ಪೊಲೀಸ್ ಸಿಬ್ಬಂದಿಯ ಆರೋಗ್ಯ ಸುಧಾರಣೆಗೆ ‘ಪ್ರಾಜೆಕ್ಟ್ ಖುಷಿ' ಪ್ರಾರಂಭ: ಗೃಹ ಸಚಿವ ಪ್ರಿಯಾಂಕ್ ಖರ್ಗೆ

ಗೃಹ ಸಚಿವ ಪ್ರಿಯಾಂಕ್ ಖರ್ಗೆ
ಬೆಂಗಳೂರು: ಬೆಂಗಳೂರು ನಗರ ಪೊಲೀಸ್ ಸಿಬ್ಬಂದಿಯ ಆರೋಗ್ಯ ಹಾಗೂ ಯೋಗಕ್ಷೇಮವನ್ನು ಸುಧಾರಿಸುವ ಉದ್ದೇಶದಿಂದ ‘ಪ್ರಾಜೆಕ್ಟ್ ಖುಷಿ' ಆರೋಗ್ಯ ಕಾರ್ಯಕ್ರಮವನ್ನು ಪ್ರಾರಂಭಿಸಲಾಗಿದೆ ಎಂದು ಗೃಹ ಸಚಿವ ಪ್ರಿಯಾಂಕ್ ಖರ್ಗೆ ತಿಳಿಸಿದ್ದಾರೆ.
ಈ ಬಗ್ಗೆ ಪ್ರಕಟಣೆ ಹೊರಡಿಸಿದ ಅವರು, ಬೆಂಗಳೂರು ನಗರ ಪೊಲೀಸ್, ಹ್ಯಾಪಿಯೆಸ್ಟ್ ಹೆಲ್ತ್, ಟೈಟಾನ್ ಕಂಪನಿ ಲಿಮಿಟೆಡ್ ಹಾಗೂ ಇಂದಿರಾನಗರ ರೋಟರಿ ಟ್ರಸ್ಟ್ ಸಂಸ್ಥೆಗಳ ಜಂಟಿ ಆಶ್ರಯದೊಂದಿಗೆ ನಡೆಯುವ ಪ್ರಾಜೆಕ್ಟ್ ಖುಷಿ, ಕಾರ್ಯಕ್ರಮದ ಮೊದಲ ಹಂತವನ್ನು ಎಲೆಕ್ಟ್ರಾನಿಕ್ ಸಿಟಿ ಪೊಲೀಸ್ ವಿಭಾಗದಲ್ಲಿ ಅನುಷ್ಠಾನಗೊಳಿಸಲಾಗುತ್ತಿದೆ ಎಂದಿದ್ದಾರೆ.
ಈಗ ಒಟ್ಟು 600 ಪೊಲೀಸ್ ಸಿಬ್ಬಂದಿಗಳು ಇದರ ಪ್ರಯೋಜನವನ್ನು ಪಡೆದುಕೊಳ್ಳಲಿದ್ದಾರೆ. ಪ್ರತಿ ಬ್ಯಾಚ್ಗೆ ಮೂರು ತಿಂಗಳ ಅವಧಿಯ ಕಾರ್ಯಕ್ರಮ ನಡೆಯಲಿದ್ದು, ಇದರಲ್ಲಿ ಆರೋಗ್ಯ ತಪಾಸಣೆ, ತಜ್ಞರಿಂದ ಮಾರ್ಗದರ್ಶನದ ಅವಧಿಗಳು ಹಾಗೂ ಡಿಜಿಟಲ್ ತೊಡಗಿಸಿಕೊಳ್ಳುವಿಕೆ ಸೇರಿದಂತೆ ವಿವಿಧ ಚಟುವಟಿಕೆಗಳನ್ನು ಹಮ್ಮಿಕೊಳ್ಳಲಾಗುತ್ತದೆ ಎಂದು ಅವರು ಹೇಳಿದರು.
ಈ ಹಿಂದೆ ನಡೆದ ಪ್ರಾಯೋಗಿಕ ಕಾರ್ಯಕ್ರಮವು ಉತ್ತಮ ಫಲಿತಾಂಶಗಳನ್ನು ನೀಡಿದೆ. ಭಾಗವಹಿಸಿದವರಲ್ಲಿ ಶೇ.61ರಷ್ಟು ಮಂದಿಯಲ್ಲಿ ರಕ್ತದಲ್ಲಿನ ಸಕ್ಕರೆ ಪ್ರಮಾಣದಲ್ಲಿ ಇಳಿಕೆ ಕಂಡುಬಂದಿದ್ದು, ಶೇ.70ರಷ್ಟು ಮಂದಿ ವಿಟಮಿನ್ ಬಿ12 ಕೊರತೆಯನ್ನು ಸರಿಪಡಿಸಿಕೊಂಡಿದ್ದಾರೆ. ಅದೇ ರೀತಿ ಶೇ.59ರಷ್ಟು ಮಂದಿ ತಮ್ಮ ದೇಹದ ತೂಕವನ್ನು ಕಡಿಮೆ ಮಾಡಿಕೊಂಡಿದ್ದಾರೆ ಎಂದು ತಿಳಿಸಿದ್ದಾರೆ.
ನಿರಂತರ ಕೆಲಸ ನಡುವೆ ಆರೋಗ್ಯಕರ ಜೀವನ ನಡೆಸಬೇಕೆನ್ನುವ ಸಲುವಾಗಿ ‘ಪ್ರಾಜೆಕ್ಟ್ ಖುಷಿ’ ಆರಂಭಿಸಲಾಗುತ್ತಿದೆ. ಈ ಕಾರ್ಯಕ್ರಮದಲ್ಲಿ ಭಾಗವಹಿಸುವ ಪೊಲೀಸರು ದಿನನಿತ್ಯ ವೈದ್ಯರು ಹೇಳಿದ ಸಲಹೆ ಸೂಚನೆಗಳನ್ನು ಪಾಲಿಸಬೇಕು.
-ಸೀಮಂತ್ ಕುಮಾರ್ ಸಿಂಗ್, ಬೆಂಗಳೂರು ನಗರ ಪೊಲೀಸ್ ಆಯುಕ್ತ






