ಅಕ್ಟೋಬರ್ ಅಥವಾ ನವೆಂಬರ್ನಲ್ಲಿ ಸಿಎಂ ಬದಲಾವಣೆ ಖಚಿತ : ಆರ್.ಅಶೋಕ್

ಆರ್.ಅಶೋಕ್
ಬೆಂಗಳೂರು : ಅಕ್ಟೋಬರ್ ಅಥವಾ ನವೆಂಬರ್ನಲ್ಲಿ ಮುಖ್ಯಮಂತ್ರಿ ಬದಲಾವಣೆ ಖಚಿತ. ಹೀಗಾಗಿಯೇ ಆಡಳಿತಾರೂಢ ಕಾಂಗ್ರೆಸ್ ಪಕ್ಷ ಮನೆಯೊಂದು ಮೂರು ಬಾಗಿಲು ಆಗಿದ್ದು, ಎಲ್ಲರೂ ಸಿಎಂ ಆಗಲು ಮುಂದಾಗಿದ್ದಾರೆ ಎಂದು ಪ್ರತಿಪಕ್ಷ ನಾಯಕ ಆರ್.ಅಶೋಕ್ ಟೀಕಿಸಿದರು.
ಬುಧವಾರ ನಗರದಲ್ಲಿ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ಸಿದ್ದರಾಮಯ್ಯನವರು ಸಿಎಂ ಆಗಿಯೇ ಇರುತ್ತಾರೆಂದು ಪಕ್ಷದ ವರಿಷ್ಠರು ಹೇಳಬೇಕು. ಆದರೆ, ಭಯದಿಂದ ಸ್ವತಃ ಸಿದ್ದರಾಮಯ್ಯರೇ ಅದನ್ನು ಪದೇ ಪದೆ ಹೇಳುತ್ತಿದ್ದಾರೆ. ಅಧಿಕಾರವನ್ನು ಒದ್ದು ಕಿತ್ತುಕೊಳ್ಳುತ್ತೇನೆ ಎನ್ನುವ ಡಿಕೆಶಿ ಈ ರೀತಿಯ ಸಂದೇಶ ನೀಡುತ್ತಿದ್ದಾರೆ. ಸರಕಾರದಲ್ಲಿ ಹಣವಿಲ್ಲದೆ, ಅಭಿವೃದ್ಧಿ ಶೂನ್ಯವಾಗಿ ಶಾಸಕರು ಬೇಸರಗೊಂಡಿದ್ದಾರೆ ಎಂದರು.
2028ರ ವರೆಗೆ ಸಿದ್ದರಾಮಯ್ಯನವರೇ ಸಿಎಂ ಎಂದು ಡಿ.ಕೆ.ಶಿವಕುಮಾರ್ ಹೇಳಲಿ. ಅದನ್ನು ಆರನೇ ಗ್ಯಾರಂಟಿ ಎಂದು ಅಂದುಕೊಂಡು ಸುಮ್ಮನಾಗುತ್ತೇವೆ ಎಂದ ಅಶೋಕ್, ಬೆಂಗಳೂರು ವಿವಿಗೆ ಮನಮೋಹನ್ ಸಿಂಗ್ ಹೆಸರು ಸೂಕ್ತವಲ್ಲ. ಜಿಲ್ಲೆಗಳ ಹೆಸರನ್ನು ಬದಲಿಸಿದಂತೆಯೇ ಏಕಾಏಕಿ ಹೆಸರು ಬದಲಿಸುತ್ತಿದ್ದಾರೆ. ಪೂರ್ವಿಕರು ಇಟ್ಟ ಹೆಸರನ್ನು ಹೀಗೆ ಬದಲಿಸಬಾರದು ಎಂದು ಆಗ್ರಹಿಸಿದರು.
ಬೆಂಗಳೂರನ್ನು ಈಗಾಗಲೇ ಒಡೆದುಹಾಕಿದ್ದಾರೆ. ಬಿಜೆಪಿ ಅಧಿಕಾರಕ್ಕೆ ಬಂದ ಬಳಿಕ ಬೆಂಗಳೂರನ್ನು ಒಂದಾಗಿಸಲಿದೆ. ಬೆಂಗಳೂರು ಅಭಿವೃದ್ಧಿ ಮಾಡುವುದು ಬಿಟ್ಟು, ನಾಮಫಲಕ ಬದಲಿಸುವುದರಿಂದ ಕೋಟ್ಯಂತರ ರೂಪಾಯಿ ವ್ಯರ್ಥವಾಗಲಿದೆ. ದಕ್ಷಿಣ, ಉತ್ತರ ಎಂದು ಹೆಸರು ನೀಡುವುದರಿಂದ ಅಭಿವೃದ್ಧಿ ಸಾಧ್ಯವಿಲ್ಲ ಎಂದು ಅವರು ತಿಳಿಸಿದರು.
ಹೋರಾಟಕ್ಕೆ ಜಯ: ವಾಲ್ಮೀಕಿ ನಿಗಮದ ಹಗರಣವನ್ನು ಸಿಬಿಐಗೆ ನೀಡಿರುವುದರಿಂದ ಬಿಜೆಪಿಯ ಹೋರಾಟಕ್ಕೆ ಜಯ ಸಿಕ್ಕಿದೆ. ಕೋರ್ಟ್ ನಮಗೆ ನಿಜವಾದ ನ್ಯಾಯ ನೀಡಿದೆ ಎಂದ ಅವರು, ಆರೆಸ್ಸೆಸ್ ನಿಷೇಧ ಮಾಡಿದರೆ, ಮತ್ತೆ ಸಂಘಟನೆ ಪುಟಿದೇಳುತ್ತದೆ. ನಾನು, ಪ್ರಧಾನಿ ಮೋದಿ, ಅನೇಕ ರಾಜ್ಯಗಳ ರಾಜ್ಯಪಾಲರು, ಹಲವಾರು ಸಂಸದರು, ಶಾಸಕರು ಆರೆಸ್ಸೆಸ್ನಲ್ಲಿದ್ದಾರೆ ಎಂದರು.







