ಮುಖ್ಯ ನ್ಯಾಯಮೂರ್ತಿ ಮೇಲೆ ಮನುವಾದದ ಪ್ರವರ್ತಕರಿಂದ ಶೂ ಎಸೆತ: ಪ್ರಿಯಾಂಕ್ ಖರ್ಗೆ ಟೀಕೆ

ಸಚಿವ ಪ್ರಿಯಾಂಕ್ ಖರ್ಗೆ
ಬೆಂಗಳೂರು: ಮನುವಾದದ ಪ್ರವರ್ತಕರು ಇಂದು ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿಗಳ ಮೇಲೆಯೇ ತನ್ನ ‘ಶೂ' ಎಸೆದಿದ್ದಾರೆ. ಇದು ವ್ಯಕ್ತಿಯೊಬ್ಬರ ಮೇಲೆ ನಡೆದ ದಾಳಿಯಲ್ಲ, ನ್ಯಾಯದ ಮೇಲಿನ ದಾಳಿ, ಸಂವಿಧಾನದ ಮೇಲಿನ ದಾಳಿ ಎಂದು ಸಚಿವ ಪ್ರಿಯಾಂಕ್ ಖರ್ಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸೋಮವಾರ ಈ ಸಂಬಂಧ ಎಕ್ಸ್ ನಲ್ಲಿ ಪೋಸ್ಟ್ ಹಾಕಿರುವ ಅವರು, ಮನುವಾದಿಗಳ ಈ ಮನಸ್ಥಿತಿಯ ಪ್ರೋತ್ಸಾಹಕರು ಯಾರು ಎನ್ನುವುದನ್ನು ಬಿಡಿಸಿ ಹೇಳಬೇಕಿಲ್ಲ. ಇದು ಕೇವಲ ಶೂ ದಾಳಿಯಲ್ಲ, ಮನುವಾದದ ಮತಾಂಧರು ನಡೆಸಿದ ಸಂವಿಧಾನದ ಮೌಲ್ಯಗಳ ಮೇಲಿನ ಭಯೋತ್ಪಾದಕ ದಾಳಿ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸಂವಿಧಾನದ ಮೇಲೆ ಮನುವಾದಿಗಳಿಗೆ ಇರುವ ಅಸಹನೆಗೆ ಹಾಗೂ ದೇಶದ ಅತ್ಯುನ್ನತ ಸ್ಥಾನದಲ್ಲಿದ್ದರೂ ಶೋಷಿತರ ಶೋಷಣೆ ತಪ್ಪಿದ್ದಲ್ಲ ಎನ್ನುವುದಕ್ಕೆ ಈ ಘಟನೆ ಮತ್ತೊಂದು ಉದಾಹರಣೆ. ‘ಸಂವಿಧಾನ ಅಪಾಯದಲ್ಲಿದೆ’ ಎಂಬ ನಮ್ಮ ಆತಂಕಕ್ಕೆ ಇಂದು ನೇರ ಪುರಾವೆ ಸಿಕ್ಕಿದೆ ಎಂದು ಅವರು ಹೇಳಿದ್ದಾರೆ.
ಈ ದೇಶದ ಆಡಳಿತ ಇಂದು ಸಂವಿಧಾನದ ಮೌಲ್ಯಗಳಿಗೆ ಅನುಗುಣವಾಗಿ ನಡೆಯುತ್ತಿಲ್ಲವೇ? ಆರೆಸ್ಸೆಸ್ ಪ್ರತಿಪಾದಿಸುವ ಮನುಸ್ಮೃತಿಯ ಆಧಾರದಲ್ಲಿ ನಡೆಯುತ್ತಿದೆಯೇ? ಈ ಘಟನೆಯ ಹೊಣೆಯನ್ನು ಕೇಂದ್ರ ಸರಕಾರ ಹೊರುತ್ತದೆಯೇ? ದೇಶದ ಇತಿಹಾಸದಲ್ಲಿ ಎಂದೂ ನಡೆಯದ ಈ ಮಾದರಿಯ ಕೃತ್ಯ ಈಗ ನಡೆದಿದೆ. ಮನುವಾದಿಗಳ ಈ ಕಪ್ಪು ಚುಕ್ಕೆಯನ್ನು ಎಂದಿಗೂ ಅಳಿಸಲು ಸಾಧ್ಯವಿಲ್ಲ ಎಂದು ಪ್ರಿಯಾಂಕ್ ಖರ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.







