ದೇಶದಾದ್ಯಂತ ಬ್ಯಾಂಕ್ ಸಿಬ್ಬಂದಿಗೆ ಭಾಷಾ ಸಂವೇದನಾ ತರಬೇತಿ ನೀಡಿ: ಸಿಎಂ ಸಿದ್ದರಾಮಯ್ಯ ಆಗ್ರಹ
►ಕನ್ನಡ ಮಾತಾಡುವುದೇ ಇಲ್ಲ ಎಂದು ಗ್ರಾಹಕರೊಬ್ಬರಿಗೆ ಹೇಳಿದ್ದ ಬ್ಯಾಂಕ್ ಮ್ಯಾನೇಜರ್ ►ತಕ್ಷಣವೇ ವರ್ಗಾವಣೆ ಮಾಡಿದ ಎಸ್ ಬಿ ಐ

ಬೆಂಗಳೂರು: ದೇಶದಾದ್ಯಂತ ಬ್ಯಾಂಕ್ ಸಿಬ್ಬಂದಿಗೆ ಸಾಂಸ್ಕೃತಿಕ ಮತ್ತು ಭಾಷಾ ಸಂವೇದನಾ ತರಬೇತಿ ನೀಡಿ ಎಂದು ಸಿಎಂ ಸಿದ್ದರಾಮಯ್ಯ ಅವರು ಕೇಂದ್ರ ವಿತ್ತ ಸಚಿವರನ್ನು ಆಗ್ರಹಿಸಿದ್ದಾರೆ.
ಆನೇಕಲ್ ತಾಲೂಕಿನ ಸೂರ್ಯ ನಗರದಲ್ಲಿರುವ ಎಸ್ ಬಿ ಐ ಶಾಖೆಯ ಮಹಿಳಾ ವ್ಯವಸ್ಥಾಪಕರೊಬ್ಬರು, ಇಲ್ಲಿರುವ ವರೆಗೆ ನಾನು ಕನ್ನಡ ಮಾತನಾಡುವುದಿಲ್ಲ ಎಂದು ಹೇಳಿದ್ದ ವೀಡಿಯೊ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಈ ಕುರಿತು, ಸಿಎಂ ಸಿದ್ದರಾಮಯ್ಯ ಅವರು ಸಾಮಾಜಿಕ ಜಾಲತಾಣ ಎಕ್ಸ್ ನ ತಮ್ಮ ಖಾತೆಯಲ್ಲಿ ಈ ಕುರಿತು ಪೋಸ್ಟ್ ಮಾಡಿದ್ದಾರೆ.
“ಆನೇಕಲ್ ತಾಲ್ಲೂಕಿನ ಸೂರ್ಯನಗರದಲ್ಲಿರುವ ಎಸ್ ಬಿ ಐ ಶಾಖಾ ವ್ಯವಸ್ಥಾಪಕರು ಕನ್ನಡದಲ್ಲಿ ಮಾತನಾಡಲು ನಿರಾಕರಿಸಿ ನಾಗರಿಕರನ್ನು ಕಡೆಗಣಿಸಿರುವುದು ತೀವ್ರವಾಗಿ ಖಂಡನೀಯ”, ಎಂದು ಅವರು ಹೇಳಿದ್ದಾರೆ.
“ಅಧಿಕಾರಿಯನ್ನು ವರ್ಗಾವಣೆ ಮಾಡುವಲ್ಲಿ ಎಸ್ಬಿಐನ ತ್ವರಿತ ಕ್ರಮವನ್ನು ನಾವು ಪ್ರಶಂಸಿಸುತ್ತೇವೆ. ಈ ವಿಷಯವನ್ನು ಇಲ್ಲಿಗೆ ಮುಕ್ತಾಯಗೊಳಿಸಲಾಗಿದೆ ಎಂದು ಪರಿಗಣಿಸಬಹುದು. ಇಂತಹ ಘಟನೆಗಳು ಮರುಕಳಿಸಬಾರದು. ಎಲ್ಲಾ ಬ್ಯಾಂಕ್ ಉದ್ಯೋಗಿಗಳು, ಗ್ರಾಹಕರನ್ನು ಘನತೆಯಿಂದ ನಡೆಸಿಕೊಳ್ಳಬೇಕು . ಸ್ಥಳೀಯ ಭಾಷೆಯಲ್ಲಿ ಮಾತನಾಡಲು ಎಲ್ಲ ಪ್ರಯತ್ನಗಳನ್ನು ಮಾಡಬೇಕು” ಎಂದು ಸಿದ್ದರಾಮಯ್ಯ ಅಭಿಪ್ರಾಯಪಟ್ಟಿದ್ದಾರೆ.
