ಐತಿಹಾಸಿಕ ಸ್ಮಾರಕಗಳ ರಕ್ಷಣೆ ಅಗತ್ಯ: ಸಿಎಂ ಸಿದ್ದರಾಮಯ್ಯ

ಬೆಂಗಳೂರು, ಸೆ.25: ಮುಂದಿನ ತಲೆ ಮಾರುಗಳಿಗೆ ನಮ್ಮತನದ ಮಹತ್ವವನ್ನು ಸಾರಲು ಸ್ಮಾರಕಗಳ ರಕ್ಷಣೆ ಅತ್ಯಗತ್ಯ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.
ಸೋಮವಾರ ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಪ್ರವಾಸೋದ್ಯಮ ಮತ್ತು ಪುರಾತತ್ವ ಸಂಗ್ರಹಾಲಯಗಳು ಮತ್ತು ಪರಂಪರೆ ಇಲಾಖೆ ವತಿಯಿಂದ ‘ನಮ್ಮ ಸ್ಮಾರಕ: ನಮ್ಮ ಪರಂಪರೆ, ನಮ್ಮ ಗುರುತು, ನಮ್ಮ ಹೆಮ್ಮೆ’ ಅಭಿಯಾನದ ಸಂವಾದ ಮತ್ತು ಡಿಜಿಟಲ್ ವೇದಿಕೆಯ ಉದ್ಘಾಟಿಸಿ ಮಾತನಾಡಿದ ಅವರು, ಇತಿಹಾಸ ತಿಳಿಯದವರು ಭವಿಷ್ಯ ರೂಪಿಸಲಾರರು. ನಮ್ಮ ಇತಿಹಾಸ, ಪರಂಪರೆಯನ್ನು ಈಗಿನ ಪೀಳಿಗೆಗೆ ಅರ್ಥ ಮಾಡಿಸಲು, ಮುಂದಿನ ತಲೆ ಮಾರುಗಳಿಗೆ ನಮ್ಮತನದ ಮಹತ್ವವನ್ನು ತಿಳಿಸಲು ಸ್ಮಾರಕಗಳ ರಕ್ಷಣೆ ಅತ್ಯಗತ್ಯ ಎಂದರು.
ಸ್ಮಾರಕಗಳ ರಕ್ಷಣೆಗೆ ಸರಕಾರದ ಜತೆಗೆ ಸಾರ್ವಜನಿಕರು ಕೈ ಜೋಡಿಸಿದರೆ, ನಮ್ಮ ಇತಿಹಾಸ ಮತ್ತು ಪರಂಪರೆಯನ್ನು ಮುಂದಿನ ಪೀಳಿಗೆಗೆ ಅರಿವು ಮೂಡಿಸಲು ಸಾಧ್ಯವಾಗುತ್ತದೆ. ರಾಜ್ಯದಲ್ಲಿ ಪ್ರವಾಸೋದ್ಯಮ ಬೆಳೆಸಲು ಸಾಕಷ್ಟು ಅವಕಾಶಗಳಿವೆ. ಅಧ್ಯಾತ್ಮಿಕ ಮತ್ತು ಪರಿಸರ ಪ್ರವಾಸಿ ಕೇಂದ್ರಗಳಿಗೆ, ದೇವಾಲಯಗಳಿಗೆ ಬಡವರೂ ಹೋಗಲು ಅವಕಾಶ ಕಲ್ಪಿಸಬೇಕು ಎನ್ನುವ ಕಾಳಜಿ "ಶಕ್ತಿ" ಯೋಜನೆಯ ಹಿಂದಿದೆ.
ಮಹಿಳೆಯರು ಇದರ ಪ್ರಯೋಜನ ಪಡೆದು ದೇವಸ್ಥಾನಗಳ ಹೋಗುತ್ತಿರುವುದರಿಂದ ಯಾತ್ರಾರ್ಥಿಗಳ ಸಂಖ್ಯೆ ಹೆಚ್ಚಾಗಿ ಆದಾಯ ಹೆಚ್ಚಾಗಿದೆ. ಆರ್ಥಿಕತೆಗೆ ಚೈತನ್ಯ ಬಂದು ವ್ಯಾಪಾರ, ವಹಿವಾಟು ಹೆಚ್ಚಾಗಿ ಉದ್ಯೋಗ ಸೃಷ್ಟಿಯಾಗುತ್ತಿದೆ. ಶಕ್ತಿ ಯೋಜನೆ ಹಿಂದೆ ಇಷ್ಟು ಎಲ್ಲ ಕಾಳಜಿಗಳು ಕೆಲಸ ಮಾಡಿವೆ ಎಂದು ತಿಳಿಸಿದರು.
