ಕೈಪಿಡಿಯಲ್ಲಿನ ತಪ್ಪುಗಳನ್ನು ಸರಿಪಡಿಸದೇ ಸಮೀಕ್ಷೆಗೆ ಮುಂದಾಗಿರುವುದು ಅನುಮಾನ ಮೂಡಿಸಿದೆ: ವೀರಶೈವ ಮಹಾಸಭಾ

ಬೆಂಗಳೂರು: ಜಾತಿಗಳ ಕೈಪಿಡಿಯಲ್ಲಿ ಅನೇಕ ತಪ್ಪುಗಳಿದ್ದು ಅವುಗಳನ್ನು ಸರಿಪಡಿಸದೇ ಸಾಮಾಜಿಕ, ಶೈಕ್ಷಣಿಕ ಸಮೀಕ್ಷೆಗೆ ಮುಂದಾಗಿರುವುದು ಸಾರ್ವಜನಿಕರಲ್ಲಿ ಹಲವು ಅನುಮಾನ ಮೂಡಿವೆ ಎಂದು ಅಖಿಲ ಭಾರತ ವೀರಶೈವ ಮಹಾಸಭಾ ಆಕ್ಷೇಪಿಸಿದೆ.
ಸೋಮವಾರ ಈ ಕುರಿತು ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷರಿಗೆ ಪತ್ರ ಬರೆದಿರುವ ಅಖಿಲ ಭಾರತ ವೀರಶೈವ ಮಹಾಸಭಾ, ವೀರಶೈವ ಲಿಂಗಾಯತ ಸಮಾಜಕ್ಕೆ ಸೇರಿದ ಜಾತಿ, ಉಪಜಾತಿಗಳನ್ನು ಒಂದೇ ಕಡೆ ಸೇರಿಸುವಂತೆ ತಮಗೂ ಮನವಿಯನ್ನು ಮಾಡಿದ್ದೆವು. ಅದಕ್ಕೆ ಯಾವುದೇ ಬೆಲೆ ನೀಡದಿರುವುದು ಸೋಜಿಗದ ಸಂಗತಿ ಎಂದು ಸಂಶಯ ವ್ಯಕ್ತಪಡಿಸಿದೆ.
ಜಾತಿಗಳ ಕೈಪಿಡಿ ಬಿಡುಗಡೆಗೆ ಮೊದಲು ಕರಡು ಕೈಪಿಡಿ ತಯಾರಿಸಿ ಸಾರ್ವಜನಿಕರಿಗೆ ನೀಡಿ, ತಪ್ಪುಗಳಿದ್ದರೆ ಸರಿಪಡಿಸಿಕೊಳ್ಳುವಂತೆ ಕೋರಲಾಗಿತ್ತು. ಹಾಗೇ ಗಣತಿದಾರರು ಪಡೆದ ಮಾಹಿತಿಯನ್ನು ಗೌಪ್ಯವಾಗಿಡಲಾಗುವುದೋ? ಅಥವಾ ಸಾರ್ವಜನಿಕಗೊಳಿಸಲಾಗುತ್ತದೆಯೋ? ಎಂಬ ಬಗ್ಗೆ ಹಾಗೂ ಜಾತಿ ಪ್ರಮಾಣ ಪತ್ರವನ್ನು ಜನಸಾಮಾನ್ಯರು ಬರೆಸಿದ ಜಾತಿ ಆಧಾರದ ಮೇಲೆ ಜಾತಿ ಪ್ರಮಾಣ ಪತ್ರವನ್ನು ಸರಕಾರದಿಂದ ನೀಡಲಾಗುವುದೇ? ಇಲ್ಲವೇ? ಎಂಬುದನ್ನು ಸ್ಪ್ಠ೯೫೬ಷ್ಟಪಡಿಸುವಂತೆ ಕೋರಿದ್ದೆವು. ಅದಕ್ಕೂ ಇಲ್ಲಿಯ ವರೆಗೆ ಯಾವುದೇ ಸ್ಪ್ಠ೯೫೬ಷ್ಟನೆ ನೀಡದಿರುವುದು ಆಯೋಗದ ಕಾರ್ಯವೈಖರಿ ಮೇಲೆ ಅನುಮಾನ ಮೂಡಿಸುತ್ತದೆ ಎಂದು ಮಹಾಸಭಾ ಆಕ್ರೋಶ ವ್ಯಕ್ತಪಡಿಸಿದೆ.
