‘ಜಲಜೀವನ್ ಮಿಷನ್ ಕಾಮಗಾರಿಗಳಿಗೆ ಕೇಂದ್ರದ ಅತ್ಯಲ್ಪ ಅನುದಾನ’; ಕೇಂದ್ರ ಜಲಶಕ್ತಿ ಸಚಿವರಿಗೆ ಪ್ರಿಯಾಂಕ್ ಖರ್ಗೆ ಪತ್ರ

ಪ್ರಿಯಾಂಕ್ ಖರ್ಗೆ
ಬೆಂಗಳೂರು : ರಾಜ್ಯದಲ್ಲಿ ಜಲ ಜೀವನ್ ಮಿಷನ್ (ಜೆಜೆಎಂ) ಯೋಜನೆಯನ್ನು ಯಶಸ್ವಿಯಾಗಿ ಅನುಷ್ಠಾನಗೊಳಿಸುತ್ತಿದ್ದು, ಕೇಂದ್ರ ಸರಕಾರ ರಾಜ್ಯಕ್ಕೆ ಮಂಜೂರು ಮಾಡಿರುವ ಅನುದಾನ ಅತ್ಯಂತ ಕಡಿಮೆಯಾಗಿದೆ. ಇದರಿಂದಾಗಿ, ರಾಜ್ಯ ಸರಕಾರದ ಪ್ರಗತಿಪರ ಕಾಮಗಾರಿಗಳಿಗೆ ಅಡ್ಡಿಯಾಗುತ್ತಿದೆ ಎಂದು ಕೇಂದ್ರ ಜಲಶಕ್ತಿ ಸಚಿವ ಸಿ.ಆರ್.ಪಾಟೀಲ್ಗೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಪ್ರಿಯಾಂಕ್ ಖರ್ಗೆ ಬರೆದಿರುವ ಪತ್ರದಲ್ಲಿ ತಿಳಿಸಿದ್ದಾರೆ.
ಪತ್ರದಲ್ಲಿ ಏನಿದೆ?:
ಜಲಜೀವನ್ ಮಿಷನ್ ಯೋಜನೆಯ ಆರ್ಥಿಕ ಪ್ರಗತಿ 35,698.58 ಕೋಟಿ ರೂ.ಗಳಾಗಿದ್ದು, ಅನುಮೋದಿತ ವೆಚ್ಚ 69,487.60 ಕೋಟಿ ರೂ.ಗಳಾಗಿದೆ. ಒಟ್ಟು 35,698.58 ಕೋಟಿ ರೂ.ವೆಚ್ಚದಲ್ಲಿ, ರಾಜ್ಯದ ಪಾಲು 24,598.45 ಕೋಟಿ ರೂ. ಗಳಾಗಿದ್ದರೆ, ಕೇಂದ್ರ ಪಾಲು ಕೇವಲ 11,786.63 ಕೋಟಿ ರೂ.ಗಳಾಗಿದೆ ಎಂದು ಪ್ರಿಯಾಂಕ್ ಖರ್ಗೆ ತಿಳಿಸಿದ್ದಾರೆ.
ಇದು ಕೇಂದ್ರ ಸರಕಾರದ ಪಾಲಿನ ದೊಡ್ಡ ಕೊರತೆಯನ್ನು ಪ್ರತಿಬಿಂಬಿಸುತ್ತದೆ. ಈ ಹಣಕಾಸು ವರ್ಷದಲ್ಲಿಯೂ ರಾಜ್ಯ ಸರಕಾರವು 1,500 ಕೋಟಿ ರೂ.ಗಳನ್ನು ಬಿಡುಗಡೆ ಮಾಡಿದೆ, ಆದರೆ ಇಲ್ಲಿಯವರೆಗೆ ಕೇಂದ್ರ ಸರಕಾರದ ಅನುದಾನ ಬಿಡುಗಡೆ ಶೂನ್ಯವಾಗಿದೆ. ಯಾವುದೇ ಸಂಭಾವ್ಯ ವಿಳಂಬವನ್ನು ತಗ್ಗಿಸಲು ಮತ್ತು ಕೇಂದ್ರ ಸರಕಾರದ ನಿಧಿಯ ನಿರೀಕ್ಷೆಯಲ್ಲಿ ನಡೆಯುತ್ತಿರುವ ಕಾಮಗಾರಿಗಳನ್ನು ಮುಂದುವರಿಸಲು ರಾಜ್ಯ ಸರಕಾರವು ಪೂರ್ವಭಾವಿಯಾಗಿ ಹಣವನ್ನು ವಿತರಿಸಿದೆ ಎಂದು ಅವರು ಉಲ್ಲೇಖಿಸಿದ್ದಾರೆ.