ಪ್ರವಾಸೋದ್ಯಮ ಸಚಿವ ಡಾ.ಎಚ್.ಕೆ.ಪಾಟೀಲ್ ಮಾತನಾಡಿ, ಕರ್ನಾಟಕದ ಮೂರು ವಿಶ್ವ ಪರಂಪರೆ ತಾಣಗಳಾದ ಹಂಪಿ ಮತ್ತು ಪಟ್ಟದಕಲ್ಲು, ಸ್ಮಾರಕ ಸಮೂಹ ಮತ್ತು ನೈಸರ್ಗಿಕ ತಾಣವಾದ ಪಶ್ಚಿಮಘಟ್ಟಗಳನ್ನು ಘೋಷಿಸಲಾಗಿದ್ದು, ಇತ್ತೀಚಿಗಷ್ಟೇ ಬೇಲೂರಿನ ಶ್ರೀಚನ್ನಕೇಶವ, ಹಳೇಬೀಡಿನ ಶ್ರೀಹೊಯ್ಸಳೇಶ್ವರ ಮತ್ತು ಸೋಮನಾಥಪುರದ ಶ್ರೀಕೇಶವ ದೇವಾಲಯದ ಸಮೂಹಗಳನ್ನು ಒಳಗೊಂಡ ಹೊಯ್ಸಳ ಪವಿತ್ರ ವಾಸ್ತುಶಿಲ್ಪ ಸಮೂಹ ತಾಣವು ಯುನೆಸ್ಕೋ ಸಂಸ್ಥೆಯು ವಿಶ್ವಪರಂಪರೆ ಪಟ್ಟಿಗೆ ಸೇರ್ಪಣೆಗೊಂಡಿರುತ್ತದೆ ಎಂದರು.
ಕರ್ನಾಟಕ ರಾಜ್ಯ ವಿಜ್ಞಾನಮತ್ತು ತಂತ್ರಜ್ಞಾನ ಮಂಡಳಿ ಸಹಯೋಗದೊಂದಿಗೆ ಜಿಯೋಸ್ಫೇಷಿಯಲ್ ಮತ್ತು 3ಡಿ ಲೇಸರ್ ಸ್ಕ್ಯಾನಿಂಗ್ ತಂತ್ರಜ್ಞಾನಗಳನ್ನು ಬಳಸಿಕೊಂಡು ಕರ್ನಾಟಕ ರಾಜ್ಯ ಸಂರಕ್ಷಿತ ಸ್ಮಾರಕಗಳ ಡಿಜಿಟಲ್ ಡಾಕ್ಯುಮೆಂಟೇಶನ್ ಅನ್ನುಉ ಕೈಗೊಳ್ಳಲಾಗಿದೆ ಎಂದ ಅವರು, ಸ್ಮಾರಕದ ದತ್ತು ಯೋಜನೆ ಮೂಲಕ ಕರ್ನಾಟಕದ ಸ್ಮಾರಕಗಳನ್ನು ನೋಡಲೇ ಬೇಕಾದ ಪ್ರವಾಸೋದ್ಯಮ ಅನುಭವಕ್ಕಾಗಿ ವೇದಿಕೆಯನ್ನು ಸೃಷ್ಟಿಸುವುದಲ್ಲದೆ, ಮೂಲಭೂತ ಸೌಕರ್ಯಗಳ ಒದಗಿಸಿ ಸ್ಮಾರಕಗಳನ್ನು ಅಭಿವೃದ್ಧಿಪಡಿಸುವ ನಿಟ್ಟಿನಲ್ಲಿ ಸ್ಮಾರಕಗಳನ್ನು ದತ್ತು ಯೋಜನೆಯನ್ನು ಘೋಷಿಸಿ ಆಸಕ್ತ ಸಂಘ-ಸಂಸ್ಥೆ, ಕಂಪೆನಿಗಳು ಕಾಪೆರ್Çೀರೇಟ್ಸ್ ಸಾಮಾಜಿಕ ಹೊಣೆಗಾರಿಕೆ ಕಾರ್ಯಕ್ರಮಗಳ ಅಡಿಯಲ್ಲಿ ಸ್ಮಾರಕಗಳ ದತ್ತು ಪಡೆಯಲು ಅವಕಾಶವನ್ನು ಕಲ್ಪಿಸಲಾಗಿದೆ ಎಂದರು.
ಇದೇ ಸಂದಭದಲ್ಲಿ ಬ್ರಿಗೇಡ್ ಸಂಸ್ಥೆಯೊಂದಿಗೆ ವೆಂಕಟಪ್ಪ ಚಿತ್ರಶಾಲೆಯ ನವೀಕರಣ ಹಾಗೂ ಕಲ್ಕಿ ಸಂಸ್ಥೆಗೆ ಯೋಜನಾ ನಿರ್ವಹಣೆ ಘಟಕದ ಒಡಂಬಡಿಕೆ ಪತ್ರಗಳಿಗೆ ಸಹಿ ಹಾಕಲಾಯಿತು. ಸಂರಕ್ಷಣಾ ಸ್ಮಾರಕಗಳ ಯೋಜನೆಗೆ ಒಳಪಡಲು ಆಸಕ್ತಿ ವ್ಯಕ್ತಪಡಿಸಿದ ಸಂಸ್ಥೆಗಳಿಗೆ ಆಶಯಪತ್ರ ವಿತರಿಸಲಾಯಿತು. ಸ್ಟಾರ್ಟ್ ಅಪ್ ವಿಷನ್ ಗ್ರೂಪ್ ಮತ್ತು ಕಲ್ಕಿ ಫೌಂಡೇಶನ್ ಅಧ್ಯಕ್ಷ ಪ್ರಶಾಂತ್ ಪ್ರಕಾಶ್, ಪ್ರವಾಸೋದ್ಯಮ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿ ಕಪಿಲ್ ಮೋಹನ್, ಪ್ರವಾಸೋದ್ಯಮ ಇಲಾಖೆ ನಿರ್ದೇಶಕ ವಿ.ರಾಮ್ ಪ್ರಸಾತ್ ಮನೋಹರ್, ಪುರಾತತ್ವ ಇಲಾಖೆಯ ಆಯುಕ್ತ ಎ.ದೇವರಾಜು ಸೇರಿದಂತೆ ಪ್ರಮುಖರಿದ್ದರು.







