ಶಾಲೆಗಳಲ್ಲಿ ನಾಡಗೀತೆ ಹಾಡುವುದು ಕಡ್ಡಾಯ ಆದೇಶ ಅನುಷ್ಠಾನ ಮಾಡಿ : ಪುರುಷೋತ್ತಮ ಬಿಳಿಮಲೆ

ಬೆಂಗಳೂರು, ಅ.9: ರಾಷ್ಟ್ರಕವಿ ಕುವೆಂಪು ಅವರು ರಚಿಸಿದ ಜಯ ‘ಭಾರತ ಜನನಿಯ ತನುಜಾತೆ’ ಶೀರ್ಷಿಕೆಯ ನಾಡಗೀತೆ ರಾಜ್ಯದ ಎಲ್ಲ ಶಿಕ್ಷಣ ಸಂಸ್ಥೆಗಳಲ್ಲಿ ದೈನಂದಿನ ಚಟುವಟಿಕೆಗಳು ಆರಂಭವಾಗುವ ಮುನ್ನ ಹಾಡುವುದನ್ನು ಕಡ್ಡಾಯಗೊಳಿಸಿದ ಆದೇಶವನ್ನು ಅನುಷ್ಠಾನಗೊಳಿಸಿ ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಡಾ. ಪುರುಷೋತ್ತಮ ಬಿಳಿಮಲೆ ತಿಳಿಸಿದ್ದಾರೆ.
ಈ ಕುರಿತು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಸಚಿವ ಮಧು ಬಂಗಾರಪ್ಪ ಅವರಿಗೆ ಪತ್ರ ಬರೆದ ಅವರು, ಎಲ್ಲ ಶಾಲೆಗಳಲ್ಲಿ ನಾಡಗೀತೆ ಹಾಡುವುದು ಕಡ್ಡಾಯಗೊಳಿಸಿದ ಆದೇಶಕ್ಕೆ 20 ವರ್ಷಗಳಾಗಿದ್ದರೂ ಕೂಡ ಆದೇಶವನ್ನು ಸಮರ್ಪಕ ಅನುಷ್ಠಾನವಾಗದಿರುವುದು ವಿಷಾದನೀಯ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
2004ರಲ್ಲಿ ಸರಕಾರವು ಕುವೆಂಪು ಅವರ ಕವನವನ್ನು ನಾಡಗೀತೆಯಾಗಿ ಘೋಷಿಸಿ ಮಾರ್ಗಸೂಚಿಗಳನ್ನು ನಿಗದಿಪಡಿಸಿತ್ತು. ರಾಷ್ಟ್ರೀಯ ಏಕತೆಯನ್ನು ಅತ್ಯಂತ ಸುಂದರವಾಗಿ ಅಭಿವ್ಯಕ್ತಿಸಿರುವ ಈ ನಾಡಗೀತೆ ಇಂದಿಗೂ ನಮ್ಮ ಉಸಿರಾಗದಿರುವುದು ನಮ್ಮ ವ್ಯವಸ್ಥೆಯ ಸೋಲು ಎನ್ನದೇ ವಿಧಿಯಿಲ್ಲ ಎಂದಿದ್ದಾರೆ.
ವಿಶೇಷವಾಗಿ ಖಾಸಗಿ ಶಾಲೆಗಳು ನಾಡಗೀತೆಗೆ ಯಾವುದೇ ಮಾನ್ಯತೆಯನ್ನು ನೀಡದೆ ಅನಿಯಂತ್ರಿತ ಆಡಳಿತವನ್ನು ನಡೆಸುತ್ತಿದ್ದು, ಇದನ್ನು ಗಂಭೀರವಾಗಿ ಪರಿಗಣಿಸುವಂತೆ ಶಿಕ್ಷಣ ಇಲಾಖೆಯ ಅಧಿಕಾರಿಗಳಿಗೆ ಕಠಿಣ ನಿರ್ದೇಶನ ನೀಡಬೇಕಿದೆ. ರಾಜ್ಯದಲ್ಲಿರುವ ಯಾವುದೇ ಪಠ್ಯಕ್ರಮದ ಸರಕಾರಿ, ಖಾಸಗಿ ಶಾಲೆಗಳಲ್ಲಿ ನಾಡಗೀತೆ ಕಡ್ಡಾಯವಾಗಿ ಹಾಡುವ ಸ್ವನಿಯಂತ್ರಿತ ವ್ಯವಸ್ಥೆಯನ್ನು ರೂಪಿಸುವಲ್ಲಿ ತಾವು ಕ್ರಮಕ್ಕೆ ಮುಂದಾಗಬೇಕು ಎಂದು ಪತ್ರದಲ್ಲಿ ತಿಳಿಸಿದ್ದಾರೆ.







