‘ಜ್ಞಾನ ದೇಗುಲವಿದು ಧೈರ್ಯವಾಗಿ ಪ್ರಶ್ನಿಸು’ : ಪರಿಷತ್‍ನಲ್ಲಿ ಪ್ರತಿಧ್ವನಿಸಿದ ಕುವೆಂಪು ಘೋಷ ವಾಕ್ಯ

ಬೆಂಗಳೂರು: ‘ಜ್ಞಾನ ದೇಗುಲವಿದು ಕೈಮುಗಿದು ಒಳಗೆ ಬಾ' ಎನ್ನುವ ಘೋಷ ವಾಕ್ಯವನ್ನು ‘ಜ್ಞಾನ ದೇಗುಲವಿದು ಧೈರ್ಯವಾಗಿ ಪ್ರಶ್ನಿಸು' ಎಂದು ಮಾರ್ಪಡಿಸುವ ಸರಕಾರದ ಪ್ರಸ್ತಾವ ವಿಧಾನ ಪರಿಷತ್‍ನಲ್ಲಿ ಪ್ರತಿಧ್ವನಿಸಿತು. ಕೆಲಕಾಲ ಆಡಳಿತ-ಪ್ರತಿಪಕ್ಷಗಳ ನಡುವೆ ವಾಗ್ವಾದಕ್ಕೂ ಕಾರಣವಾಯಿತಲ್ಲದೆ, ಬಿಜೆಪಿ ಸದಸ್ಯರು ಸಭಾಪತಿ ಪೀಠದ ಮುಂದಿನ ಬಾವಿಗಿಳಿದು ಧರಣಿ ನಡೆಸಿದ ಪ್ರಸಂಗವು ನಡೆಯಿತು.
ಸೋಮವಾರ ಪರಿಷತ್ ಶೂನ್ಯವೇಳೆಯಲ್ಲಿ ವಿಷಯ ಪ್ರಸ್ತಾಪಿಸಿದ ಪ್ರತಿಪಕ್ಷ ಸಚೇತನ ಎಸ್.ರವಿಕುಮಾರ್, ರಾಷ್ಟ್ರಕವಿ ಕುವೆಂಪು ಅವರ ‘ಜ್ಞಾನ ದೇಗುಲವಿದು ಕೈಮುಗಿದು ಒಳಗೆ ಬಾ’ ಎಂಬ ಘೋಷ ವಾಕ್ಯವನ್ನು ‘ಜ್ಞಾನ ದೇಗುಲವಿದು ಧೈರ್ಯವಾಗಿ ಪ್ರಶ್ನಿಸು’ ಎಂದು ಸರಕಾರ ಮಾರ್ಪಡಿಸಿ ಆದೇಶ ಹೊರಡಿಸಿದೆ. ಇದು ಕುವೆಂಪು ಅವರಿಗೆ ಮಾಡಿದ ಅಪಮಾನ ಎಂದು ದೂರಿದರು.
ಬಳಿಕ ಪ್ರತಿಕ್ರಿಯಿಸಿದ ಸಭಾನಾಯಕ ಬೋಸರಾಜ್, ಶೂನ್ಯವೇಳೆಯಲ್ಲಿ ವಿಷಯ ಪ್ರಸ್ತಾಪಕ್ಕೆ ಮಾತ್ರ ಅವಕಾಶವಿದ್ದು, ಚರ್ಚೆಗೆ ಅವಕಾಶ ಇಲ್ಲ. ಈ ಸಂಬಂಧ ಸಚಿವರಿಂದ ಉತ್ತರ ತರಿಸಿ ಕೊಡಿಸುವ ಭರವಸೆ ನೀಡಿದರು. ಇದಕ್ಕೆ ಸಹಮತ ವ್ಯಕ್ತಪಡಿಸಿದ ಸಭಾಪತಿ ಪೀಠದಲ್ಲಿದ್ದ ತೇಜಸ್ವಿನಿಗೌಡ, ಚರ್ಚೆಗೆ ಅವಕಾಶವಿಲ್ಲ, ಬೇರೆ ರೂಪದಲ್ಲಿ ತನ್ನಿ’ ಎಂದು ಸಲಹೆ ನೀಡಿ ಬೇರೆ ವಿಷಯ ಕೈಗೆತ್ತಿಕೊಳ್ಳಲು ಮುಂದಾದರು.
ಇದಕ್ಕೆ ಒಪ್ಪದ ರವಿಕುಮಾರ್, ‘ಸರಕಾರ ಈ ಆದೇಶ ವಾಪಸ್ ಪಡೆಯಬೇಕೆಂದು ಒತ್ತಾಯಿಸಿದರು. ಸರಕಾರ ಒಪ್ಪದ ಕಾರಣದಿಂದಾಗಿ ಬಿಜೆಪಿ ಸದಸ್ಯರು ಸಭಾಪತಿ ಪೀಠದ ಮುಂದಿನ ಬಾವಿಗಿಳಿದು ಧರಣಿ ನಡೆಸಿದರು. ಈ ವೇಳೆ ಮಾತನಾಡಿದ ವಿಪಕ್ಷ ನಾಯಕ ಕೋಟ ಶ್ರೀನಿವಾಸ ಪೂಜಾರಿ, ‘ಬೇರೆ ರೂಪದಲ್ಲಿ ನೋಟಿಸ್ ಕೊಡಿ ಎಂದರೆ ನಾವು ಈಗಾಗಲೇ ಬಾವಿಯಲ್ಲಿದ್ದೇವೆ, ಈಗ ಏನು ಮಾಡಬೇಕು, ಬಾವಿಯಲ್ಲೆ ಇರಬೇಕಾ? ಬಾವಿಯಲ್ಲಿ ಇರುವವರನ್ನು ಸಮಾಧಾನ ಮಾಡದೇ ಹೊರಬನ್ನಿ ಎಂದರೆ ಹೇಗೆ?’ ಎಂದು ಪ್ರಶ್ನಿಸಿದರು.
