‘ಸಾಮಾಜಿಕ-ಶೈಕ್ಷಣಿಕ ಸಮೀಕ್ಷೆ’ ಜನರು ವೈಯಕ್ತಿಕ ಮಾಹಿತಿ ನೀಡಬೇಡಿ : ಆರ್.ಅಶೋಕ್

ಬೆಂಗಳೂರು, ಸೆ.28: ಕಾಂಗ್ರೆಸ್ ಸರಕಾರ ನಡೆಸುತ್ತಿರುವ ಸಾಮಾಜಿಕ-ಶೈಕ್ಷಣಿಕ ಸಮೀಕ್ಷೆಯಲ್ಲಿ ಜನರು ವೈಯಕ್ತಿಕ ಮಾಹಿತಿಗಳನ್ನು ನೀಡಲೇಬೇಕು ಎಂದೇನಿಲ್ಲ. ಸೂಕ್ತ ಎನಿಸಿದ ಪ್ರಶ್ನೆಗಳಿಗೆ ಮಾತ್ರ ಜನರು ಉತ್ತರ ನೀಡಬೇಕು. ಸಮೀಕ್ಷೆ ವಿಚಾರದಲ್ಲಿ ಜನರು ಎಚ್ಚರವಾಗಿರಬೇಕು ಎಂದು ಪ್ರತಿಪಕ್ಷ ನಾಯಕ ಆರ್.ಅಶೋಕ್ ಹೇಳಿದರು.
ರವಿವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯ ಸರಕಾರ ಮಾಡುತ್ತಿರುವ ಸಾಮಾಜಿಕ-ಶೈಕ್ಷಣಿಕ ಸಮೀಕ್ಷೆಯಲ್ಲಿ ಜನರು ಎಲ್ಲ ವಿವರವನ್ನು ಬಹಿರಂಗೊಳಿಸಬಾರದು ಎಂದು ತಿಳಿಸಿದರು.
ಜನರ ಬಳಿ ಏನೇನೋ ಪ್ರಶ್ನೆಗಳನ್ನು ಕೇಳುತ್ತಿದ್ದಾರೆ. ಇಂತಹ ಪ್ರಶ್ನೆಗಳಿಗೆ ಉತ್ತರ ನೀಡುವುದು ಜನರಿಗೆ ಬಿಟ್ಟ ವಿಚಾರ. ಇದನ್ನು ಕಾಂಗ್ರೆಸ್ ರಾಜಕೀಯಕ್ಕೆ ಬಳಸಿಕೊಳ್ಳುತ್ತಿದೆ. ಖಜಾನೆಯಲ್ಲಿ ಹಣವಿಲ್ಲದೆ, ರೇಷನ್ ಕಾರ್ಡ್ ರದ್ದು ಮಾಡುತ್ತಿದ್ದಾರೆ. ಅದಕ್ಕಾಗಿ ಮಾನದಂಡ ಬೇಕಾಗುತ್ತದೆ. ಈ ಕಾರಣಕ್ಕಾಗಿ ಹಾಗೂ ಯೋಜನೆಗಳಿಗೆ ಕತ್ತರಿ ಹಾಕಲು ಈ ಸಮೀಕ್ಷೆ ಮಾಡಲಾಗುತ್ತಿದೆ ಎಂದು ಅವರು ಹೇಳಿದರು.
ಮುಂದಿನ ಬಜೆಟ್ ರಚನೆ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಕಗ್ಗಂಟಾಗಿದೆ. ಅದಕ್ಕಾಗಿ ಹಣ ಉಳಿಸಬೇಕಿದೆ. ಇದು ಸಾಮಾಜಿಕ-ಶೈಕ್ಷಣಿಕ ಸಮೀಕ್ಷೆ ಅಲ್ಲ, ಇದು ಸಿದ್ದರಾಮಯ್ಯನವರ ಜಾತಿ ಸಮೀಕ್ಷೆ. ಜನರಿಗೆ ಪಂಗನಾಮ ಹಾಕುವ ಸಮೀಕ್ಷೆ. ಯಾರೂ ವೈಯಕ್ತಿಕ ದಾಖಲೆಗಳನ್ನು ನೀಡಬಾರದು. ಯಾವ ಯಾವ ಪ್ರಶ್ನೆಗೆ ಉತ್ತರ ಕೊಡಬಹುದೊ ಅಷ್ಟನ್ನು ಮಾತ್ರ ನೀಡಿದರೆ ಸಾಕು. ಹೈಕೋರ್ಟ್ ಕೂಡ ಎಲ್ಲ ಪ್ರಶ್ನೆಗಳಿಗೆ ಉತ್ತರ ನೀಡಬೇಕಿಲ್ಲ ಎಂದಿದೆ ಎಂದು ಅವರು ತಿಳಿಸಿದರು.