ಈ ಹಣಕಾಸು ವರ್ಷದಲ್ಲಿ ರಾಜ್ಯವು ಬಜೆಟ್ ಹಂಚಿಕೆಗಳು ಮತ್ತು ಸಕಾಲಿಕ ಬಿಡುಗಡೆಗಳ ಮೂಲಕ ಈ ಯೋಜನೆಯನ್ನು ಪೂರ್ವಭಾವಿಯಾಗಿ ಬೆಂಬಲಿಸುತ್ತಿದೆ, ಇದರಲ್ಲಿ 11,050 ಕೋಟಿ ರೂ. ಹಂಚಿಕೆಯಾಗಿದೆ, ಕೇಂದ್ರ ಅನುದಾನಗಳ ಸಕಾಲಿಕ ಬಿಡುಗಡೆ ಸೇರಿದಂತೆ ಪರಿಣಾಮಕಾರಿ ಅನುಷ್ಠಾನಕ್ಕಾಗಿ ಈ ಯೋಜನೆಗೆ ಭಾರತ ಸರಕಾರದಿಂದ ನಿರಂತರ ಬೆಂಬಲದ ಅಗತ್ಯವಿದೆ ಎಂದು ಪ್ರಿಯಾಂಕ್ ಖರ್ಗೆ ಪ್ರತಿಪಾದಿಸಿದ್ದಾರೆ.
ಪ್ರಸ್ತುತ, ಸುಮಾರು 1700 ಕೋಟಿ ರೂ.ಗಳ ಬಿಲ್ಲುಗಳು ಪಾವತಿಗೆ ಬಾಕಿ ಉಳಿದಿವೆ ಮತ್ತು 2600 ಕೋಟಿ ರೂ.ಗಳ ಬಿಲ್ಗಳು ಸರತಿಯಲ್ಲಿವೆ. ಈ ಪಾವತಿಗಳು ಮತ್ತಷ್ಟು ವಿಳಂಬವಾದರೆ ಕೆಲಸಗಳು ನಿಧಾನವಾಗುವ, ಸ್ಥಗಿತಗೊಳ್ಳುವ ಸಾಧ್ಯತೆಯಿದೆ ಎಂದು ಕಳವಳ ವ್ಯಕ್ತಪಡಿಸಿರುವ ಪ್ರಿಯಾಂಕ್ ಖರ್ಗೆ, ಕೆಲವು ಗುತ್ತಿಗೆದಾರರು ಈಗಾಗಲೆ ಸಿಬ್ಬಂದಿಯನ್ನು ಕಡಿಮೆ ಮಾಡಲು ಪ್ರಾರಂಭಿಸಿದ್ದಾರೆ, ಇದು ಕೆಲಸದ ಪ್ರಗತಿಗೆ ಗಂಭೀರ ಅಡ್ಡಿಯಾಗುತ್ತಿದೆ ಎಂದು ಗಮನ ಸೆಳೆದಿದ್ದಾರೆ.
ಆದುದರಿಂದ, ಈ ಮೇಲಿನ ಅಂಶಗಳನ್ನು ಗಮನದಲ್ಲಿಟ್ಟುಕೊಂಡು, ಕಾಮಗಾರಿಗಳನ್ನು ಸಕಾಲಿಕವಾಗಿ ಪೂರ್ಣಗೊಳಿಸುವ ಸಲುವಾಗಿ ಕೇಂದ್ರ ಸರಕಾರ ತನ್ನ ಪಾಲನ್ನು ತ್ವರಿತವಾಗಿ ಬಿಡುಗಡೆ ಮಾಡಬೇಕೆಂದು ಪ್ರಿಯಾಂಕ್ ಖರ್ಗೆ ವಿನಂತಿಸಿದ್ದಾರೆ.







