ಪ್ರೊ.ನಿರಂಜನಾರಾಧ್ಯ, ಎ. ನಾರಾಯಣ ಸೇರಿ 20 ಮಂದಿ ರಾಜ್ಯ ಯೋಜನಾ ಆಯೋಗದ ಸದಸ್ಯರಾಗಿ ನೇಮಕ

ಬೆಂಗಳೂರು, ಸೆ.11: ರಾಜ್ಯ ಸರಕಾರವು ಶಿಕ್ಷಣ ತಜ್ಞ ಪ್ರೊ.ನಿರಂಜನಾರಾಧ್ಯ ವಿ.ಪಿ., ಉನ್ನತ ಶಿಕ್ಷಣ ತಜ್ಞ ಎ. ನಾರಾಯಣ, ಕೃಷಿ ತಜ್ಞ ಡಾ. ಟಿ.ಎನ್. ಪ್ರಕಾಶ್ ಕಮ್ಮರಡಿ, ಮಹಿಳಾ ಮತ್ತು ಮಕ್ಕಳ ಸಬಲೀಕರಣ ತಜ್ಞೆ ಮೈತ್ರೇಯಿ ಕೃಷ್ಣನ್ ಸೇರಿದಂತೆ 20 ಮಂದಿ ಅಧಿಕಾರೇತರ ಸದಸ್ಯರನ್ನು ಕರ್ನಾಟಕ ರಾಜ್ಯ ನೀತಿ ಮತ್ತು ಯೋಜನಾ ಆಯೋಗಕ್ಕೆ ನಾಮ ನಿರ್ದೇಶನ ಮಾಡಿದೆ.
ಶಿಕ್ಷಣ ತಜ್ಞ ಪ್ರೊ.ನಿರಂಜನಾರಾಧ್ಯ ವಿ.ಪಿ., ಉನ್ನತ ಶಿಕ್ಷಣ ತಜ್ಞ ಎ. ನಾರಾಯಣ, ಆರೋಗ್ಯ ತಜ್ಞೆ ಲತಾರಾವ್ ಶೇಷಾದ್ರಿ, ಕೃಷಿ ತಜ್ಞೆ ವಿ. ಗಾಯತ್ರಿ, ಕೃಷಿ ತಜ್ಞ ಡಾ. ಟಿ.ಎನ್. ಪ್ರಕಾಶ್ ಕಮ್ಮರಡಿ, ಮಹಿಳಾ ಮತ್ತು ಮಕ್ಕಳ ಸಬಲೀಕರಣ ತಜ್ಞೆ ಮೈತ್ರೇಯಿ ಕೃಷ್ಣನ್, ಮಹಿಳಾ ಮತ್ತು ಮಕ್ಕಳ ಸಬಲೀಕರಣ ತಜ್ಞೆ ಮಧುಭೂಷಣ್, ಪರಿಸರ ತಜ್ಞ ನಾಗೇಶ್ ಹೆಗಡೆ ಅಧಿಕಾರೇತರ ಸದಸ್ಯರಾಗಿ ನೇಮಕವಾಗಿದ್ದಾರೆ.
ಪರಿಸರ ತಜ್ಞರಾದ ಪ್ರತಾಪ್ ಹೆಗ್ಡೆ, ಡಾ. ಹರೀಶ್ ಹಂದೆ, ಭೂ ವಿಜ್ಞಾನಿಗಳಾದ ವಿ.ಎಸ್. ಪ್ರಕಾಶ್, ಡಾ. ಮಂಜುನಾಥ್ ಎಚ್., ಅರ್ಥಶಾಸ್ತ್ರಜ್ಞ ಪ್ರೊ. ನರೇಂದ್ರಪಾಣಿ, ಮಾನವ ಅಭಿವೃದ್ಧಿ ತಜ್ಞ ಡಾ. ಟಿ.ಆರ್. ಚಂದ್ರಶೇಖರಯ್ಯ, ಪ್ರಾದೇಶಿಕ ಅಸಮತೋಲನ ತಜ್ಞರಾದ ಡಾ. ರಝಾಕ್ ಉಸ್ತಾದ್ ಎಚ್., ಸಂಗೀತ ಎಮ್.ಕೆ., ಕಾನೂನು ತಜ್ಞ ಮುಕುಂದ ಬೆಳಗಲಿ, ಅರ್ಥಶಾಸ್ತ್ರಜ್ಞ ಡಾ. ಬಿ.ಎಚ್. ನಾಗೂರ, ಸಂಶೋಧನಾ ತಜ್ಞ ಮೋಹನದಾಸ್ ಹೆಗಡೆ, ಸಮಾಜ ಸೇವಕ ಅಲಿಬಾಬಾ ಅಧಿಕಾರೇತರ ಸದಸ್ಯರಾಗಿ ನೇಮಕವಾಗಿದ್ದಾರೆ.
ಆಯೋಗಕ್ಕೆ ಅಧಿಕಾರಿ ಸದಸ್ಯರಾಗಿ ಸರಕಾರದ ಮುಖ್ಯ ಕಾರ್ಯದರ್ಶಿಗಳು, ಸರಕಾರದ ಅಪರ ಮುಖ್ಯ ಕಾರ್ಯದರ್ಶಿಗಳು ಮತ್ತು ಅಭಿವೃದ್ಧಿ ಆಯುಕ್ತರು, ಆರ್ಥಿಕ ಇಲಾಖೆಯ ಸರಕಾರದ ಅಪರ ಮುಖ್ಯ ಕಾರ್ಯದರ್ಶಿಗಳು ನೇಮಕಗೊಂಡಿದ್ದು, ಸದಸ್ಯ ಕಾರ್ಯದರ್ಶಿಯಾಗಿ ಯೋಜನೆ, ಕಾರ್ಯಕ್ರಮ ಸಂಯೋಜನೆ ಮತ್ತು ಸಾಂಖ್ಯಿಕ ಇಲಾಖೆಯ ಸರಕಾರದ ಅಪರ ಮುಖ್ಯ ಕಾರ್ಯದರ್ಶಿಗಳು/ಪ್ರಧಾನ ಕಾರ್ಯದರ್ಶಿ/ಕಾರ್ಯದರ್ಶಿ ಕಾರ್ಯನಿರ್ವಹಿಸಲಿದ್ದಾರೆ.
ಕರ್ನಾಟಕ ನಾಗರೀಕ ಸೇವಾ ನಿಯಮಾವಳಿ ‘ಅನುಬಂಧ-ಎ’ನಲ್ಲಿರುವ ಪಟ್ಟಿಯ ಅನ್ವಯ ಆಯೋಗದ ಅಧಿಕಾರೇತರ ಸದಸ್ಯರಿಗೆ ಪ್ರಯಾಣ ಭತ್ಯೆಯನ್ನು ನೀಡಲಾಗುವುದು. ಆಯೋಗದ ಸಭೆಗಳಿಗೆ ಹಾಜರಾಗುವ ಅಧಿಕಾರೇತರ ಸದಸ್ಯರಿಗೆ ದಿನವೊಂದಕ್ಕೆ ಮೂರು ಸಾವಿರ ರೂ. ಸಭಾ ಭತ್ಯೆಯನ್ನು ಮಂಜೂರು ಮಾಡಲಾಗುವುದು ಎಂದು ಆದೇಶದಲ್ಲಿ ತಿಳಿಸಲಾಗಿದೆ.







