ಕೆ.ಎನ್.ರಾಜಣ್ಣ ವಜಾ | ಕಾಂಗ್ರೆಸ್ ಪಕ್ಷಕ್ಕೆ ಸತ್ಯ ಎಂದರೆ ಅಲರ್ಜಿ, ಸುಳ್ಳು ಎಂದರೆ ಎನರ್ಜಿ : ಆರ್.ಅಶೋಕ್

ಬೆಂಗಳೂರು : 2024ರ ಲೋಕಸಭೆ ಚುನಾವಣೆ ಸಂದರ್ಭದಲ್ಲಿ ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರದಲ್ಲಿದ್ದಾಗಲೇ ಮತದಾರರ ಪಟ್ಟಿ ಸಿದ್ಧಪಡಿಸಿದ್ದು ಎಂಬ ಸರಳ ಸತ್ಯವನ್ನು ಹೇಳಿದ್ದೇ ಸಚಿವ ರಾಜಣ್ಣನವರಿಗೆ ಮುಳುವಾಗಿರುವುದು ಅತ್ಯಂತ ದುರದೃಷ್ಟಕರ ಎಂದು ವಿಪಕ್ಷ ನಾಯಕ ಆರ್.ಅಶೋಕ್ ಹೇಳಿದ್ದಾರೆ.
ಸಚಿವ ಸಂಪುಟದಿಂದ ಕೆ.ಎನ್.ರಾಜಣ್ಣ ವಜಾ ವಿಚಾರ ಸಂಬಂಧ ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಪ್ರತಿಕ್ರಿಯಿಸಿರುವ ಅವರು, ರಾಹುಲ್ ಗಾಂಧಿ ಸುಳ್ಳಿಗೆ ಕನ್ನಡಿ ಹಿಡಿದ ದಲಿತ ಮಂತ್ರಿಗೆ ರಾಜೀನಾಮೆ "ಗ್ಯಾರೆಂಟಿ" ಭಾಗ್ಯ!. ಕಾಂಗ್ರೆಸ್ ಪಕ್ಷಕ್ಕೆ ಸತ್ಯ ಎಂದರೆ ಅಲರ್ಜಿ, ಸುಳ್ಳು ಎಂದರೆ ಎನರ್ಜಿ ಎಂದು ಟೀಕಿಸಿದ್ದಾರೆ.
ರಾಹುಲ್ ಗಾಂಧಿ ಅವರ ಮತಗಳ್ಳತನ ಸುಳ್ಳಿಗೆ ಕನ್ನಡಿ ಹಿಡಿದಿದ್ದೇ ಸಚಿವ ರಾಜಣ್ಣನವರ ತಪ್ಪಾ? ಸತ್ಯ ಹೇಳಿದ್ದಕ್ಕೆ ರಾಜೀನಾಮೆ ಶಿಕ್ಷೆನಾ? ಸತ್ಯದ ಮೇಲೆ ಪ್ರಮಾಣ ವಚನ ಸ್ವೀಕರಿಸಿದ ಸಿಎಂ ಸಿದ್ದರಾಮಯ್ಯನವರಿಗೆ ಸತ್ಯಕ್ಕಿಂತ, ದಲಿತ ಸಚಿವರೊಬ್ಬರ ಗೌರವಕ್ಕಿಂತ ಹೈಕಮಾಂಡ್ ಗುಲಾಮಗಿರಿಯೇ ಹೆಚ್ಚಾಗಿದ್ದು ದುರಂತ ಎಂದು ಹೇಳಿದ್ದಾರೆ.
ಸಚಿವ ರಾಜಣ್ಣನವರನ್ನು ಈ ರೀತಿ ಅಗೌರವವಾಗಿ ಸಂಪುಟದಿಂದ ವಜಾ ಮಾಡಿರುವುದು, ಕಾಂಗ್ರೆಸ್ ಪಕ್ಷದ ದಲಿತ ವಿರೋಧಿ ಮನಸ್ಥಿತಿಗೆ ಮತ್ತೊಂದು ತಾಜಾ ಉದಾಹರಣೆ ಅಷ್ಟೇ. ಬಾಬಾಸಾಹೇಬ್ ಅಂಬೇಡ್ಕರ್ ಅವರನ್ನೇ ಸೋಲಿಸಿದ ಕಾಂಗ್ರೆಸ್ ನವರು ರಾಜಣ್ಣಅವರ ಸತ್ಯವನ್ನು ಸಹಿಸುತ್ತಾರಾ? ಎಂದು ಪ್ರಶ್ನಿಸಿದ್ದಾರೆ.







