಿ ಮುಂಚೂಣಿಯಲ್ಲಿರುವ ದಕ್ಷಿಣ ಭಾರತದ ರಾಜ್ಯಗಳಿಗೆ ರಾಜಕೀಯ ಪ್ರಾತಿನಿಧ್ಯದಲ್ಲಿ ಅನ್ಯಾಯವಾಗಲಿದೆ ಎಂದು ಗೃಹ, ಐಟಿಬಿಟಿ ಹಾಗೂ ಇ-ಆಡಳಿತ ಸಚಿವ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಆರೋಪಿಸಿದರು.
ನಗರದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರಧಾನಿ ಮೋದಿ ಅವರಿಗೆ ಸೋಲಿನ ಭಯ ಕಾಡುತ್ತಿದೆ. ಹೀಗಾಗಿ ಕ್ಷೇತ್ರಗಳ ಪುನರ್ವಿಂಗಡಣೆ ಮೂಲಕ ಮತ್ತೆ ಅಧಿಕಾರಕ್ಕೆ ಬರುವ ಪ್ರಯತ್ನ ನಡೆಸುತ್ತಿದ್ದಾರೆ. ಅಧಿಕಾರದಲ್ಲಿ ಮುಂದುವರಿದುಕೊಂಡು ರಾಜಕೀಯ ಲಾಭ ಪಡೆಯುವ ಉದ್ದೇಶದಿಂದ ಇಂತಹ ಮಸೂದೆಗಳನ್ನು ತರಲಾಗುತ್ತಿದೆ ಎಂದು ಟೀಕಿಸಿದರು.
ಉತ್ತರ ಭಾರತದಲ್ಲಿ ಈಗಾಗಲೇ ಲೋಕಸಭಾ ಸ್ಥಾನಗಳ ಸಂಖ್ಯೆ ಹೆಚ್ಚಿದೆ. ಜನಸಂಖ್ಯೆ ಆಧಾರದಲ್ಲಿ ಕ್ಷೇತ್ರಗಳ ಪುನರ್ವಿಂಗಡಣೆ ಮಾಡಿದರೆ ದಕ್ಷಿಣ ಭಾರತದ ರಾಜ್ಯಗಳ ಪ್ರಾತಿನಿಧ್ಯಕ್ಕೆ ಧಕ್ಕೆಯಾಗಲಿದೆ. ಪ್ರಸ್ತುತ 543 ಲೋಕಸಭಾ ಸ್ಥಾನಗಳಿದ್ದರೂ ಜನರ ಸಮಸ್ಯೆಗಳಿಗೆ ಸಮರ್ಪಕವಾಗಿ ಸ್ಪಂದಿಸಲು ಸಾಧ್ಯವಾಗುತ್ತಿಲ್ಲ. ಸ್ಥಾನಗಳ ಸಂಖ್ಯೆಯನ್ನು 800 ಅಥವಾ 900ಕ್ಕೆ ಹೆಚ್ಚಿಸುವುದರಿಂದ ಏನು ಪ್ರಯೋಜನವಾಗಲಿದೆ ಎಂದು ಪ್ರಶ್ನಿಸಿದರು.
ಮಸೂದೆಯ ಸಂಪೂರ್ಣ ವಿವರವನ್ನು ಇನ್ನೂ ಪರಿಶೀಲಿಸಿಲ್ಲ. ಆದರೆ ಮೇಲ್ನೋಟಕ್ಕೆ ಹಲವು ಗಂಭೀರ ಆಕ್ಷೇಪಗಳಿವೆ. ಶೇ.50ರಷ್ಟು ಸ್ಥಾನ ಹೆಚ್ಚಿಸುವ ಪ್ರಸ್ತಾವ ಜಾರಿಯಾದರೆ ಲೋಕಸಭಾ ಸ್ಥಾನಗಳ ಸಂಖ್ಯೆ ಸುಮಾರು 850ಕ್ಕೆ ಏರಿಕೆಯಾಗಲಿದೆ. ಇದರಿಂದ ಜನರಿಗೆ ಆಗುವ ಪ್ರಯೋಜನಗಳೇನು ಎಂಬುದನ್ನು ಕೇಂದ್ರ ಸರ್ಕಾರ ಸ್ಪಷ್ಟಪಡಿಸಬೇಕು ಎಂದರು.
ಕ್ಷೇತ್ರಗಳ ಗಡಿ ನಿರ್ಧಾರದಲ್ಲಿ ಸರಕಾರದ ಪ್ರಭಾವಕ್ಕೆ ಅವಕಾಶವಿರಬಾರದು. ಭೌಗೋಳಿಕ ಸ್ಥಿತಿ, ಆಡಳಿತಾತ್ಮಕ ಅನುಕೂಲ ಹಾಗೂ ಸಾಮಾಜಿಕ ನ್ಯಾಯದ ಅಂಶಗಳನ್ನು ಪರಿಗಣಿಸಬೇಕು. ಡಿಲಿಮಿಟೇಶನ್ ಆಯೋಗದ ರಚನೆ, ಸದಸ್ಯರ ಅಧಿಕಾರ ಮತ್ತು ಮತದಾನದ ಹಕ್ಕುಗಳ ಬಗ್ಗೆ ಸ್ಪಷ್ಟತೆ ಇರಬೇಕು. ಮುಖ್ಯ ಚುನಾವಣಾ ಆಯುಕ್ತರಿಗೆ ಆಯೋಗದಲ್ಲಿ ಮತದಾನದ ಹಕ್ಕು ನೀಡುವ ಪ್ರಸ್ತಾಪವೂ ಹಲವು ಪ್ರಶ್ನೆಗಳನ್ನು ಹುಟ್ಟುಹಾಕಿದೆ. ಚುನಾವಣಾ ಆಯೋಗದ ಮುಖ್ಯಸ್ಥರ ಆಯ್ಕೆ ಪ್ರಕ್ರಿಯೆಯಲ್ಲೇ ಬದಲಾವಣೆ ಮಾಡಿರುವಾಗ, ಅದೇ ಸಂಸ್ಥೆಯ ಮುಖ್ಯಸ್ಥರಿಗೆ ಕ್ಷೇತ್ರ ಪುನರ್ವಿಂಗಡಣೆಯಲ್ಲಿ ನಿರ್ಣಾಯಕ ಪಾತ್ರ ನೀಡುವುದು ಎಷ್ಟು ಸೂಕ್ತ ಎಂದು ಪ್ರಶ್ನಿಸಿದರು.
