ಜಾತಿಜನಗಣತಿ ಹೇಗೆ ಮಾಡಬಾರದು ಎನ್ನುವುದಕ್ಕೆ ಕರ್ನಾಟಕದ ಜಾತಿಗಣತಿ ವರದಿಯೇ ಮಾದರಿ : ಆರ್.ಅಶೋಕ್

ಆರ್.ಅಶೋಕ್
ಬೆಂಗಳೂರು : ಸಿಎಂ ಸಿದ್ದರಾಮಯ್ಯ ಅವರೇ, ಜಾತಿಗಣತಿಗೆ ಕರ್ನಾಟಕದ ಮಾದರಿ ಅಳವಡಿಸಿ ಎಂದು ತಾವು ನೀಡಿರುವ ಹೇಳಿಗೆ ನಿಜಕ್ಕೂ ಹಾಸ್ಯಾಸ್ಪದ ಎಂದು ವಿಧಾನಸಭೆ ವಿಪಕ್ಷ ನಾಯಕ ಆರ್.ಅಶೋಕ್ ಹೇಳಿದ್ದಾರೆ.
ಈ ಸಂಬಂಧ ಸಾಮಾಜಿಕ ಜಾಲತಾಣ ಎಕ್ಸ್ನಲ್ಲಿ ಪೋಸ್ಟ್ ಹಂಚಿಕೊಂಡಿರುವ ಅವರು, ಮೂಲ ಪ್ರತಿ ಕಳೆದು ಹೋಗಿರುವ, ಕಾರ್ಯದರ್ಶಿಗಳ ಸಹಿಯೇ ಇಲ್ಲದ, ಪುಟಕ್ಕೆ 5-10 ರೂಪಾಯಿ ನೀಡಿ ಶಾಲಾ ಮಕ್ಕಳ ಕೈಯಲ್ಲಿ ಅರ್ಜಿ ಭರ್ತಿ ಮಾಡಿಸಿರುವ, ನಾಯಿಗಳು ಇರುವ ಮನೆಯಲ್ಲಿ ಜಾತಿಗಣತಿ ಮಾಡೋಕೆ ಹೋಗದ, ಹತ್ತು ವರ್ಷಗಳಾದರೂ ಸ್ವೀಕರಿಸಿದ ನಿಮ್ಮ ಜಾತಿ ಗಣತಿ ವರದಿ, ಜಾತಿ ಜನಗಣತಿಯನ್ನು ಹೇಗೆ ಮಾಡಬಾರದು ಎನ್ನುವುದಕ್ಕೆ ಮಾದರಿ ಎಂದು ಟೀಕಿಸಿದ್ದಾರೆ.
ಜಾತಿಜನಗಣತಿಯನ್ನು ಬಿಜೆಪಿ ವಿರೋಧಿಸುತ್ತಲೇ ಬಂದಿದೆ ಎಂದು ತಾವು ಹೇಳಿರುವುದು ಹಸಿ ಸುಳ್ಳು. 2010ರಲ್ಲಿ ಅಂದಿನ ಲೋಕಸಭೆಯ ವಿಪಕ್ಷ ನಾಯಕಿ ದಿವಂಗತ ಸುಷ್ಮಾ ಸ್ವರಾಜ್ ಅವರು 2011ರ ಜನಗಣತಿಯಲ್ಲಿ ಜಾತಿ ಜನಗಣತಿಯನ್ನು ಸೇರಿಸಲು ಬಿಜೆಪಿ ಬೆಂಬಲಿಸುತ್ತದೆ ಎಂದು ಲಿಖಿತ ರೂಪದಲ್ಲಿ ಯುಪಿಎ ಸರಕಾರಕ್ಕೆ ತಿಳಿಸಿದ್ದರು. ಸಂಸತ್ತಿನಲ್ಲಿ ಅಂಗೀಕರಿಸಲಾದ ಸರ್ವಾನುಮತದ ನಿರ್ಣಯವನ್ನೂ ಬಿಜೆಪಿ ಬೆಂಬಲಿಸಿತ್ತು ಎಂದಿದ್ದಾರೆ.
