ಪುನೀತ್ ಕೆರೆಹಳ್ಳಿ, ಸಹಚರರ ವಿರುದ್ಧ ಪ್ರಕರಣ ದಾಖಲಿಸಲು ಆಗ್ರಹಿಸಿ ರಾಜ್ಯ ಪೊಲೀಸ್ ಮಹಾನಿರ್ದೇಶಕರಿಗೆ ಮನವಿ

ಬೆಂಗಳೂರು : ಪುನೀತ್ ಕೆರೆಹಳ್ಳಿ ಹಾಗೂ ಆತನ ಸಹಚರರ ವಿರುದ್ಧ ಪ್ರಕರಣ ದಾಖಲಿಸಬೇಕೆಂದು ಒತ್ತಾಯಿಸಿ ಕರ್ನಾಟಕ ರಾಜ್ಯ ಪೊಲೀಸ್ ಮಹಾನಿರ್ದೇಶಕರಿಗೆ 'ದ್ವೇಷದ ಮಾತಿನ ವಿರುದ್ದ ಜನಾಂದೋಲನ/ Campaign Against Hate Speech' ವತಿಯಿಂದ email ಮೂಲಕ ಮನವಿ ಸಲ್ಲಿಸಲಾಗಿದೆ.
ʼಪುನೀತ್ ಕೆರೆಹಳ್ಳಿ ಎಂಬ ಕೊಲೆ ಆರೋಪಿ ವಲಸೆ ಕಾರ್ಮಿಕರ ವಾಸಸ್ಥಳಗಳಿಗೆ ಅಕ್ರಮವಾಗಿ ಪ್ರವೇಶಿಸಿ, ಅವರ ಪೌರತ್ವ ಹಾಗೂ ಗುರುತಿನ ದಾಖಲೆಗಳಿಗೆ ಬೇಡಿಕೆ ಇಟ್ಟು, ಬೆದರಿಕೆ ಹಾಗೂ ಭೀತಿಯನ್ನುಂಟುಮಾಡುತ್ತಿರುವʼ ಗಂಭೀರ ಆರೋಪಗಳನ್ನು ಮನವಿಯಲ್ಲಿ ವಿವರಿಸಲಾಗಿದೆ. ʼಸ್ವತಃ ಆತನೇ ಸಾಮಾಜಿಕ ಜಾಲತಾಣಗಳಲ್ಲಿ ಅಪ್‌ಲೋಡ್ ಮಾಡಿದ ವೀಡಿಯೊಗಳಲ್ಲಿ, “ಬಾಂಗ್ಲಾದೇಶಿಗಳು” ಎಂದು ಮುಸ್ಲಿಂ ವಲಸೆ ಕಾರ್ಮಿಕರನ್ನು ಗುರುತಿಸಿ, ರಾತ್ರಿ ಸಮಯದಲ್ಲಿ ಘೋಷಣೆ ಕೂಗಿ, ಧರ್ಮಾಧಾರಿತ ದ್ವೇಷ ಮತ್ತು ಸಮಾಜದಲ್ಲಿ ಉದ್ವಿಗ್ನತೆಯನ್ನು ಉಂಟುಮಾಡಿರುವುದು ದಾಖಲಾಗಿದೆ. ಈತನ ಈ ವರ್ತನೆಯಿಂದ ಕಾರ್ಮಿಕರ ಗೌರವ, ಗೌಪ್ಯತೆ ಮತ್ತು ಜೀವಸುರಕ್ಷೆಗೆ ಗಂಭೀರ ಅಪಾಯವನ್ನುಂಟುಮಾಡುತ್ತದೆʼ ಎಂದು ದೂರಿನಲ್ಲಿ ತಿಳಿಸಲಾಗಿದೆ.
ʼಈ ರೀತಿಯ “ಬಾಂಗ್ಲಾದೇಶಿ” ಎಂಬ ಶಂಕೆಯ ಆಧಾರದಲ್ಲಿ ನಡೆದ ಹಲ್ಲೆ ಮತ್ತು ಲಿಂಚಿಂಗ್ ಘಟನೆಗಳು ದೇಶದ ವಿವಿಧ ಭಾಗಗಳಲ್ಲಿ (ಕೇರಳದಲ್ಲಿ ದಲಿತ ಕಾರ್ಮಿಕ ರಾಮನಾರಯಣ್ ಬಗೇಲ್ ಅವರ ಹತ್ಯೆ, ಒಡಿಶಾದಲ್ಲಿ ಜುವೆಲ್ ಶೇಕ್ ಅವರ ಹತ್ಯೆ, ಮಂಗಳೂರಿನಲ್ಲಿ ಅಂಸಾರಿ ಎಂಬ ಕಾರ್ಮಿಕರ ಮೇಲೆ ಥಳಿತ) ಇತ್ತೀಚೆಗೆ ನಡೆದಿರುವುದನ್ನು ಉಲ್ಲೇಖಿಸಿ, ಇಂತಹ ಕೃತ್ಯಗಳು ಕರ್ನಾಟಕದಲ್ಲಿಯೂ ಪ್ರಾಣಾಪಾಯಕ್ಕೆ ದಾರಿ ಮಾಡಿಕೊಡಬಹುದುʼ ಎಂದು ಎಚ್ಚರಿಸಲಾಗಿದೆ.
ʼಪುನೀತ್ ಕೆರೆಹಳ್ಳಿ ಕೊಲೆ ಪ್ರಕರಣದಲ್ಲಿ ಜಾಮೀನಿನ ಮೇಲೆ ಹೊರಗಿರುವುದರಿಂದ, ಅವನು ನಡೆಸುತ್ತಿರುವ ಇತ್ತೀಚಿನ ಕಾನೂನುಬಾಹಿರ ಕೃತ್ಯಗಳು ಜಾಮೀನಿನ ದುರುಪಯೋಗವಾಗಿದ್ದು, ತಕ್ಷಣವೇ ಎಫ್‌ಐಆರ್ ದಾಖಲಿಸಿ, ಜಾಮೀನು ರದ್ದುಗೊಳಿಸಲು ನ್ಯಾಯಾಲಯದ ಮುಂದೆ ವಿಷಯ ಮಂಡಿಸಬೇಕುʼ ಎಂದು ಆಗ್ರಹಿಸಲಾಗಿದೆ. ʼಜೊತೆಗೆ, ಇಂತಹ ಘಟನೆಗಳ ಸಂದರ್ಭದಲ್ಲಿ ಹಾಜರಿದ್ದ ಪೊಲೀಸ್ ಅಧಿಕಾರಿಗಳ ಪಾತ್ರದ ಬಗ್ಗೆ ಇಲಾಖಾ ತನಿಖೆ ನಡೆಸಬೇಕು ಹಾಗೂ ಖಾಸಗಿ ವ್ಯಕ್ತಿಗಳು ಪೌರತ್ವ ವಿಚಾರಣೆ ನಡೆಸುವುದನ್ನು ತಡೆಯುವ ಸ್ಪಷ್ಟ ನಿರ್ದೇಶನಗಳನ್ನು ರಾಜ್ಯದಾದ್ಯಂತ ನೀಡಬೇಕುʼ ಎಂದು ಈ ಮನವಿ ಮೂಲಕ ಒತ್ತಾಯಿಸಲಾಗಿದೆ.







