ಪ್ರವಾದಿ ಮುಹಮ್ಮದ್(ಸ) ಅವರ ಬೋಧನೆಗಳು ಕ್ರಾಂತಿಕಾರಕ ಬದಲಾವಣೆಗೆ ಕಾರಣಕರ್ತವಾಗಿವೆ: ಸಿಎಂ ಸಿದ್ದರಾಮಯ್ಯ

ಬೆಂಗಳೂರು: ಮಾನವ ಇತಿಹಾಸದಲ್ಲಿ ಪ್ರವಾದಿ ಮುಹಮ್ಮದ್(ಸ) ಅವರ ಬೋಧನೆಗಳು, ಅನೇಕ ಕ್ರಾಂತಿಕಾರಕ ಬದಲಾವಣೆಗಳಿವೆ ಕಾರಣಕರ್ತವಾಗಿವೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಬಣ್ಣಿಸಿದ್ದಾರೆ.
ಶುಕ್ರವಾರ ನಗರದ ಅರಮನೆ ಮೈದಾನದಲ್ಲಿ ಬೆಂಗಳೂರಿನ ಜಂಟಿ ಮೀಲಾದ್ ಸಮಿತಿ ಆಯೋಜಿಸಿದ್ದ ಅಂತರ್ ರಾಷ್ಟ್ರೀಯ ಮೀಲಾದ್ದುನ್ನಬಿ ಸಮಾವೇಶವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಪ್ರವಾದಿಯವರು ಜನಿಸುವುದಕ್ಕಿಂತ ಮುಂಚಿತವಾಗಿ, ಅರಬ್ಬಿನ ಮರಳುಗಾಡಿನಲ್ಲಿ ವಾಸಿಸುತ್ತಿದ್ದ ಬುಡಕಟ್ಟುಗಳ ಜನರಿಗೆ ಒಬ್ಬರನ್ನು ಕಂಡರೆ, ಮತ್ತೊಬ್ಬರಿಗೆ ಆಗುತ್ತಿರಲಿಲ್ಲ. ವಿವಾಹ, ಊಟ, ಪ್ರಾರ್ಥನೆ ಮುಂತಾದವುಗಳಲ್ಲಿ ಮನುಷ್ಯನಲ್ಲಿನ ಅಸಮಾನತೆಯನ್ನು ತೊಡೆದು ಹಾಕಲು ಪ್ರವಾದಿ ಪ್ರಯತ್ನ ಮಾಡಿದರು ಎಂದು ಮುಖ್ಯಮಂತ್ರಿ ಹೇಳಿದರು.
ಪ್ರಾರ್ಥನೆ ಮಾಡುವಾಗ ಬಡವ, ಶ್ರೀಮಂತ ಎನ್ನದೆ ಭುಜಕ್ಕೆ ಭುಜ ತಾಗಿ ನಿಲ್ಲಬೇಕು. ಎದುರಿಗೆ ಬಂದವರನ್ನು ತಾರತಮ್ಯ ಮಾಡದೆ ಅಪ್ಪಿಕೊಳ್ಳಬೇಕು. ಒಂದೇ ಪಂಕ್ತಿಯಲ್ಲಿ ಕೂತು ಊಟ ಮಾಡಬೇಕು ಎಂದು ಬೋಧಿಸಿ ಸಮಾನತೆ ತರಲು ಪ್ರಯತ್ನಿಸಿದರು. ಇದು ಸಾಮಾನ್ಯ ವಿಚಾರವಲ್ಲ ಎಂದು ಸಿದ್ದರಾಮಯ್ಯ ತಿಳಿಸಿದರು.
