‘ಆರೆಸ್ಸೆಸ್ ನೋಂದಾಯಿತ ಸಂಸ್ಥೆಯಲ್ಲ, ಅದಕ್ಕೇ ಪ್ರಕರಣಗಳಿಲ್ಲ’: ಬಿಜೆಪಿಗೆ ಪ್ರಿಯಾಂಕ್ ಖರ್ಗೆ ತಿರುಗೇಟು
"ಕಾನೂನು ವ್ಯಾಪ್ತಿಗೆ ಬರಲು ಮತ್ತು ತೆರಿಗೆ ಪಾವತಿಸಲು ಆರೆಸ್ಸೆಸ್ ಏಕೆ ಭಯಪಡುತ್ತದೆ?"

ಗೃಹ ಸಚಿವ ಪ್ರಿಯಾಂಕ್ ಖರ್ಗೆ
ಬೆಂಗಳೂರು: ಆರೆಸ್ಸೆಸ್ (RSS) ವಿರುದ್ಧ ಯಾವುದೇ ಪ್ರಕರಣಗಳಿಲ್ಲದಿರುವುದಕ್ಕೆ ಕಾರಣವೇನೆಂದರೆ, ಅದು ನೋಂದಾಯಿತ ಸಂಸ್ಥೆಯಲ್ಲ. ಅದರ ಸದಸ್ಯರಿಗೆ ಸದಸ್ಯತ್ವದ ಕಾರ್ಡ್ ಕೂಡ ನೀಡುವುದಿಲ್ಲ. ಹೀಗಾಗಿ ಅವರು ಮಾಡುವ ಯಾವುದೇ ಕೃತ್ಯಗಳಿಗೆ ವ್ಯಕ್ತಿಗತವಾಗಿ ಪ್ರಕರಣ ದಾಖಲಿಸಬೇಕಾಗುತ್ತದೆಯೇ ಹೊರತು ಸಂಸ್ಥೆಯ ಮೇಲೆ ಅಲ್ಲ, ಇಷ್ಟಕ್ಕೂ ಅದೊಂದು ಅಧಿಕೃತ ಸಂಸ್ಥೆಯೇ ಅಲ್ಲ ಎಂದು ಗೃಹ ಸಚಿವ ಪ್ರಿಯಾಂಕ್ ಖರ್ಗೆ ಬಿಜೆಪಿಗೆ ತಿರುಗೇಟು ನೀಡಿದ್ದಾರೆ.
ಎಕ್ಸ್ ನಲ್ಲಿ ಬಿಜೆಪಿ ಮಾಡಿರುವ ಪೋಸ್ಟ್ ಒಂದಕ್ಕೆ ಪ್ರತಿಕ್ರಿಯಿಸಿರುವ ಸಚಿವ ಪ್ರಿಯಾಂಕ್ ಖರ್ಗೆ, "ಅಸ್ತಿತ್ವದಲ್ಲೇ ಇಲ್ಲದವರ ಬಗ್ಗೆ ಪ್ರಶ್ನೆ ಕೇಳಿದರೆ "ಇಲ್ಲ" ಎನ್ನುವುದೇ ಉತ್ತರವಾಗುತ್ತದೆ!. ಮೂರ್ಖತನಕ್ಕೆ ಮೂರ್ತರೂಪ ತೋರಿಸಬೇಕೆಂದರೆ ಬಿಜೆಪಿ ಪಕ್ಷವನ್ನು ತೋರಿಸಿದರಾಯಿತು. ನೋಂದಾವಣೆ ಇರದಿದ್ದರೆ, ಕಾನೂನುಬದ್ಧ ಅಸ್ತಿತ್ವ ಇರುವುದಿಲ್ಲ, ಅಸ್ತಿತ್ವ ಇರದಿದ್ದರೆ ಅದರ ಬಗ್ಗೆ ಉತ್ತರ ಕೊಡುವುದಕ್ಕೆ ಸಾದ್ಯವೂ ಇಲ್ಲ!ಇದು ಸಾಮಾನ್ಯ ಜ್ಞಾನ." ಎಂದು ಹೇಳಿದ್ದಾರೆ.
