ʼಬೀದಿನಾಯಿಗಳಿಗೆ ಬಿರಿಯಾನಿʼ ಜಿಬಿಎ ಯೋಜನೆಯಲ್ಲಿ ಲೂಟಿ ಮಾಡುವ ಉದ್ದೇಶ : ಆರ್.ಅಶೋಕ್

ಆರ್.ಅಶೋಕ್
ಬೆಂಗಳೂರು : ಬೀದಿ ನಾಯಿಗಳಿಗೆ ಬಿರಿಯಾನಿ ನೀಡುವ ಗ್ರೇಟರ್ ಬೆಂಗಳೂರು ಪ್ರಾಧಿಕಾರ(ಜಿಬಿಎ)ದ ಯೋಜನೆ ಲೂಟಿ ಮಾಡುವ ಉದ್ದೇಶವನ್ನು ಹೊಂದಿದೆ. ಇದು ಹಣ ಕೊಳ್ಳೆ ಹೊಡೆಯುವ ಯೋಜನೆ ಎಂದು ವಿರೋಧ ಪಕ್ಷದ ನಾಯಕ ಆರ್.ಅಶೋಕ್ ಟೀಕಿಸಿದರು.
ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುಖ್ಯಮಂತ್ರಿ ಹಾಗೂ ಉಪಮುಖ್ಯಮಂತ್ರಿ ಸಿಎಂ ಕುರ್ಚಿಯ ಕಿತ್ತಾಟದಲ್ಲಿ ನಿರತರಾಗಿದ್ದಾರೆ. ಇಂತಹ ಸ್ಥಿತಿಯಲ್ಲಿ ಜಿಬಿಎ ವ್ಯಾಪ್ತಿಯಲ್ಲಿ ಬೀದಿನಾಯಿಗಳಿಗೆ ಊಟ ನೀಡುವ ಯೋಜನೆ ತರಲಾಗಿದೆ. ಬೀದಿನಾಯಿಗಳ ಉಪಟಳದಿಂದ ಮಕ್ಕಳಿಗೆ ತೊಂದರೆಯಾಗುತ್ತಿದ್ದು, ಅದಕ್ಕಾಗಿ ನಾಯಿಗಳ ಸಂಖ್ಯೆ ಕಡಿಮೆ ಮಾಡಬೇಕು ಎಂಬ ಉದ್ದೇಶದ ಯೋಜನೆ ಜಿಬಿಎಯಲ್ಲಿದೆ. ಜನರು ಹಾಗೂ ಸಂಘಟನೆಗಳು ಈಗಾಗಲೇ ಬೀದಿನಾಯಿಗಳಿಗೆ ಊಟ ಹಾಕುತ್ತಿದ್ದಾರೆ. ಈಗ ಬೌ ಬೌ ಬಿರಿಯಾನಿ ಹಾಕುವ ಅಗತ್ಯವೇನಿದೆ? ಎಂದು ಪ್ರಶ್ನಿಸಿದರು.
ಪ್ರತಿ ಬೀದಿಗಳಲ್ಲಿ ಜನರು ಬೀದಿನಾಯಿಗಳಿಗೆ ಊಟ ಹಾಕುವುದು ಸಾಮಾನ್ಯವಾಗಿದೆ. ಈಗ ಹಣ ಲೂಟಿ ಮಾಡಲು ಇಂತಹ ಯೋಜನೆ ತರಲಾಗಿದೆ. ರಸ್ತೆಗಳಲ್ಲಿ ಗುಂಡಿಗಳು ಹೆಚ್ಚಾಗಿದೆ. ಉದ್ಯಾನಗಳ ನಿರ್ವಹಣೆ ಆಗುತ್ತಿಲ್ಲ. ಬಿಬಿಎಂಪಿ ಆಸ್ಪತ್ರೆಗಳಲ್ಲಿ ಸಂಬಳ ಕೊಡಲು ಹಣವಿಲ್ಲ. ಶಾಲೆಗಳ ಶಿಕ್ಷಕರಿಗೆ ಸಂಬಳ ನೀಡುತ್ತಿಲ್ಲ. ಯಾವುದಕ್ಕೂ ಹಣ ಇಲ್ಲ ಎಂದಾಗಿರುವಾಗ, ಬೀದಿನಾಯಿಗಳಿಗೆ ಬಿರಿಯಾನಿ ನೀಡಿ, ಅದರಲ್ಲಿ ಹಣ ಕೊಳ್ಳೆ ಹೊಡೆಯುವ ಸ್ಕೀಮ್ ತರಲಾಗಿದೆ ಎಂದರು.
