ಕೇವಲ ದೂರು ಅಥವಾ ಪ್ರಾಥಮಿಕ ತನಿಖೆ ಆಧಾರದಲ್ಲಿ ಸರ್ಕಾರಿ ನೌಕರರ ಬಡ್ತಿ ತಡೆಯುವಂತಿಲ್ಲ: ಹೈಕೋರ್ಟ್

Photo credit: PTI
ಬೆಂಗಳೂರು: ಸರ್ಕಾರಿ ನೌಕರರ ವಿರುದ್ಧ ಅಧಿಕೃತ ದೋಷಾರೋಪ ಪಟ್ಟಿ ಸಲ್ಲಿಕೆಯಾಗದೇ, ಕೇವಲ ದೂರು ಅಥವಾ ಪ್ರಾಥಮಿಕ ತನಿಖೆಯ ಆಧಾರದಡಿ ಬಡ್ತಿ ತಡೆಹಿಡಿಯುವುದಕ್ಕೆ ಕಾನೂನಿನಲ್ಲಿ ಅವಕಾಶವಿಲ್ಲ ಎಂದು ಹೈಕೋರ್ಟ್ ಅಭಿಪ್ರಾಯಪಟ್ಟಿದೆ.
ಬಡ್ತಿ ನಿರಾಕರಿಸಿದ್ದ ಕ್ರಮ ಪ್ರಶ್ನಿಸಿ ಕುಷ್ಟಗಿ ಪುರಸಭೆಯ ಹಿರಿಯ ಆರೋಗ್ಯ ಪರಿವೀಕ್ಷಕ ಎಂ.ಎನ್. ಖಾಜಾ ಹುಸೇನ್ ಸಲ್ಲಿಸಿದ್ದ ರಿಟ್ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಟಿ.ಎಂ. ನದಾಫ್ ಅವರಿದ್ದ ಏಕಸದಸ್ಯ ನ್ಯಾಯಪೀಠ (ಧಾರವಾಡ), ಇಲಾಖಾ ಬಡ್ತಿ ಸಮಿತಿ (ಡಿಪಿಸಿ) ಸಭೆ ನಡೆಯುವ ದಿನಾಂಕದ ವೇಳೆಗೆ ನೌಕರನ ವಿರುದ್ಧ ಯಾವುದೇ ದೋಷಾರೋಪ ಪಟ್ಟಿ ಸಲ್ಲಿಕೆಯಾಗದೇ ಇದ್ದರೆ ಅಥವಾ ಇಲಾಖಾ ವಿಚಾರಣೆ ಬಾಕಿ ಇಲ್ಲದಿದ್ದರೆ ಬಡ್ತಿಯನ್ನು ತಡೆಯುವಂತಿಲ್ಲ ಎಂದು ಸ್ಪಷ್ಟಪಡಿಸಿದೆ.
ಕೇವಲ ದೂರು, ಪೊಲೀಸರು ಮತ್ತು ಇಲಾಖೆಯ ನಡುವೆ ಪತ್ರ ವ್ಯವಹಾರಗಳನ್ನಷ್ಟೇ ಆಧಾರವಾಗಿ ಇರಿಸಿಕೊಂಡು ಅರ್ಹ ನೌಕರನಿಗೆ ಬಡ್ತಿ ನಿರಾಕರಿಸುವುದು ಸೇವಾ ನಿಯಮಗಳಿಗೆ ವಿರುದ್ಧವಾಗಿದೆ ಎಂದು ನ್ಯಾಯಾಲಯ ಆದೇಶದಲ್ಲಿ ವಿವರಿಸಿದೆ.
ಅರ್ಜಿದಾರರ ಮನವಿ ಪರಿಗಣಿಸಿ, ಅವರ ಕಿರಿಯ ನೌಕರರಿಗೆ ಬಡ್ತಿ ನೀಡಲಾದ ದಿನಾಂಕದಿಂದಲೇ ಖಾಜಾ ಹುಸೇನ್ ಅವರಿಗೂ ಮುಂಬಡ್ತಿ ನೀಡಬೇಕು ಹಾಗೂ ಅದಕ್ಕೆ ಸಂಬಂಧಿಸಿದ ಎಲ್ಲ ಸೇವಾ ಸೌಲಭ್ಯಗಳನ್ನು 8 ವಾರಗಳ ಒಳಗೆ ಒದಗಿಸಬೇಕು ಎಂದು ರಾಜ್ಯ ನಗರಾಭಿವೃದ್ಧಿ ಇಲಾಖೆಗೆ ನ್ಯಾಯಪೀಠ ನಿರ್ದೇಶಿಸಿದೆ.