ಇಸ್ಲಾಮ್ ಅಂದರೆ ಶಾಂತಿ, ಪ್ರವಾದಿ ಎಂದರೆ ಶಾಂತಿಯ ಧೂತ ಎಂದು ಆಧ್ಯಾತ್ಮಿಕ ಚಿಂತಕ ವಿನೋಬಾ ಭಾವೆ ತಿಳಿಸಿದ್ದಾರೆ. ಸಮಾಜದಲ್ಲಿ ಶಾಂತಿಯನ್ನು ಕಾಪಾಡಲು, ಮನುಷ್ಯತ್ವವನ್ನು ಬೆಳೆಸಲು ಪರಸ್ಪರ ಪ್ರೀತಿ, ವಿಶ್ವಾಸ, ಗೌರವ ನೆಲೆಸಲು ಪ್ರವಾದಿ ಪ್ರಯತ್ನ ಮಾಡಿದರು. ಅದೇ ರೀತಿ, 12ನೆ ಶತಮಾನದಲ್ಲಿ ಬಸವಣ್ಣ ಸಮಾಜದಲ್ಲಿ ಜಾತಿ, ವರ್ಗ ನಿರ್ಮೂಲನೆ ಮಾಡಿ, ಸಮ ಸಮಾಜ ನಿರ್ಮಾಣವಾಗಬೇಕು ಎಂದು ಪ್ರಯತ್ನಿಸಿದ್ದರು ಎಂದು ಮುಖ್ಯಮಂತ್ರಿ ಸ್ಮರಿಸಿದರು.
ದೇಶದಲ್ಲಿನ ಯಾವುದೆ ಧರ್ಮವಿರಲಿ. ಪರಧರ್ಮ ಸಹಿಷ್ಣುತೆಯನ್ನು ಬೆಳೆಸಿಕೊಳ್ಳಬೇಕು. ಸಂವಿಧಾನದಲ್ಲಿಯೂ ಸಹಿಷ್ಣುತೆಯ ಮಹತ್ವ ತಿಳಿಸಲಾಗಿದೆ. ನಾವು ಸಹಿಷ್ಣುತೆಯನ್ನು ಬೆಳೆಸಿಕೊಂಡರೆ, ಮನುಷ್ಯತ್ವವು ತಾನಾಗಿಯೆ ಬೆಳೆಯುತ್ತದೆ. ಪ್ರವಾದಿ ಮುಹಮ್ಮದ್(ಸ) ತಮ್ಮ ಜೀವನಪರ್ಯಂತ ಇದನ್ನೇ ಮಾಡಿದರು. ಪ್ರವಾದಿಯನ್ನು ಪ್ರತಿದಿನ ಸ್ಮರಿಸಿಕೊಂಡು, ಅವರು ಹಾಕಿಕೊಟ್ಟ ದಾರಿಯಲ್ಲಿ ನಡೆಯುವ ಪ್ರಯತ್ನ ಮಾಡೋಣ ಎಂದು ಸಿದ್ದರಾಮಯ್ಯ ಕರೆ ನೀಡಿದರು.
ರಾಜ್ಯದ ಎಲ್ಲ ನಾಗರಿಕರಿಗೆ, ವಿಶೇಷವಾಗಿ ಮುಸ್ಲಿಮರಿಗೆ ಈದ್ ಮೀಲಾದ್ದುನ್ನಬಿಯ ಶುಭಾಶಯಗಳು. ಈ ವರ್ಷ ವಿಶೇಷವಾಗಿ ಈ ಹಬ್ಬವನ್ನು ಆಚರಣೆ ಮಾಡುತ್ತಿದ್ದೇವೆ. ನೀವು ಬರಲೇಬೇಕು ಎಂದು ಸಚಿವ ಝಮೀರ್ ಅಹ್ಮದ್ ಖಾನ್ ಒತ್ತಾಯ ಮಾಡಿದರು. ಅದರಂತೆ, ಇಂದು ಈ ಕಾರ್ಯಕ್ರಮಕ್ಕೆ ಬಂದು ಅಂತರ್ ರಾಷ್ಟ್ರೀಯ ಮೀಲಾದ್ದುನ್ನಬಿ ಸಮಾವೇಶವನ್ನು ಸಂತೋಷದಿಂದ ಉದ್ಘಾಟನೆ ಮಾಡಿದ್ದೇನೆ ಎಂದು ಅವರು ತಿಳಿಸಿದರು.