ಬೀದಿನಾಯಿಗಳ ಆರೋಗ್ಯದ ಆರೈಕೆಗೆ ಪಶು ಆಸ್ಪತ್ರೆ ನಿರ್ಮಿಸಬಹುದಿತ್ತು. ಬೀದಿ ಬದಿಯಲ್ಲಿ ಬಿದ್ದಿರುವ ನಾಯಿ ಅಥವಾ ಅಪಘಾತಕ್ಕೊಳಗಾದ ನಾಯಿಗಳನ್ನು ತಂದು ಚಿಕಿತ್ಸೆ ನೀಡಬಹುದು. ಅದನ್ನು ಬಿಟ್ಟು ಆಹಾರ ನೀಡುವ ಯೋಜನೆ ತಂದಿರುವುದು ಸರಿಯಲ್ಲ. ಬೀದಿನಾಯಿಗಳಿಗೆ ಮಾಂಸ ನೀಡುವುದರಿಂದ ಅವು ಕ್ರೂರವಾಗಿ ವರ್ತಿಸಬಹುದು. ಈಗಾಗಲೇ ನಮ್ಮ ಸಾಮಾನ್ಯ ಆಹಾರಕ್ಕೆ ಹೊಂದಿಕೊಂಡಿರುವ ಅವುಗಳಿಗೆ ಇಂತಹ ಆಹಾರ ನೀಡುವುದರಿಂದ ಸಮಸ್ಯೆ ಉಂಟಾಗಬಹುದು. ಬಿಬಿಎಂಪಿಯ ಹಣವನ್ನು ತಿನ್ನಲು ದಾರಿ ಹುಡುಕಿಕೊಂಡಿದ್ದಾರೆ. ಬೆಕ್ಕು, ಹೆಗ್ಗಣಗಳಿಗೂ ಊಟ ನೀಡಬಹುದು ಎಂದರು.
ಡಿ.ಕೆ.ಶಿವಕುಮಾರ್ ಅಧಿಕಾರವನ್ನು ಒದ್ದು ಕಿತ್ತುಕೊಳ್ಳುತ್ತಾರೆ:
ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಪಟ್ಟು ಬಿಡದೆ ಅಧಿಕಾರವನ್ನು ಒದ್ದು ಕಿತ್ತುಕೊಳ್ಳುತ್ತಾರೆ. ರಾಜ್ಯದಲ್ಲಿ ಮುಖ್ಯಮಂತ್ರಿ ಬದಲಾವಣೆ ಖಂಡಿತ ಆಗಲಿದೆ. ಡಿ.ಕೆ.ಶಿವಕುಮಾರ್ ಮುಖ್ಯಮಂತ್ರಿ ಆಗುತ್ತೇನೆ ಎಂದು ತಿಳಿದು ದೇವಾಲಯಗಳನ್ನು ಸುತ್ತುತ್ತಿದ್ದಾರೆ. ಮುಖ್ಯಮಂತ್ರಿ ಬದಲಾವಣೆ ಬಗ್ಗೆ ಹೈಕಮಾಂಡ್ನಲ್ಲಿ ಚರ್ಚೆಯಾಗಿದೆ ಎಂದು ಆರ್.ಅಶೋಕ್ ತಿಳಿಸಿದರು.
ಪೊಲೀಸರನ್ನು ಬಲಿಪಶು ಮಾಡಲಾಗಿದೆ :
ಆರ್.ಸಿ.ಬಿ ತಂಡ ಐಪಿಎಲ್ ಟ್ರೋಫಿ ಗೆದ್ದ ಹಿನ್ನೆಲೆಯಲ್ಲಿ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣ ಬಳಿ ಸಂಭ್ರಮಾಚರಣೆ ಮಾಡಲು ಸರಕಾರ ಅನುಮತಿ ನೀಡಿತ್ತು. ಆದರೆ, ಅಲ್ಲಿ ಸಂಭವಿಸಿದ ಕಾಲ್ತುಳಿತ ದುರಂತಕ್ಕೆ ಪೊಲೀಸರನ್ನು ಬಲಿಪಶು ಮಾಡಲಾಗಿದೆ. ನಗರ ಪೊಲೀಸ್ ಆಯುಕ್ತರು, ಡಿಸಿಪಿ ಮೇಲೆ ಆರೋಪ ಹೊರೆಸಿ ಕೈ ತೊಳೆದುಕೊಳ್ಳಲಾಗಿದೆ ಎಂದು ಅವರು ದೂರಿದರು.







