ಎಎನ್ಎಫ್ ಮಾದರಿ ವಿಶೇಷ ಪಡೆ ರಚನೆಗೆ ಪ್ರಸ್ತಾವನೆ ಸಲ್ಲಿಕೆ : ಗೃಹ ಸಚಿವ ಜಿ.ಪರಮೇಶ್ವರ್
‘ಕರಾವಳಿ ಜಿಲ್ಲೆಗಳಲ್ಲಿ ಸೌಹಾರ್ದ ಕದಡುವ ಚಟುವಟಿಕೆಗಳಿಗೆ ಅಂಕುಶ’

ಜಿ.ಪರಮೇಶ್ವರ್
ಬೆಂಗಳೂರು : ರಾಜ್ಯದ ಕರಾವಳಿ ಭಾಗದ ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಗಳಲ್ಲಿ ಸಮಾಜದ ಸೌಹಾರ್ದ ಕದಡುವ ಚಟುವಟಿಕೆಗಳಿಗೆ ಅಂಕುಶ ಹಾಕಲು, ನಕ್ಸಲ್ ನಿಗ್ರಹ ದಳ (ಎಎನ್ಎಫ್)ದ ಮಾದರಿಯಲ್ಲಿ ವಿಶೇಷ ಪಡೆ ರಚನೆ ಮಾಡಲು ಸರಕಾರಕ್ಕೆ ಪ್ರಸ್ತಾವನೆ ಬಂದಿದೆ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ತಿಳಿಸಿದರು.
ಬುಧವಾರ ಸದಾಶಿವನಗರದಲ್ಲಿರುವ ತಮ್ಮ ನಿವಾಸದ ಬಳಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಎಎನ್ಎಫ್ ಮಾದರಿಯಲ್ಲಿ ವಿಶೇಷ ಪಡೆ ರಚನೆ ಮಾಡುವ ಪ್ರಸ್ತಾವನೆಯನ್ನು ರಾಜ್ಯ ಪೊಲೀಸ್ ಮಹಾನಿರ್ದೇಶಕರು ಸರಕಾರಕ್ಕೆ ಕಳುಹಿಸಿದ್ದಾರೆ. ಈ ಬಗ್ಗೆ ಸರಕಾರದ ಮಟ್ಟದಲ್ಲಿ ಚರ್ಚಿಸಿ, ಎರಡು-ಮೂರು ದಿನಗಳಲ್ಲಿ ತೀರ್ಮಾನ ಕೈಗೊಳ್ಳಲಾಗುವುದು. ಅಲ್ಲದೇ, ಅಗತ್ಯ ಕಂಡು ಬಂದರೆ ರಾಜ್ಯದ ಇತರ ಜಿಲ್ಲೆಗಳಿಗೂ ಈ ವಿಶೇಷ ಪಡೆಯ ಕಾರ್ಯವ್ಯಾಪ್ತಿಯನ್ನು ವಿಸ್ತರಿಸಲಾಗುವುದು ಎಂದು ಹೇಳಿದರು.
ಸಾಮಾಜಿಕ ಜಾಲತಾಣಗಳಲ್ಲಿ ದೇಶ ವಿರೋಧಿ ಹಾಗೂ ದ್ವೇಷದ ಪೋಸ್ಟ್ಗಳನ್ನು ಹಾಕುವವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಿದ್ದೇವೆ. ಅಲ್ಲದೇ, ಅವಹೇಳನಕಾರಿ, ಕೋಮು ಭಾವನೆ ಕೆರಳಿಸುವ, ವೈಯಕ್ತಿಕ ತೇಜೋವಧೆ ಮಾಡುವಂತಹ ಪೋಸ್ಟ್ ಗಳಿಗೆ ಕಡಿವಾಣ ಹಾಕಬೇಕಿದೆ. ಈ ಸಂಬಂಧ ವಿಸ್ತೃತ ಕಾರ್ಯ ಯೋಜನೆ ರೂಪಿಸಲಾಗುತ್ತಿದೆ ಎಂದು ಪರಮೇಶ್ವರ್ ಹೇಳಿದರು.
ಮಂಗಳೂರಿನ ಸುಹಾಸ್ ಶೆಟ್ಟಿ ಹತ್ಯೆ ಪ್ರಕರಣವನ್ನು ಎನ್ಐಎಗೆ ವಹಿಸುವ ಅಗತ್ಯವಿಲ್ಲ. ಬಿಜೆಪಿಯವರು ರಾಜ್ಯಪಾಲರಿಗೆ ಮನವಿ ಮಾಡಿದ್ದಾರೆ. ರಾಜ್ಯಪಾಲರು ಯಾವ ನಿರ್ಧಾರ ತೆಗೆದುಕೊಳ್ಳುತ್ತಾರೋ ಗೊತ್ತಿಲ್ಲ ಎಂದು ಅವರು ತಿಳಿಸಿದರು.