ಈ ಹಂತದಲ್ಲಿ ಮಧ್ಯಪ್ರವೇಶಿಸಿದ ಕಾಂಗ್ರೆಸಿನ ಯು.ಬಿ.ವೆಂಕಟೇಶ ಕ್ರಿಯಾಲೋಪ ಎತ್ತಿ, ‘ಶೂನ್ಯವೇಳೆಯಲ್ಲಿ ವಿಷಯ ಚರ್ಚೆಗೆ ಅವಕಾಶವಿಲ್ಲ’ ಎಂದರು. ಇದಕ್ಕೆ ಪ್ರತಿಕ್ರಿಯೆ ನೀಡಿದ ತೇಜಸ್ವಿನಿಗೌಡ, ‘ಚರ್ಚೆಗೆ ಅವಕಾಶ ನೀಡುವುದಿಲ್ಲ. ಹೀಗಾಗಿ ಇಲ್ಲಿ ಕ್ರಿಯಾ ಲೋಪದ ಪ್ರಶ್ನೆ ಉದ್ಭವಿಸುವುದಿಲ್ಲ’ ಎಂದು ಸ್ಪಷ್ಟಣೆ ನೀಡಿದರು.
‘ಕಲಾಪದ ನಿಯಮದ ಪ್ರಕಾರ ಶೂನ್ಯವೇಳೆಯಲ್ಲಿ ಚರ್ಚೆಗೆ ಅವಕಾಶವಿಲ್ಲ, ಬೇರೆ ರೂಪದಲ್ಲಿ ನೋಟಿಸ್ ಕೊಡಿ ಚರ್ಚೆಗೆ ಅವಕಾಶ ನೀಡಲಾಗುತ್ತದೆ, ಧರಣಿ ನಿಲ್ಲಿಸಿ ಎಂದು ಮನವಿ ಮಾಡಿದರು. ಆದರೆ ಪಟ್ಟು ಸಡಿಲಿಸದ ಬಿಜೆಪಿ ಸದಸ್ಯರು ಧರಣಿ ಮುಂದುವರೆಸಿದರು. ಈ ಸಮಸ್ಯೆ ಪರಿಹಾರಕ್ಕೆ ಸಚಿವರನ್ನ ಕರೆಸಿ ಉತ್ತರ ಕೊಡಿಸಿ ಎಂದು ಆಗ್ರಹಿಸಿದರು. ಇದಕ್ಕೆ ಛೇಡಿಸಿದ ಕಾಂಗ್ರೆಸ್ ಸದಸ್ಯರು, ‘ಹೇಡಿಗಳಂತೆ ವರ್ತಿಸಬೇಡಿ ಚರ್ಚೆಗೆ ಬನ್ನಿ’ ಎಂದು ಸವಾಲೆಸೆದರು. ಆಡಳಿತ-ಪ್ರತಿಪಕ್ಷಗಳ ನಡುವೆ ಆರೋಪ ಪ್ರತ್ಯಾರೋಪ, ವಾಗ್ವಾದ ನಡೆಯಿತು.
ತಪ್ಪು ಹುಡುಕುವ ಪ್ರಯತ್ನ: ‘ಶಾಲೆಗಳಲ್ಲಿ ಘೋಷವಾಕ್ಯ ಬದಲಾವಣೆ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲ. ನಾವು ಕುವೆಂಪು ಆಚಾರ, ವಿಚಾರ ಪ್ರಚಾರ ಮಾಡುತ್ತಿದ್ದೇವೆ. ಅವರ ‘ಸರ್ವಜನಾಂಗದ ಶಾಂತಿಯ ತೋಟ..’ ಸಂದೇಶವನ್ನು ಪ್ರತಿನಿತ್ಯ ಬದುಕಿನಲ್ಲಿ ಅಳವಡಿಸಿಕೊಳ್ಳಬೇಕೆಂದು ರಾಜ್ಯದ ಜನರಿಗೆ ಹೇಳುತ್ತಾ ಬಂದಿದ್ದೇವೆ. ಕುವೆಂಪುರ ತತ್ವ-ಸಿದ್ಧಾಂತಗಳನ್ನು ನಾವು ಪಾಲಿಸಿ ಅದಕ್ಕೆ ಶಕ್ತಿ ತುಂಬುವ ಕೆಲಸ ಮಾಡಿದ್ದೇವೆ. ಬಿಜೆಪಿಯವರಿಗೆ ಮಾಡಲು ಕೆಲಸವಿಲ್ಲ. ಹೀಗಾಗಿ ಎಲ್ಲದರಲ್ಲೂ ತಪ್ಪು ಹುಡುಕುವ ಪ್ರಯತ್ನ ಮಾಡುತ್ತಿದ್ದಾರೆ. ಅವರು ಜನರ ಭಾವನೆ ಬಗ್ಗೆ ಮಾತ್ರ ಆಲೋಚಿಸಿ ಸಮಾಜ ಕೆಡಿಸುವ ಕೆಲಸ ಮಾಡುತ್ತಾರೆ’
ಡಿ.ಕೆ.ಶಿವಕುಮಾರ್ ಉಪಮುಖ್ಯಮಂತ್ರಿ







