ಯಾವ ನಿಯಮದಡಿ ರಾಹುಲ್ ಗಾಂಧಿ ಪಾದಯಾತ್ರೆ : ಆರ್.ಅಶೋಕ್ ಪ್ರಶ್ನೆ

ಬೆಂಗಳೂರು : ‘ಲೋಕಸಭೆ ವಿಪಕ್ಷ ನಾಯಕ ರಾಹುಲ್ ಗಾಂಧಿಯವರು ರಾಜ್ಯದಲ್ಲಿ ಪಾದಯಾತ್ರೆ ಮಾಡಲು ಯಾವ ನಿಯಮದಡಿ ಅವಕಾಶ ನೀಡುತ್ತಾರೆ?’ ಎಂದು ವಿಧಾನಸಭೆ ಪ್ರತಿಪಕ್ಷ ನಾಯಕ ಆರ್.ಅಶೋಕ್ ಇಂದಿಲ್ಲಿ ಪ್ರಶ್ನೆ ಮಾಡಿದ್ದಾರೆ.
ಬುಧವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಲೋಕಸಭಾ ಚುನಾವಣೆ ನಡೆಯುವ ವೇಳೆ ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರದಲ್ಲಿತ್ತು. ಆಗ ಚುನಾವಣೆಯಲ್ಲಿ ಅಕ್ರಮ ಆಗಿದ್ದರೆ ಆಯೋಗಕ್ಕೆ ದೂರು ನೀಡಬಹುದು ಎಂಬ ಸಾಮಾನ್ಯಜ್ಞಾನ ರಾಹುಲ್ ಗಾಂಧಿಗೆ ಇಲ್ಲ. ಅದಕ್ಕಾಗಿಯೇ ಅವರು ರಾಜ್ಯಕ್ಕೆ ಬಂದು ಪಾದಯಾತ್ರೆ ಮಾಡುತ್ತಿದ್ದಾರೆ. ಇದರ ವಿರುದ್ದ ಬಿಜೆಪಿಯಿಂದ ಹೋರಾಟ ಮಾಡಲಾಗುವುದು ಎಂದು ಎಚ್ಚರಿಸಿದರು.
‘ಕೈ'ಲಾಗದವನು ಮೈಪರಚಿಕೊಂಡ’ ಎಂಬಂತೆ ರಾಹುಲ್ ಗಾಂಧಿ ಚುನಾವಣಾ ಪ್ರಕ್ರಿಯೆ ಬಗ್ಗೆ ಕ್ಯಾತೆ ತೆಗೆಯುತ್ತಿದ್ದಾರೆ. ಮೂರು ಲೋಕಸಭಾ ಚುನಾವಣೆಗಳಲ್ಲಿ ಮೂರಂಕಿ ದಾಟಲಾಗದೆ ಕಾಶ್ಮೀರದಿಂದ ಕನ್ಯಾಕುಮಾರಿಯ ವರೆಗೆ ಕಾಂಗ್ರೆಸ್ ಅನ್ನು ಸಂಪೂರ್ಣವಾಗಿ ಮುಳುಗಿಸಿ ಸೋತು ಸುಣ್ಣವಾಗಿರುವ ಬಾಲಕ ಬುದ್ಧಿ ರಾಹುಲ್ ಈಗ ಕರ್ನಾಟಕದಲ್ಲಿ ಆಯೋಗದ ವಿರುದ್ಧ ಪಾದಯಾತ್ರೆ ಮಾಡಲಿದ್ದಾರೆ. ಯಾವ ಪುರುಷಾರ್ಥಕ್ಕಾಗಿ ಈ ಪಾದಯಾತ್ರೆ? ಎಂದು ಪ್ರಶ್ನಿಸಿದರು.
ಹರಿಯಾಣ, ಮಹಾರಾಷ್ಟ್ರ, ದಿಲ್ಲಿಯ ನಂತರ ಈಗ ಬಿಹಾರದಲ್ಲೂ ಹೀನಾಯ ಸೋಲಿನ ಮುನ್ಸೂಚನೆ ಸಿಕ್ಕಿದೆಯೇ?. ಇಷ್ಟಕ್ಕೂ ಇವರಿಗೆ ಕರ್ನಾಟಕ ಈಗ ನೆನಪಾಯಿತೇ? 24 ತಿಂಗಳಲ್ಲಿ 2ಸಾವಿರಕ್ಕೂ ಹೆಚ್ಚು ರೈತರು ಆತ್ಮಹತ್ಯೆಗೆ ಶರಣಾದಾಗ ಬರಲಿಲ್ಲ. ಐಪಿಎಲ್ ವಿಜಯೋತ್ಸವದ ವೇಳೆ ಸರಕಾರದ ಎಡವಟ್ಟಿನಿಂದ 11 ಜನ ಅಮಾಯಕ ಯುವಕರು ಸತ್ತಾಗ ಬರಲಿಲ್ಲ ಎಂದು ಅವರು ಟೀಕಿಸಿದರು.
‘ಮುಖ್ಯಮಂತ್ರಿ ಸಿದ್ದರಾಮಯ್ಯ ತಮ್ಮ ಪವರ್ ತೋರಿಸಲು ಡಿ.ಕೆ.ಶಿವಕುಮಾರ್‌ರನ್ನು ಸಭೆಗೆ ಆಹ್ವಾನಿಸಿಲ್ಲ. ಕಾಂಗ್ರೆಸ್ ಶಾಸಕರ ಬೆಂಬಲ ಡಿಕೆಶಿಗೆ ಇಲ್ಲವೆಂದು ಸಿದ್ದರಾಮಯ್ಯ ಘೋಷಣೆ ಮಾಡಿದ್ದಾರೆ. ಆದ್ದರಿಂದಲೇ ಆ ಸಭೆಗೆ ಅವರನ್ನು ಕರೆದಿಲ್ಲ. ಎರಡು ವರ್ಷದಿಂದ ಏನೂ ಕೊಡದೆ ಈಗ ಶಾಸಕರಿಗೆ 50ಕೋಟಿ ರೂ.ನೀಡಿದರೆ ಪ್ರಯೋಜನವಿಲ್ಲ. ಅದರಲ್ಲೂ ಸಿದ್ದರಾಮಯ್ಯನವರ ಬೆಂಬಲಿಗ ಶಾಸಕರಿಗೆ ಮಾತ್ರ 50 ಕೋಟಿ ರೂ.ನೀಡಲಾಗುತ್ತಿದೆ ಎಂದು ಅವರು ದೂರಿದರು.