ಈದ್ ಅಂದರೆ ಹಬ್ಬ. ಮೀಲಾದ್ದುನ್ನಬಿ ಎಂದರೆ ಪ್ರವಾದಿ ಮುಹಮ್ಮದ್(ಸ)ಅವರ ಹುಟ್ಟಿದ ದಿನ ಎಂದು ಅರ್ಥ. ಎಲ್ಲರೂ ಸಂಭ್ರಮ, ಸಂತೋಷ, ಸಡಗರದಿಂದ ಪ್ರವಾದಿ ಅವರ ಜನ್ಮದಿನಾಚರಣೆಯನ್ನು ಆಚರಣೆ ಮಾಡುತ್ತೀದ್ದೀರಾ. ಈ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರಿಗೆ ನಾನು ಗೌರವ ಸಲ್ಲಿಸುವ ಕೆಲಸ ಮಾಡುತ್ತಿದ್ದೇನೆ ಎಂದು ಮುಖ್ಯಮಂತ್ರಿ ಹೇಳಿದರು.
ಜಂಟಿ ಮೀಲಾದ್ ಸಮಿತಿ ವತಿಯಿಂದ ಮುಖ್ಯಮಂತ್ರಿ ಸಿದ್ದರಾಮಯ್ಯರನ್ನು ಸ್ಮರಣಿಕೆ ನೀಡಿ ಗೌರವಿಸಲಾಯಿತು. ಈ ಸಂದರ್ಭದಲ್ಲಿ ಸಮಸ್ತ ಕೇರಳ ಜಂಇಯ್ಯತುಲ್ ಉಲಮಾ ಜಂಟಿ ಕಾರ್ಯದರ್ಶಿ ಸೈಯ್ಯದ್ ಇಬ್ರಾಹೀಂ ಖಲೀಲ್ ಅಲ್ ಬುಖಾರಿ, ಕರ್ನಾಟಕ ರಾಜ್ಯ ಸುನ್ನಿ ಜಂಇಯ್ಯತುಲ್ ಉಲಮಾ ಅಧ್ಯಕ್ಷ ಝೈನುಲ್ ಉಲಮಾ ಮಾಣಿ ಉಸ್ತಾದ್, ಕಾವಲಕಟ್ಟೆ ಹಝ್ರತ್ ಡಾ.ಮುಹಮ್ಮದ್ ಫಾಝಿಲ್ ರಝ್ವಿ, ಸಚಿವ ಝಮೀರ್ ಅಹ್ಮದ್ ಖಾನ್, ಮುಖ್ಯಮಂತ್ರಿಯ ರಾಜಕೀಯ ಕಾರ್ಯದರ್ಶಿ ನಸೀರ್ ಅಹ್ಮದ್, ಸಚಿವ ಕೆ.ಜೆ.ಜಾರ್ಜ್, ಶಾಸಕ ಎನ್.ಎ.ಹಾರಿಸ್, ರಾಜ್ಯ ವಕ್ಫ್ ಕೌನ್ಸಿಲ್ ಉಪಾಧ್ಯಕ್ಷ ಎನ್.ಕೆ.ಎಂ.ಶಾಫಿ ಸಅದಿ, ಜಂಟಿ ಮೀಲಾದ್ ಸಮಿತಿಯ ಮುಹೀದುರ್ರಹ್ಮಾನ್, ಅಫ್ಸರ್ ಬೇಗ್, ಮೌಲಾನಾ ಝುಲ್ಫಿಖರ್ ನೂರಿ, ಉಸ್ಮಾನ್ ಶರೀಪ್, ಇಸ್ಮಾಯಿಲ್ ಶರೀಫ್(ನಾನಾ), ನಿವೃತ್ತ ಡಿಸಿಪಿ ಜಿ.ಎ.ಬಾವ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.