2011ರ ಜನಗಣತಿ ಆಧಾರದಲ್ಲಿ ಕ್ಷೇತ್ರ ಪುನರ್ವಿಂಗಡಣೆಗೆ ಕೇಂದ್ರ ಸರಕಾರ ಈಗ ಆತುರ ತೋರುತ್ತಿರುವುದೇಕೆ ಎಂಬುದನ್ನು ತಿಳಿಸಬೇಕು. ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಹಿಂದುಳಿದ ವರ್ಗಗಳು ಹಾಗೂ ಮಹಿಳೆಯರ ರಾಜಕೀಯ ಪ್ರಾತಿನಿಧ್ಯವನ್ನು ಯಾವ ಮಾನದಂಡದಲ್ಲಿ ನಿರ್ಧರಿಸಲಾಗುತ್ತದೆ ಎಂಬುದನ್ನು ಸ್ಪಷ್ಟಪಡಿಸಬೇಕು ಎಂದು ಆಗ್ರಹಿಸಿದರು.
ಆಳಂದ ವೋಟ್ ಚೋರಿ ಬಗ್ಗೆ ರಾಜನಾಥ್ ಸಿಂಗ್ ಮಾತನಾಡಲಿ :
ಮತದಾರರ ಪಟ್ಟಿಗೆ ಸಂಬಂಧಿಸಿದಂತೆ ಈಗಾಗಲೇ ಹಲವು ವಿವಾದಗಳು ಸೃಷ್ಟಿಯಾಗಿವೆ. ಆಳಂದ ಮತ್ತು ಚಿತ್ತಾಪುರ ಕ್ಷೇತ್ರಗಳಲ್ಲಿ ಎಸ್‌ಐಆರ್ ಪ್ರಕ್ರಿಯೆಗೆ ಸಂಬಂಧಿಸಿದಂತೆ ದೂರುಗಳು ದಾಖಲಾಗಿವೆ. ಆಳಂದದಲ್ಲಿ ನಡೆದ ಮತಗಳ ಅಳಿಸುವಿಕೆ ಪ್ರಕರಣದ ಕುರಿತು ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಮಾತನಾಡಬೇಕು ಎಂದರು.
ಭೀಮಾ ನದಿ ನೀರು ಬಿಡುಗಡೆಗೆ ಕಾನೂನು ಹೋರಾಟ :
ಬೆಳಗಾವಿ ಅಧಿವೇಶನದಲ್ಲಿ ಕೇವಲ ಟೀಕೆ-ಟಿಪ್ಪಣಿಗಳಿಗೆ ಸೀಮಿತವಾಗದೆ, ಜನರ ಸಮಸ್ಯೆಗಳ ಕುರಿತು ಅರ್ಥಪೂರ್ಣ ಚರ್ಚೆಗಳು ನಡೆಯಬೇಕು ಎಂದು ಆಶಿಸಿದರು.
ಭೀಮಾ ನದಿಗೆ ನೀರು ಬಿಡುಗಡೆ ಮಾಡುವಂತೆ ಮುಖ್ಯಮಂತ್ರಿ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಲಾಗಿದೆ. ಈ ಸಂಬಂಧ ಪತ್ರ ಬರೆಯಲಾಗಿದ್ದು, ಮುಖ್ಯ ಕಾರ್ಯದರ್ಶಿಯೂ ಮಹಾರಾಷ್ಟ್ರದ ಅಧಿಕಾರಿಗಳೊಂದಿಗೆ ಮಾತುಕತೆ ನಡೆಸಿದ್ದಾರೆ. ಮಹಾರಾಷ್ಟ್ರ ಸರಕಾರದೊಂದಿಗೆ ನಿರಂತರ ಸಂಪರ್ಕದಲ್ಲಿದ್ದು, ರಾಜ್ಯದ ಹಿತಾಸಕ್ತಿ ಕಾಪಾಡಲು ಒಗ್ಗಟ್ಟಿನಿಂದ ಕಾನೂನು ಹೋರಾಟ ನಡೆಸಲಾಗುತ್ತಿದೆ ಎಂದರು.
ಮಹಾರಾಷ್ಟ್ರ ಸರಕಾರ ಕೈಗೊಳ್ಳುತ್ತಿರುವ ಸಾವಿರಾರು ಕೋಟಿ ರೂಪಾಯಿಗಳ ನೀರಾವರಿ ಯೋಜನೆಗಳು ಕರ್ನಾಟಕಕ್ಕೆ ಮಾರಕವಾಗುವ ಆತಂಕವಿದೆ. ಇಂತಹ ಯೋಜನೆಗಳನ್ನು ವಿರೋಧಿಸಿ ರಾಜ್ಯದ ಹಿತಾಸಕ್ತಿ ರಕ್ಷಿಸಲು ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಪ್ರಿಯಾಂಕ್ ಖರ್ಗೆ ತಿಳಿಸಿದರು.






