ಡಿ.21ಕ್ಕೆ ಪಲ್ಸ್ ಪೋಲಿಯೋ ದಿನ |ತಪ್ಪದೇ ಪೋಲಿಯೋ ಹನಿ ಹಾಕಿಸಿ : ದಿನೇಶ್ ಗುಂಡೂರಾವ್

ಬೆಳಗಾವಿ : ಇದೇ ತಿಂಗಳ 21ರಂದು ಪೋಲಿಯೋ ಲಸಿಕೆ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು, ಅಂದಾಜು 62 ಲಕ್ಷ ಮಕ್ಕಳಿಗೆ ಪೋಲಿಯೋ ಹನಿ ಹಾಕಲಾಗುವುದು ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಚಿವ ದಿನೇಶ್ ಗುಂಡೂರಾವ್ ತಿಳಿಸಿದ್ದಾರೆ.
ಬುಧವಾರ ಇಲ್ಲಿನ ಸುವರ್ಣ ವಿಧಾನಸೌಧದಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, ರಾಜ್ಯದ ಎಲ್ಲ ಆಸ್ಪತ್ರೆ, ಅಂಗನವಾಡಿ, ಗುಡ್ಡಗಾಡು ಪ್ರದೇಶ, ಇಟ್ಟಿಗೆ ಭಟ್ಟಿ, ಕೊಳಚೆ ಪ್ರದೇಶ, ರೈಲ್ವೆ ಸ್ಟೇಷನ್ ಮುಂತಾದ ಕಡೆಗಳಲ್ಲಿ ಆದ್ಯತೆ ಮೆರೆಗೆ ಲಸಿಕೆ ಹಾಕಲಾಗುವುದು ಎಂದರು.
ಎಲ್ಲ ಸರಕಾರಿ ಇಲಾಖೆಗಳೊಂದಿಗೆ ಸಮನ್ವಯ ಸಾಧಿಸಿ ಕಾರ್ಯಕ್ರಮ ನಡೆಸಲಾಗುವುದು. 0-5 ವರ್ಷದ ಮಕ್ಕಳಿಗೆ ಕಡ್ಡಾಯ ಲಸಿಕೆ ಹಾಕಿಸಲೇಬೇಕು. ಮೊದಲು ಹಾಕಿಸಿದ್ದರೂ ಈ ಬಾರಿಯೂ ಎರಡು ಹನಿ ಲಸಿಕೆ ಹಾಕಿಸಲೇಬೇಕು. ಪೋಲಿಯೋ ಮುಕ್ತ ದೇಶವಾಗಿರುವ ಭಾರತ ಇದನ್ನು ಮುಂದುವರೆಸಲು ಸಾರ್ವಜನಿಕರ ಸಹಕಾರ ಅಗತ್ಯ ಎಂದು ಅವರು ಮನವಿ ಮಾಡಿದರು.
ಡಿ.21ರಂದು ಬೂತ್‍ಗಳಲ್ಲಿ ನಂತರ 2-3 ದಿನ ಮನೆ ಮನೆಗೆ ತೆರಳಿ 0-5 ವರ್ಷದ ಮಕ್ಕಳಿಗೆ ಲಸಿಕೆ ಹಾಕಲಾಗುವುದು. ಸರ್ವಜನಿಕರು ಸಹಕರಿಸಬೇಕು. 33,258 ಬೂತ್‍ಗಳು, 1,030 ಸಂಚಾರಿ ತಂಡಗಳು, 1096 ಟ್ರಾನ್ಸಿಟ್ ತಂಡಗಳು, 1,13,115 ಲಸಿಕಾ ಕಾರ್ಯಕರ್ತರು, 7,322 ಮೇಲ್ವಿಚಾರಕರನ್ನು ನೇಮಿಸಲಾಗಿದೆ. Nearby Vaccination centre Karnataka ಆಪ್ ಮೂಲಕ ಹತ್ತಿರದ ಲಸಿಕಾ ಕೇಂದ್ರ ಸಂಪರ್ಕಿಸಬಹುದು. ಲಸಿಕೆ ಸಂಪೂರ್ಣ ಸುರಕ್ಷಿತವಾಗಿದ್ದು ವದಂತಿಗಳಿಗೆ ಕಿವಿಗೊಡದೆ ಮಕ್ಕಳಿಗೆ ಲಸಿಕೆ ಹಾಕಿಸಿ ಎಂದು ಅವರು ಕೋರಿದರು.