ಹಿಂದಿನ ಕಾಂತರಾಜ ಆಯೋಗವು ೭೯ ಜಾತಿ, ಉಪಜಾತಿಗಳನ್ನು ಪ್ರಕಟನೆ ಮಾಡಿದ್ದರು. ಆದರೆ ಆಯೋಗವು ಸಮೀಕ್ಷೆಯ ನಂತರ ನೀಡಿದ ವರದಿಯಲ್ಲಿ ವೀರಶೈವ ಲಿಂಗಾಯತ ಸಮಾಜದ ಒಟ್ಟು ೯೫ ಜಾತಿ, ಉಪಜಾತಿಗಳು ದಾಖಲಾಗಿದ್ದವು. ಆದರೆ ಈಗ ಆಯೋಗವು ವೀರಶೈವ ಲಿಂಗಾಯತ ಸಮಾಜದ ೮೪ ಜಾತಿ, ಉಪಜಾತಿಗಳನ್ನು ಪ್ರಕಟಿಸಿದ್ದು, ಆಯೋಗದಿಂದ ಸಲಹೆ, ಸೂಚನೆಗಳಿಗೆ ಅವಕಾಶ ನೀಡಿದ ಮೇರೆಗೆ ವೀರಶೈವ ಮಹಾಸಭೆಯಿಂದ ೩೨ ಜಾತಿ, ಉಪಜಾತಿಗಳನ್ನು ಸೇರಿಸುವಂತೆ ಮನವಿ ಮಾಡಿದ ನಂತರ ಕೈಪಿಡಿಯಲ್ಲಿ ೧೩೫ ಜಾತಿ, ಉಪಜಾತಿಗಳ ಪಟ್ಟಿ ಪ್ರಕಟವಾಗಿವೆ.
ಆದರೆ ಈ ಹಿಂದಿನ ಜಾತಿ, ಉಪಜಾತಿಗಳ ಪಟ್ಟಿಗೆ ಹೋಲಿಸಿದರೆ ಹೆಚ್ಚು ಕಡಿಮೆ ೪೦ ಜಾತಿ, ಉಪಜಾತಿಗಳು ಸೇರಿದಂತಾಗಿವೆ. ಇವುಗಳನ್ನು ಸೇರಿಸಲು ಯಾವ ಮಾನದಂಡವನ್ನು ಆಯೋಗ ಬಳಸಿದೆ ಎಂಬುದನ್ನು ಸ್ಪಷ್ಟಪಡಿಸಬೇಕು ಎಂದು ಮಹಾಸಭಾ ಆಗ್ರಹಿಸಿದೆ.
ಜಾತಿ, ಉಪಜಾತಿಗಳ ಪಟ್ಟಿಯಲ್ಲಿ ಹಲವಾರು ಜಾತಿ, ಉಪಜಾತಿಗಳು ಎರಡು ಅಥವಾ ಎರಡಕ್ಕಿಂತ ಹೆಚ್ಚುಬಾರಿ ಪುನರಾವರ್ತನೆಯಾಗಿರುವುದು ಕಂಡು ಬಂದಿದೆ. ಆದ್ದರಿಂದ ಆಯೋಗವು ಗೊಂದಲ, ಅನುಮಾನಗಳಿಗೆ ಅವಕಾಶ ನೀಡದೇ ಪಾರದರ್ಶಕವಾಗಿ ಮತ್ತು ನ್ಯಾಯಸಮ್ಮತವಾಗಿ ಸಮೀಕ್ಷೆ ನಡೆಸಬೇಕು ಎಂದು ಅಖಿಲ ಭಾರತ ವೀರಶೈವ ಮಹಾಸಭಾ ಮನವಿ ಮಾಡಿದೆ.







