ಕಲ್ಯಾಣ ಕರ್ನಾಟಕದ ಅಭಿವೃದ್ಧಿಗೆ ಮೀಸಲಾಗಿದ್ದ ಹಣವನ್ನು ಹಿಂದಿನ ಬಿಜೆಪಿ ಸರಕಾರ ಆರೆಸ್ಸೆಸ್ ಉಪಯೋಗಕ್ಕೆ ಬಳಸಿತ್ತು: ಪ್ರಿಯಾಂಕ್ ಖರ್ಗೆ ಆರೋಪ

ಸಚಿವ ಪ್ರಿಯಾಂಕ್ ಖರ್ಗೆ (Photo: PTI)
ಬೆಳಗಾವಿ: ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿಯ ಹಣವನ್ನು ಆರೆಸ್ಸೆಸ್ ಮತ್ತು ಅದರ ಅಂಗ ಸಂಸ್ಥೆಗಳ ಉಪಯೋಗಕ್ಕೆ ಹಿಂದಿನ ಬಿಜೆಪಿ ಸರಕಾರ ಬಳಸಿತ್ತು ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಪ್ರಿಯಾಂಕ್ ಖರ್ಗೆ ಆರೋಪಿಸಿದ್ದಾರೆ.
ಶುಕ್ರವಾರ ಸಾಮಾಜಿಕ ಜಾಲತಾಣ ಫೇಸ್ ಬುಕ್ ನಲ್ಲಿ ಪೋಸ್ಟ್ ಹಾಕಿರುವ ಅವರು, ಹಿಂದಿನ ಸರಕಾರವು ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿ ಅಡಿಯಲ್ಲಿ ಕಲ್ಯಾಣ ಕರ್ನಾಟಕ ಮಾನವ ಸಂಪನ್ಮೂಲ, ಕೃಷಿ ಮತ್ತು ಸಾಂಸ್ಕೃತಿಕ ಸಂಘ ಎಂಬ ಸಾಂವಿಧಾನಿಕ ಸಂಸ್ಥೆಯನ್ನು ರಚಿಸಿತ್ತು. ಇದು 500 ಕೋಟಿ ರೂ. ಬಜೆಟ್ನೊಂದಿಗೆ ಮಾನವ ಸಂಪನ್ಮೂಲವನ್ನು ಅಭಿವೃದ್ಧಿಪಡಿಸುವ ಉದ್ದೇಶವನ್ನು ಹೊಂದಿತ್ತು ಎಂದು ತಿಳಿಸಿದ್ದಾರೆ.
ಆದರೆ ವಾಸ್ತವದಲ್ಲಿ, ಈ ಪ್ರದೇಶದ ಅಭಿವೃದ್ಧಿಗೆ ಮೀಸಲಾದ ಹಣವನ್ನು ಆರೆಸ್ಸೆಸ್ ಮತ್ತು ಅದರ ಅಂಗಸಂಸ್ಥೆಗಳ ಉಪಯೋಗಕ್ಕಾಗಿ ಬಳಸಲಾಗಿತ್ತು. ಈ ಮೂಲಕ 322 ಕೋಟಿ ರೂ.ಗಳಿಗೂ ಹೆಚ್ಚು ಹಣವನ್ನು ದುರುಪಯೋಗಪಡಿಸಿಕೊಳ್ಳಲಾಗಿದೆ ಎಂದು ವರದಿಗಳು ಹೇಳುತ್ತವೆ ಎಂದು ಪ್ರಿಯಾಂಕ್ ಖರ್ಗೆ ತಿಳಿಸಿದ್ದಾರೆ.
ವಿವರ: ಬಹುಶಃ ಇದು ಆ ಅವಧಿಯಲ್ಲಿ ರಾಜ್ಯದಲ್ಲಿ ನಡೆದ ಅತಿದೊಡ್ಡ ಹಗರಣ / ವಂಚನೆ / ದುರುಪಯೋಗ / ಭ್ರಷ್ಟಾಚಾರ. ಬಿಜೆಪಿಗರು 5 ತಾಲೂಕುಗಳನ್ನು ಅನಧಿಕೃತವಾಗಿ 8ನೆ ಜಿಲ್ಲೆಯಂತೆ ಪರಿಗಣಿಸಿದ್ದರು. ಅಷ್ಟೇ ಅಲ್ಲದೆ, ಮನಬಂದಂತೆ ಹಣವನ್ನು ಹಂಚಿಕೆ ಮಾಡಿದ್ದರು ಎಂದು ಅವರು ದೂರಿದ್ದಾರೆ.
ಸಮಾಜವು ರಾಜ್ಯ ಸರಕಾರದಿಂದ ಯಾವುದೇ ಅನುಮತಿ ಅಥವಾ ಮಾಹಿತಿಯಿಲ್ಲದೆ ಸಂಪೂರ್ಣವಾಗಿ ಕಾನೂನು ಬಾಹಿರವಾದ ಎಂಟನೆ ಘಟಕವಾಗಿ - "ಕಲಬುರಗಿ-ಸೇಡಂ ಉಪ ಪ್ರದೇಶ" ಸೃಷ್ಟಿಸಿತು. ಮತ್ತು ಸೇಡಂ ತಾಲೂಕು ಹಾಗೂ ಇತರ 4 ತಾಲೂಕುಗಳನ್ನು ಕಾನೂನುಬಾಹಿರವಾಗಿ ಕಲ್ಯಾಣ ಕರ್ನಾಟಕ ಪ್ರದೇಶದ 8 ನೆ ಜಿಲ್ಲೆಯಂತೆ ಪರಿಗಣಿಸಿತು ಎಂದು ಅವರು ಹೇಳಿದ್ದಾರೆ.
ಈ ವೇಳೆ ನಡೆದ ಹಣಕಾಸಿನ ಹಂಚಿಕೆಗಳಲ್ಲಿ, ಕಲ್ಯಾಣ ಕರ್ನಾಟಕ ಪ್ರದೇಶದ ಇತರ ಏಳು ಜಿಲ್ಲೆಗಳಲ್ಲಿ ಕೆಲವು ಜಿಲ್ಲೆಗಳಿಗೆ ಮಾಡಲಾದ ಹಂಚಿಕೆಗಿಂತಲೂ ಆ ಉಪ-ಪ್ರದೇಶಕ್ಕೆ ಅಧಿಕ ಮೊತ್ತ ಸಂದಾಯವಾಗಿದೆ. ಇಂದು, ಅದೇ ಬಿಜೆಪಿ ನಾಯಕರು ಬೆಳಗಾವಿ ವಿಧಾನಸಭೆಯಲ್ಲಿ ಕಲ್ಯಾಣ ಕರ್ನಾಟಕ ಪ್ರದೇಶದ ಅಭಿವೃದ್ಧಿಯ ಕುರಿತು ನಮಗೆ ಸುದೀರ್ಘ ಉಪದೇಶಗಳನ್ನು ನೀಡುತ್ತಿದ್ದಾರೆ. ಆದರೆ ಅವರು ಅಧಿಕಾರದಲ್ಲಿದ್ದಾಗ, ಜನರ ಹಣವನ್ನು ತಮ್ಮ ಸ್ವಂತ ಅಭಿವೃದ್ಧಿಗಾಗಿ ಬಳಸಿಕೊಂಡಿದ್ದರು ಎಂದು ಅವರು ವಾಗ್ದಾಳಿ ನಡೆಸಿದ್ದಾರೆ.







