ಸಿ.ಟಿ.ರವಿ ವಿರುದ್ಧದ ಪ್ರಕರಣ ಹಿಂಪಡೆಯಬೇಕು : ಆರ್.ಅಶೋಕ್ ಒತ್ತಾಯ

ಬೆಂಗಳೂರು, ಸೆ. 11: ‘ವಿಧಾನ ಪರಿಷತ್ ಸದಸ್ಯ ಸಿ.ಟಿ.ರವಿ ವಿರುದ್ಧ ದಾಖಲಿಸಿದ ಪ್ರಕರಣವನ್ನು ಸರಕಾರ ಕೂಡಲೇ ಹಿಂಪಡೆಯಬೇಕು. ಸಿ.ಟಿ.ರವಿ ಯಾವುದೇ ದ್ವೇಷ ಭಾಷಣ ಮಾಡಿಲ್ಲ’ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್.ಅಶೋಕ್ ಹೇಳಿದರು.
ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಮದ್ದೂರಿನಲ್ಲಿ ಗಣೇಶ ಮೂರ್ತಿ ವಿಸರ್ಜನೆ ವೇಳೆ ಕಲ್ಲು ತೂರಾಟ ಮಾಡಿರುವುದನ್ನು ವಿರೋಧಿಸಿ ಮೊದಲ ಬಾರಿಗೆ ಬಂದ್ ನಡೆದಿದೆ. ಸ್ಥಳೀಯರ ಮನೆಗಳಲ್ಲಿ ಯಾರಾದರೂ ಸತ್ತರೆ ತಮಟೆ ಬಾರಿಸುವಂತಿಲ್ಲ, ಮೆರವಣಿಗೆಯಲ್ಲಿ ವಾದ್ಯ ಬಾರಿಸಬಾರದು ಎಂಬ ಸ್ಥಿತಿ ಇದೆ ಎಂದು ದೂರಿದರು.
ದ್ವೇಷ ರಾಜಕಾರಣ ಮಾಡಿದರೆ, ಬಿಜೆಪಿ ಮುಂದೆ ಅಧಿಕಾರಕ್ಕೆ ಬಂದಾಗ ಇದೇ ರೀತಿ ಮಾಡುತ್ತದೆ. ಹಿಂದಿನ ಮುಖ್ಯಮಂತ್ರಿ ಇಂತಹ ದ್ವೇಷ ರಾಜಕಾರಣ ಮಾಡಿಲ್ಲ. ಸಿ.ಟಿ.ರವಿ ಅವರ ವಿರುದ್ಧ ದಾಖಲಿಸಿದ ಪ್ರಕರಣವನ್ನು ಕೂಡಲೇ ವಾಪಸ್ ಪಡೆಯಬೇಕು. ಚಿಕ್ಕಮಗಳೂರು, ಉಡುಪಿ, ದಕ್ಷಿಣ ಕನ್ನಡದಲ್ಲಿ ಈ ರೀತಿಯ ಘಟನೆಗಳು ನಡೆಯುತ್ತಿತ್ತು. ಈಗ ಮಂಡ್ಯ, ಮೈಸೂರು ಭಾಗಗಳಲ್ಲಿ ಈ ರೀತಿ ಮಾಡುತ್ತಿದ್ದಾರೆ ಎಂದರು.
ಮುಸ್ಲಿಮರಲ್ಲೇ ಭಾರತದ ವಿರುದ್ಧ ಹಾಗೂ ಭಾರತದ ಪರವಾಗಿ ಇರುವ ಎರಡು ತಂಡ ಇದೆ. ನಾವೇನೂ ಮುಸ್ಲಿಮರ ವಿರುದ್ಧವಾಗಿಲ್ಲ. ಅಬ್ದುಲ್ ಕಲಾಂರನ್ನೇ ರಾಷ್ಟ್ರಪತಿಯಾಗಿ ನಾವು ಒಪ್ಪಿಕೊಂಡಿದ್ದೇವೆ. ಶಿಶುನಾಳ ಶರೀಫರ ಹಾಡುಗಳನ್ನು ನಾನು ಕೇಳಿ ಗೌರವಿಸುತ್ತೇನೆ. ಕವಿ ನಿಸಾರ್ ಅಹ್ಮದ್ ನನ್ನ ಕ್ಷೇತ್ರದಲ್ಲೇ ಇದ್ದು, ಅವರ ಹೆಸರು ಉಳಿಸಲು ಐದು ಎಕರೆ ಜಮೀನು ಕೊಡಿಸಿದ್ದೆ. ಇಂತಹ ದೇಶಪ್ರೇಮಿ ಮುಸ್ಲಿಮರ ಬಗ್ಗೆ ನಮಗೇನೂ ತಕರಾರಿಲ್ಲ ಎಂದರು.
ಕಾಂಗ್ರೆಸ್ ಶಾಸಕ ಬಿ.ಕೆ. ಸಂಗಮೇಶ್ವರ್ ಈಗಲೇ ಮುಸ್ಲಿಮ್ ಧರ್ಮಕ್ಕೆ ಮತಾಂತರವಾಗಲಿ. ಉಳಿದ ಶಾಸಕರ ಮನಸ್ಥಿತಿ ಇದೇ ರೀತಿಯಾಗಿದೆ. ಶಿವಮೊಗ್ಗದಲ್ಲಿ ಕಟೌಟ್‍ಗಳನ್ನು ಹಾಕಿದಾಗಲೇ ಇವರೆಲ್ಲರೂ ಮುಸ್ಲಿಮರಿಗೆ ಬೆಂಬಲ ನೀಡುತ್ತಾರೆ ಎಂಬುದು ಖಚಿತವಾಗಿದೆ. ಇದು ತಾಲಿಬಾನ್ ಸರಕಾರವಾಗಿದೆ ಎಂದರು.