“@FinMinIndia ಮತ್ತು ಹಣಕಾಸು ಸೇವೆಗಳ ಇಲಾಖೆಯು ಭಾರತದಾದ್ಯಂತ ಎಲ್ಲಾ ಬ್ಯಾಂಕ್ ಸಿಬ್ಬಂದಿಗೆ ಸಾಂಸ್ಕೃತಿಕ ಮತ್ತು ಭಾಷಾ ಸಂವೇದನಾ ತರಬೇತಿಯನ್ನು ಕಡ್ಡಾಯಗೊಳಿಸಬೇಕೆಂದು ನಾನು ಒತ್ತಾಯಿಸುತ್ತೇನೆ. ಸ್ಥಳೀಯ ಭಾಷೆಯನ್ನು ಗೌರವಿಸುವುದು ಎಂದರೆ ಜನರನ್ನು ಗೌರವಿಸುವುದು”, ಎಂದು ಸಿಎಂ ಸಿದ್ದರಾಮಯ್ಯ ಅವರು ತಮ್ಮ ಪೋಸ್ಟ್ ನಲ್ಲಿ ತಿಳಿಸಿದ್ದಾರೆ.
ಏನಿದು ಘಟನೆ :
ಚಂದಾಪುರ ಸೂರ್ಯಸಿಟಿಯ ಎಸ್ಬಿಐ ಬ್ಯಾಂಕ್ಗೆ ಕೆಲಸ ನಿಮಿತ್ತ ಗ್ರಾಹಕರೊಬ್ಬರು ಹೋಗಿದ್ದರು. ಬ್ಯಾಂಕ್ ಮ್ಯಾನೇಜರ್ ಪ್ರಿಯಾಂಕಾ, ಗ್ರಾಹಕರ ಜೊತೆ ಹಿಂದಿಯಲ್ಲಿ ಮಾತನಾಡಿದ್ದಾರೆ. ಇದಕ್ಕೆ, ಗ್ರಾಹಕ ಕನ್ನಡದಲ್ಲಿ ಮಾತನಾಡಿ ಎಂದಿದ್ದಾರೆ. ಆಗ, ಬ್ಯಾಂಕ್ ಮ್ಯಾನೇಜರ್ ಪ್ರಿಯಾಂಕಾ ಹಿಂದಿಯಲ್ಲಿ ಮಾತನಾಡುವಂತೆ ಹೇಳಿದ್ದು, ಇದು ಭಾರತ, ನಾನು ಯಾವತ್ತೂ ಕನ್ನಡದಲ್ಲಿ ಮಾತಾಡಲ್ಲ ಎಂದು ಹೇಳಿದ್ದ ವಿಡಿಯೋ ವೈರಲ್ ಆಗಿತ್ತು.
ಕ್ಷಮೆ ಕೇಳಿದ ಮ್ಯಾನೇಜರ್ :
ಘಟನೆ ಬಗ್ಗೆ ಆಕ್ರೋಶ ವ್ಯಕ್ತವಾಗುತ್ತಿದ್ದಂತಯೇ ಬ್ಯಾಂಕ್ ನ ಸಿಬ್ಬಂದಿಯ ಬಳಿ ಕನ್ನಡದಲ್ಲಿ ಹೇಳಿಸಿಕೊಂಡು ಮ್ಯಾನೇಜರ್ ಕ್ಷಮೆ ಕೇಳಿದ್ದಾರೆ. ಈ ವಿಡಿಯೋ ವೈರಲ್ ಆಗಿದೆ.







