ಜೂ.28ರಂದು ‘ಪಲ್ಸ್ ಪೋಲಿಯೋ’ ಅಭಿಯಾನ

ಸಾಂದರ್ಭಿಕ ಚಿತ್ರ | PC : Gemini AI
ಬೆಂಗಳೂರು : ರಾಜ್ಯದಲ್ಲಿ 5 ವರ್ಷದೊಳಗಿನ ಎಲ್ಲ ಮಕ್ಕಳಿಗೆ ಕಡ್ಡಾಯವಾಗಿ ಪೋಲಿಯೋ ಲಸಿಕೆ ನೀಡುವ ಉದ್ದೇಶದಿಂದ ಜೂ.28ರ ರವಿವಾರದಂದು ‘ರಾಷ್ಟ್ರೀಯ ಲಸಿಕಾ ದಿನ (ಪಲ್ಸ್ ಪೋಲಿಯೋ)' ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.
ಭಾರತ 14 ವರ್ಷಗಳಿಗೂ ಮೇಲ್ಪಟ್ಟು ಪೋಲಿಯೊ ಮುಕ್ತ ರಾಷ್ಟ್ರವಾಗಿದ್ದರೂ, ಜಗತ್ತಿನ ಕೆಲವು ಭಾಗಗಳಲ್ಲಿ ಹಾಗೂ ನೆರೆ ರಾಷ್ಟ್ರಗಳಲ್ಲಿ ‘ವೈಲ್ಡ್ ಪೋಲಿಯೋ ವೈರಸ್' ಹರಡುವಿಕೆ ಇನ್ನೂ ಇರುವುದರಿಂದ ಈ ಮುನ್ನೆಚ್ಚರಿಕೆ ಕ್ರಮ ಅತ್ಯಗತ್ಯವಾಗಿದೆ.
ಮೊದಲನೇ ದಿನ ಜೂ.28 ರಂದು ಪೋಲಿಯೋ ಬೂತ್ಗಳಲ್ಲಿ ಲಸಿಕೆ ನೀಡಲಾಗುವುದು. ನಂತರದ 2 ರಿಂದ 3 ದಿನಗಳಲ್ಲಿ ಆರೋಗ್ಯ ಕಾರ್ಯಕರ್ತರು ಮನೆ ಮನೆಗೆ ಭೇಟಿ ನೀಡಿ ಲಸಿಕೆ ವಂಚಿತ ಮಕ್ಕಳಿಗೆ ಲಸಿಕೆ ಹಾಕಲಿದ್ದಾರೆ. ವಲಸಿಗ ಸಮುದಾಯದ ಮಕ್ಕಳು, ಹೆಚ್ಚು ಅಪಾಯದಂಚಿನಲ್ಲಿರುವ ಪ್ರದೇಶಗಳು ಹಾಗೂ ನಗರ ಪ್ರದೇಶದ ಕೊಳಗೇರಿ ಪ್ರದೇಶಗಳಲ್ಲಿ ವಾಸಿಸುವ ಮಕ್ಕಳಿಗೆ ವಿಶೇಷ ಆದ್ಯತೆ ನೀಡಲಾಗುತ್ತದೆ.
ಸಾರ್ವಜನಿಕರು ಹಾಗೂ ಪೋಷಕರು ತಮ್ಮ 5 ವರ್ಷದೊಳಗಿನ ಮಕ್ಕಳಿಗೆ ತಪ್ಪದೇ ಪೋಲಿಯೋ ಹನಿಗಳನ್ನು ಹಾಕಿಸಿ ಸಹಕರಿಸುವಂತೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯು ಪ್ರಕಟಣೆಯಲ್ಲಿ ತಿಳಿಸಿದೆ.