"ಆರೆಸ್ಸೆಸ್ ವಿರುದ್ಧ ಯಾವುದೇ ಪ್ರಕರಣಗಳಿಲ್ಲದಿರುವುದಕ್ಕೆ ಕಾರಣವೇನೆಂದರೆ, ಅದು ನೋಂದಾಯಿತ ಸಂಸ್ಥೆಯಲ್ಲ. ಅದರ ಸದಸ್ಯರಿಗೆ ಸದಸ್ಯತ್ವದ ಕಾರ್ಡ್ ಕೂಡ ನೀಡುವುದಿಲ್ಲ. ಹೀಗಾಗಿ ಅವರು ಮಾಡುವ ಯಾವುದೇ ಕೃತ್ಯಗಳಿಗೆ ವ್ಯಕ್ತಿಗತವಾಗಿ ಪ್ರಕರಣ ದಾಖಲಿಸಬೇಕಾಗುತ್ತದೆಯೇ ಹೊರತು ಸಂಸ್ಥೆಯ ಮೇಲೆ ಅಲ್ಲ, ಇಷ್ಟಕ್ಕೂ ಅದೊಂದು ಅಧಿಕೃತ ಸಂಸ್ಥೆಯೇ ಅಲ್ಲ. ಬೆಂಗಳೂರಿನಲ್ಲಿರುವ ಕೇಶವ ಕೃಪಾ RSS ಹೆಸರಲ್ಲಿದೆಯೇ? ಇಲ್ಲ, ದೆಹಲಿಯ ಕೇಶವಕುಂಜ RSS ಹೆಸರಲ್ಲಿದೆಯೇ? ಇಲ್ಲ. ಆಸ್ತಿಗಳನ್ನು, ಅಪರಾಧಗಳನ್ನು, ಹೊಣೆಗಾರಿಕೆಯನ್ನು ಯಾವುದನ್ನೂ ತನ್ನ ಹೆಸರಿಗೆ ತೆಗೆದುಕೊಳ್ಳದೆ ನುಣುಚಿಕೊಳ್ಳುವ ತಂತ್ರವನ್ನು ಬಿಟ್ಟು ನೋಂದಣಿ ಮಾಡಿಕೊಂಡು ಲೆಕ್ಕ ಕೊಡಿ ಎಂದು ಕೇಳುತ್ತಿರುವುದು ಇದಕ್ಕಾಗಿಯೇ." ಎಂದು ಪ್ರಿಯಾಂಕ್ ಖರ್ಗೆ ಪೋಸ್ಟ್ ನಲ್ಲಿ ಹೇಳಿದ್ದಾರೆ.
"ಅಸ್ತಿತ್ವವನ್ನೇ ಹೊಂದಿರದಿದ್ದರೂ ಸಮಾಜದ ಮೇಲೆ ಪ್ರಭಾವ ಬೀರಲು ಬಯಸುವ RSS ನೋಂದಾಯಿಸಿಕೊಳ್ಳಲು ಏಕೆ ಅಷ್ಟು ಹೆದರುತ್ತದೆ? ಕಾನೂನು ವ್ಯಾಪ್ತಿಗೆ ಬರಲು ಮತ್ತು ತೆರಿಗೆ ಪಾವತಿಸಲು ಆರೆಸ್ಸೆಸ್ ಏಕೆ ಭಯಪಡುತ್ತದೆ? ತಮ್ಮ ನಿಧಿಯ ಮೂಲಗಳ ಬಗ್ಗೆ ಆರೆಸ್ಸೆಸ್ ಏಕೆ ಅಷ್ಟು ರಹಸ್ಯವನ್ನು ಕಾಯ್ದುಕೊಳ್ಳುತ್ತದೆ?" ಎಂದು ಅವರು ಪ್ರಶ್ನಿಸಿದ್ದಾರೆ.
"ಅಂದಹಾಗೆ, ಪೋಕ್ಸೋ (POCSO) ಸೇರಿದಂತೆ ಆರೆಸ್ಸೆಸ್ ʼಸದಸ್ಯರʼ ವಿರುದ್ಧ ಹಲವಾರು ಪ್ರಕರಣಗಳಿವೆ. ಮುಂದಿನ ಬಾರಿ, ʼಆರೆಸ್ಸೆಸ್ ಅಥವಾ ಅದರ ಅಂಗಸಂಸ್ಥೆಗಳೊಂದಿಗೆ ಗುರುತಿಸಿಕೊಂಡಿರುವ ಎಷ್ಟು ಜನರ ವಿರುದ್ಧ ಪ್ರಕರಣಗಳಿವೆ?ʼ ಎಂದು ಪ್ರಶ್ನೆಯನ್ನು ಕೇಳಿ. ಆ ಪಟ್ಟಿ ಬಹಳ ದೊಡ್ಡದಾಗಿರುವುದರಿಂದ ಉತ್ತರಿಸಲು ನನಗೆ ಸಮಯ ಬೇಕಾಗುತ್ತದೆ, ಆದರೆ ಖಂಡಿತವಾಗಿಯೂ ಅದನ್ನು ನಿಮಗೆ ನೀಡುತ್ತೇನೆ." ಎಂದು ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ.
ಅಸ್ತಿತ್ವದಲ್ಲೇ ಇಲ್ಲದವರ ಬಗ್ಗೆ ಪ್ರಶ್ನೆ ಕೇಳಿದರೆ "ಇಲ್ಲ" ಎನ್ನುವುದೇ ಉತ್ತರವಾಗುತ್ತದೆ!
— Priyank Kharge / ಪ್ರಿಯಾಂಕ್ ಖರ್ಗೆ (@PriyankKharge) August 25, 2026
ಮೂರ್ಖತನಕ್ಕೆ ಮೂರ್ತರೂಪ ತೋರಿಸಬೇಕೆಂದರೆ @BJP4Karnataka ಪಕ್ಷವನ್ನು ತೋರಿಸಿದರಾಯಿತು!
ನೋಂದಾವಣೆ ಇರದಿದ್ದರೆ, ಕಾನೂನುಬದ್ಧ ಅಸ್ತಿತ್ವ ಇರುವುದಿಲ್ಲ, ಅಸ್ತಿತ್ವ ಇರದಿದ್ದರೆ ಅದರ ಬಗ್ಗೆ ಉತ್ತರ ಕೊಡುವುದಕ್ಕೆ ಸಾದ್ಯವೂ ಇಲ್ಲ!
ಇದು ಸಾಮಾನ್ಯ… https://t.co/OaaN4vMysc






