ನಾಳೆಯಿಂದ ರಾಜ್ಯಾದ್ಯಂತ ಪಲ್ಸ್ ಪೋಲಿಯೋ ಕಾರ್ಯಕ್ರಮ

ಸಾಂದರ್ಭಿಕ ಚಿತ್ರ | PC : Gemini AI
ಬೆಂಗಳೂರು : ನಾಳೆಯಿಂದ(ಡಿ.21) ರಾಜ್ಯಾದ್ಯಂತ ಪಲ್ಸ್ ಪೋಲಿಯೋ ಕಾರ್ಯಕ್ರಮ ಆರಂಭವಾಗಲಿದ್ದು, ಎಲ್ಲ ಜಿಲ್ಲೆಗಳ 33,258 ಬೂತ್ಗಳಲ್ಲಿ ಐದು ವರ್ಷದೊಳಗಿನ ಎಲ್ಲ ಮಕ್ಕಳಿಗೆ ಪೋಲಿಯೋ ಲಸಿಕೆ ಹಾಕಲು ರಾಜ್ಯ ಸರಕಾರ ಕ್ರಮ ವಹಿಸಿದೆ.
ಡಿ.21ರಂದು ಪೋಲಿಯೋ ಬೂತ್ಗಳಲ್ಲಿ ಹಾಗೂ ನಂತರದ 3 ದಿನಗಳಲ್ಲಿ ಮನೆ-ಮನೆ ಭೇಟಿಯ ಮೂಲಕ 5 ವರ್ಷದೊಳಗಿನ ಎಲ್ಲ ಮಕ್ಕಳಿಗೆ ವಿಶೇಷವಾಗಿ ಗ್ರಾಮೀಣ ಪ್ರದೇಶ, ನಗರ ಪ್ರದೇಶದ ವಲಸಿಗ ಸಮುದಾಯದ ಮತ್ತು ಸ್ಲಂಗಳಲ್ಲಿ ವಾಸಿಸುವ ಮಕ್ಕಳಿಗೆ ಪೋಲಿಯೋ ಲಸಿಕೆ ನೀಡುವ ವ್ಯವಸ್ಥೆ ಮಾಡಲಾಗಿದೆ.
ರಾಜ್ಯದ ಎಲ್ಲ ಆಸ್ಪತ್ರೆಗಳಲ್ಲದೆ, ಹಳ್ಳಿಗಳು, ಗುಡ್ಡಗಾಡು ಪ್ರದೇಶ, ಇಟ್ಟಿಗೆ ಗೂಡುಗಳು, ಕೊಳಚೆ ಪ್ರದೇಶಗಳು, ವಲಸೆ ಪ್ರದೇಶಗಳು, ತೋಟದ ಮನೆಗಳು, ನಗರ ಕೊಳಚೆ ಪ್ರದೇಶಗಳಲ್ಲಿ ವಾಸಿಸುವ ಮಕ್ಕಳಿಗೆ ಲಸಿಕೆ ನೀಡಲು ವಿಶೇಷ ಗಮನ ನೀಡಲಾಗಿದೆ. ಇದಕ್ಕಾಗಿ ರೈಲ್ವೆ ನಿಲ್ದಾಣಗಳು, ಮೆಟ್ರೋ ನಿಲ್ದಾಣಗಳು, ವಿಮಾನ ನಿಲ್ದಾಣಗಳು ಮತ್ತು ಬಂದರುಗಳಲ್ಲಿಯೂ ಬೂತ್ಗಳನ್ನು ಸ್ಥಾಪಿಸಿ ಪೋಲಿಯೋ ಲಸಿಕೆ ನೀಡಲು ಕ್ರಮ ವಹಿಸಲಾಗಿದೆ.
ರಾಜ್ಯದಲ್ಲಿ 62,40,114 ಮಕ್ಕಳಿಗೆ ಲಸಿಕೆ ಹಾಕುವ ಗುರಿಯನ್ನು ಇಟ್ಟುಕೊಳ್ಳಲಾಗಿದೆ. ಇದಕ್ಕಾಗಿ 33,258 ಬೂತ್ಗಳನ್ನು ಸ್ಥಾಪಿಸಲಾಗಿದೆ. 1,030 ಸಂಚಾರಿ ತಂಡ, 2,096 ಟ್ರಾನ್ಸಿಟ್ ತಂಡ, 1,13,115 ಲಸಿಕಾ ಕಾರ್ಯಕರ್ತರು, 7,322 ಮೇಲ್ವಿಚಾರಕರನ್ನು ನೇಮಕ ಮಾಡಲಾಗಿದೆ ಎಂದು ಸರಕಾರವು ಪ್ರಕಟನೆಯಲ್ಲಿ ತಿಳಿಸಿದೆ.