ಆದರೆ, ಅಂದಿನ ಕಾಂಗ್ರೆಸ್ ಸರಕಾರ ಜಾತಿ ಜನಗಣತಿಯ ಬದಲು ಕಾಟಾಚಾರಕ್ಕೆ ಸಾಮಾಜಿಕ-ಆರ್ಥಿಕ ಜಾತಿ ಜನಗಣತಿ – 2011 (SECC-2011) ಸಮೀಕ್ಷೆಯ ನಡೆಸಿತು. ಕರ್ನಾಟಕದ ಜಾತಿ ಗಣತಿಯಂತೆ ಕಳಪೆ ಯೋಜನೆ ಮತ್ತು ಅಸಮರ್ಥ ಅನುಷ್ಠಾನದಿಂದಾಗಿ ಅದು ಸಂಪೂರ್ಣವಾಗಿ ವಿಫಲವಾಯಿತು. ಕೋಟ್ಯಂತರ ರೂಪಾಯಿ ಹಣ ಖರ್ಚು ಮಾಡಿದ ನಂತರವೂ ಅದರ ಫಲಿತಾಂಶಗಳನ್ನು ಬಿಡುಗಡೆ ಮಾಡಲೇ ಇಲ್ಲ. ಇದು ಕಾಂಗ್ರೆಸ್ ಪಕ್ಷಕ್ಕೆ ಜಾತಿ ಗಣತಿ ಬಗ್ಗೆ ಇರುವ ನಿಜವಾದ ಬದ್ಧತೆ ಎಂದು ಹೇಳಿದ್ದಾರೆ.
ಬಿಜೆಪಿಗೆ ಜಾತಿಗಣತಿಯನ್ನು ಎಂದಿಗೂ ಚುನಾವಣಾ ಅಸ್ತ್ರವಾಗಿ ದುರ್ಬಳಕೆ ಮಾಡಿಕೊಳ್ಳಲಿಲ್ಲ. ಅಧಿಕಾರವಿದ್ದಾಗ ಜಾತಿ ಜನಗಣತಿ ಮಾಡುವ ನಿರ್ಧಾರ ಕೈಗೊಂಡು ಬದ್ಧತೆ ಪ್ರದರ್ಶನ ಮಾಡಿದ್ದೇವೆಯೇ ಹೊರತು ವಿಪಕ್ಷದಲ್ಲಿದಾಗ ಮೊಸಳೆ ಕಣ್ಣೀರು ಸುರಿಸಿ, ಅಧಿಕಾರ ಇದ್ದಾಗ ನಿರ್ಲಕ್ಷ್ಯ ಮಾಡುವ ಕೀಳು ರಾಜಕೀಯ ಮಾಡಿಲ್ಲ. ಇದು ಸಾಮಾಜಿಕ ನ್ಯಾಯದ ಬಗ್ಗೆ ನಮಗಿರುವ ನೈಜವಾದ ಬದ್ಧತೆ. ಜಾತಿ ಜನಗಣತಿ ಬಗ್ಗೆ ಬಿಜೆಪಿಯದ್ದು ಇದ್ದ ತಕರಾರು ಒಂದೇ. ಅದು ರಾಜಕೀಯ ದಾಳವಾಗಿ ದುರ್ಬಳಕೆ ಆಗಬಾರದು ಎಂಬುದು. ಕೇಂದ್ರ ಸರಕಾರ ಈಗ ನಡೆಸಲಿರುವ ಜಾತಿ ಗಣತಿ ಅತ್ಯಂತ ಪಾರದರ್ಶಕವಾಗಿ, ವೈಜ್ಞಾನಿಕವಾಗಿ, ಸದುದ್ದೇಶದಿಂದ ನಡೆಯಲಿದೆಯೇ ಹೊರತು ನಿಮ್ಮ ಕಾಂಗ್ರೆಸ್ ಸರಕಾರ ಮಾಡಿದಂತೆ ರಾಜಕೀಯ ಅನುಕೂಲಕ್ಕಾಗಿ ಮೂಗಿನ ನೇರಕ್ಕೆ ದತ್ತಾಂಶವನ್ನು ತಿರುಚುವ ದುರುದ್ದೇಶದಿಂದ ಮಾಡುವುದಿಲ್ಲ ಎಂದು ಹೇಳಿದ್ದಾರೆ.
ಕರ್ನಾಟಕದ ಜಾತಿ ಗಣತಿ ಪ್ರಕ್ರಿಯೆ ಜಾತಿಗಣತಿಯನ್ನ ಹೇಗೆ ನಡೆಸಬಾರದು ಎಂಬುದಕ್ಕೆ ಮಾದರಿಯೇ ಹೊರತು ಅದರಲ್ಲಿ ಅನುಸರಿವಂತಹ ಯಾವುದೇ ಒಳ್ಳೆಯ ಅಂಶಗಳೂ ಇಲ್ಲ ಎಂದುತಿಳಿಸಿದ್ದಾರೆ.