ಬಿಜೆಪಿ ಹಮ್ಮಿಕೊಂಡಿರುವ ತಿರಂಗಾ ಯಾತ್ರೆ ಕುರಿತು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ದೇಶದ ಭದ್ರತೆ ವಿಚಾರದಲ್ಲಿ ಆರಂಭದಿಂದಲೂ ನಾವು ರಾಜಕೀಯ ಬಣ್ಣ ಬಳಿಯಬೇಡಿ ಎಂದು ಹೇಳುತ್ತಿದ್ದೆವು. ಪ್ರತಿಯೊಬ್ಬ ಭಾರತೀಯನಿಗೂ ತನ್ನದೇ ಆದ ಆಲೋಚನೆಗಳು ಇರುತ್ತವೆ. ಆದರೆ, ದೇಶದ ರಕ್ಷಣೆಗೆ ಎಲ್ಲರೂ ಒಂದಾಗಿರಬೇಕು. ಕಾಂಗ್ರೆಸ್ ಪಕ್ಷ ಮುಂಚೂಣಿಯಲ್ಲಿದ್ದು ತಿರಂಗಾ ಯಾತ್ರೆ ಮಾಡಿತು. ನಾವು ಎಲ್ಲ ಪಕ್ಷದವರನ್ನೂ ಆಹ್ವಾನ ನೀಡಿದೆವು. ಬಿಜೆಪಿಯವರು ನಮಗಿಂತ ಮುಂಚೆ ತಿರಂಗಾ ಯಾತ್ರೆ ಮಾಡಿ, ನಮಗೆ ಆಹ್ವಾನ ಕೊಟ್ಟಿದ್ದರೆ ನಾವು ಸಹಕಾರ ನೀಡುತ್ತಿದ್ದೆವು ಎಂದು ಹೇಳಿದರು.
ಜಾತಿ ಗಣತಿ ವರದಿಯಲ್ಲಿನ ಶಿಫಾರಸ್ಸುಗಳಿಗೆ ಸಂಬಂಧಿಸಿದಂತೆ ಸಚಿವರು ತಮ್ಮ ಅಭಿಪ್ರಾಯಗಳನ್ನು ಲಿಖಿತ ರೂಪದಲ್ಲಿ ನೀಡುವಂತೆ ಮುಖ್ಯಮಂತ್ರಿ ಸೂಚಿಸಿದ್ದಾರೆ. ಈಗಾಗಲೆ ಹಲವು ಸಚಿವರು ತಮ್ಮ ಅಭಿಪ್ರಾಯಗಳನ್ನು ಸಲ್ಲಿಸಿದ್ದು, ಇನ್ನೂ ಕೆಲವರು ನೀಡುವುದು ಬಾಕಿಯಿದೆ. ಜಾತಿ ಗಣತಿ ವರದಿ ಕುರಿತು ಕೇವಲ ಸಚಿವ ಸಂಪುಟ ಸಭೆಯಲ್ಲಷ್ಟೇ ಚರ್ಚಿಸಿ, ತೀರ್ಮಾನ ಕೈಗೊಳ್ಳುವುದಲ್ಲ. ಈ ಬಗ್ಗೆ ಹೆಚ್ಚಿನ ಚರ್ಚೆಗಳು ನಡೆಯಬೇಕಿದೆ ಎಂದು ಪರಮೇಶ್ವರ್ ತಿಳಿಸಿದರು.
ಒಳ ಮೀಸಲಾತಿ ಕಲ್ಪಿಸುವ ಸಂಬಂಧ ಪರಿಶಿಷ್ಟ ಜಾತಿಗಳ ಸಮೀಕ್ಷೆ ತುಂಬಾ ಚೆನ್ನಾಗಿ ನಡೆಯುತ್ತಿದೆ. ಸರಕಾರ ಈಗ ನೀಡಿರುವ ಕಾಲಾವಕಾಶವನ್ನು ವಿಸ್ತರಿಸುವಂತೆ ಮನವಿ ಸಲ್ಲಿಸಿದ್ದಾರೆ. ಈ ಬಗ್ಗೆ ಮುಖ್ಯಮಂತ್ರಿ ಹಾಗೂ ನ್ಯಾ.ಎಚ್.ಎನ್.ನಾಗಮೋಹನ್ ದಾಸ್ ಸಮಿತಿಗೆ ಪ್ರಸ್ತಾವನೆ ಸಲ್ಲಿಸುವಂತೆ ತಿಳಿಸಿದ್ದೇನೆ ಎಂದು ಅವರು ಹೇಳಿದರು.