ವಿಶೇಷ ಅಧಿವೇಶನ: ಸೆ.21 ರಿಂದ ಸೆ.23ರ ವರೆಗೆ ವಿಧಾನಸೌಧದ ಸುತ್ತ ನಿಷೇಧಾಜ್ಞೆ

ಬೆಂಗಳೂರು: ಬರ ಪರಿಸ್ಥಿತಿ ಹಾಗೂ ಪಶ್ಚಿಮ ಘಟ್ಟಗಳಿಗೆ ಸಂಬಂಧಿಸಿದ ಕಸ್ತೂರಿ ರಂಗನ್ ವರದಿ ಕುರಿತು ಚರ್ಚಿಸಿಲು ಸೆ.21ರಿಂದ ಸೆ.23ರ ವರೆಗೆ ವಿಧಾನ ಮಂಡಲ ಉಭಯ ಸದನಗಳ ವಿಶೇಷ ಅಧಿವೇಶನ ನಡೆಯಲಿದೆ. ಆ ಹಿನ್ನೆಲೆಯಲ್ಲಿ ಸುಗಮ ಕಲಾಪ ಹಾಗೂ ಕಾನೂನು ಸುವ್ಯವಸ್ಥೆ ಕಾಪಾಡುವ ದೃಷ್ಟಿಯಿಂದ ನಗರ ಪೊಲೀಸ್ ಆಯುಕ್ತ ಸೀಮಂತ್ ಕುಮಾರ್ ಸಿಂಗ್ ವಿಧಾನಸೌಧದ ಸುತ್ತಲಿನ 2 ಕಿ.ಮೀ ವ್ಯಾಪ್ತಿಯಲ್ಲಿ ಕಲಂ 144ರ ಅನ್ವಯ ನಿಷೇಧಾಜ್ಞೆ ವಿಧಿಸಿ ಆದೇಶ ಹೊರಡಿಸಿದ್ದಾರೆ.
ಅಧಿವೇಶನದ ಸಮಯದಲ್ಲಿ ವಿವಿಧ ಸಂಘಟನೆಗಳು ಹಾಗೂ ರಾಜಕೀಯ ಪಕ್ಷಗಳು ಧರಣಿ, ಸತ್ಯಾಗ್ರಹ, ಮೆರವಣಿಗೆ ಮತ್ತು ವಿಧಾನಸೌಧ ಮುತ್ತಿಗೆಯಂತಹ ಪ್ರತಿಭಟನೆಗಳನ್ನು ನಡೆಸುವ ಸಾಧ್ಯತೆಯಿದೆ. ಆದುದರಿಂದ ಈ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಲಾಗಿದೆ. ಈ ನಿಷೇಧಾಜ್ಞೆ ಹಿನ್ನೆಲೆಯಲ್ಲಿ ಫ್ರೀಡಂ ಪಾರ್ಕ್‍ನಲ್ಲಿ ಪೂರ್ವಾನುಮತಿ ಪಡೆದು ನಡೆಸುವ ಪ್ರತಿಭಟನೆಗಳನ್ನು ಹೊರತುಪಡಿಸಿ ಇತರ ಯಾವುದೇ ರೀತಿಯ ಪ್ರತಿಭಟನೆಗಳಿಗೆ ಅವಕಾಶವಿರುವುದಿಲ್ಲ.
ಈ ಅವಧಿಯಲ್ಲಿ ಐದು ಅಥವಾ ಅದಕ್ಕಿಂತ ಹೆಚ್ಚು ಜನರು ಗುಂಪು ಕೂಡುವುದು, ಮೆರವಣಿಗೆ ಹಾಗೂ ಸಭೆಗಳನ್ನು ನಡೆಸುವುದು ಸಂಪೂರ್ಣವಾಗಿ ನಿಷೇಧಿಸಲಾಗಿದೆ. ಅಲ್ಲದೆ, ಮಾರಕಾಸ್ತ್ರ, ದೊಣ್ಣೆ, ಕಲ್ಲು, ಇಟ್ಟಿಗೆ ಅಥವಾ ದೈಹಿಕ ಹಿಂಸೆಯನ್ನುಂಟು ಮಾಡುವ ವಸ್ತುಗಳನ್ನು ಕೊಂಡೊಯ್ಯುವುದು, ಸ್ಫೋಟಕ ವಸ್ತುಗಳನ್ನು ಸಿಡಿಸುವುದು, ವ್ಯಕ್ತಿಗಳ ಪ್ರತಿಕೃತಿ ಪ್ರದರ್ಶನ ಹಾಗೂ ಪ್ರಚೋದನಾಕಾರಿ ಘೋಷಣೆಗಳನ್ನು ಕೂಗುವುದರ ಮೇಲೆಯೂ ಕಟ್ಟುನಿಟ್ಟಿನ ತಡೆ ಹೇರಲಾಗಿದೆ ಎಂದು ಆದೇಶದಲ್ಲಿ ತಿಳಿಸಿದ್ದಾರೆ.