ಕಾಲ್ತುಳಿತ; ಡಿಎಂಕೆ ಸರಕಾರವೆ ನೇರ ಕಾರಣ :
ತಮಿಳುನಾಡಿನ ಕರೂರಿನಲ್ಲಾದ ಕಾಲ್ತುಳಿತದ ಘಟನೆಯಿಂದ ಇಡೀ ದೇಶ ಬೆಚ್ಚಿಬಿದ್ದಿದೆ. ವಿಧಾನಸೌಧದ ಮುಂಭಾಗ ಕಾಂಗ್ರೆಸ್ ಸರಕಾರದಿಂದ ನಡೆದಿದ್ದ ಆರ್‍ಸಿಬಿ ಸಂಭ್ರಮಾಚರಣೆಯಲ್ಲಾದ ಕಾಲ್ತುಳಿತ ಘಟನೆಯಿಂದಲೆ ನಾವೆಲ್ಲರೂ ದುಃಖಕ್ಕೊಳಗಾಗಿದ್ದೆವು. ತಮಿಳುನಾಡಿನಲ್ಲಿ ನಡೆದಿರುವ ದುರ್ಘಟನೆ ಇದಕ್ಕಿಂತಲೂ ದೊಡ್ಡದಾಗಿದೆ ಎಂದು ಅಶೋಕ್ ಹೇಳಿದರು.
ತಮಿಳುನಾಡಿನ ಡಿಎಂಕೆ ಸರಕಾರ ನಟ ವಿಜಯ್ ವಿರುದ್ಧ ಪ್ರಕರಣ ದಾಖಲಿಸಲು ಮುಂದಾಗಿದೆ. ಡಿಎಂಕೆ ಸರಕಾರ 10 ಸಾವಿರ ಜನರಿಗೆ ಅನುಮತಿ ನೀಡಿದೆ. ಆದರೆ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಮಾಡಿಲ್ಲ. ಈ ಹಿಂದೆಯೆ ಸರಕಾರಕ್ಕೆ ಕೋರ್ಟ್ ಸೂಚನೆ ನೀಡಿದ್ದರೂ, ಅದನ್ನು ಸರಕಾರ ಧಿಕ್ಕರಿಸಿದೆ. ಈ ಅನಾಹುತಕ್ಕೆ ಸ್ಟಾಲಿನ್ ನೇತೃತ್ವದ ಡಿಎಂಕೆ ಸರಕಾರವೆ ನೇರ ಕಾರಣ ಎಂದು ಅವರು ಆರೋಪಿಸಿದರು.
ನಟ ವಿಜಯ್ ಕೂಡಲೇ ಕ್ಷಮಾಪಣೆ ಕೇಳಿ, ಆಸ್ಪತ್ರೆಗೆ ಭೇಟಿ ನೀಡಬೇಕಿತ್ತು. ಅದನ್ನು ವಿಜಯ್ ಮಾಡಿಲ್ಲ. ಈ ಪ್ರಕರಣವನ್ನು ನಿವೃತ್ತ ನ್ಯಾಯಮೂರ್ತಿ ನೇತೃತ್ವದ ಸಮಿತಿಯಿಂದ ತನಿಖೆ ನಡೆಸಬೇಕು ಎಂದು ರಾಜ್ಯ ಬಿಜೆಪಿ ಘಟಕ, ತಮಿಳುನಾಡು ಸರಕಾರಕ್ಕೆ ಆಗ್ರಹಿಸುತ್ತಿದೆ ಎಂದು ಅಶೋಕ್ ಹೇಳಿದರು.
ಬೆಳಗಾವಿ, ರಾಯಚೂರು, ವಿಜಯಪುರ ಮೊದಲಾದ ಭಾಗಗಳಲ್ಲಿ ಪ್ರವಾಸ ಮಾಡಿ ಮಳೆ ಹಾನಿ ಪರಿಶೀಲನೆ ಮಾಡುತ್ತೇನೆ. ಹಿಂದೆ ಬಿಜೆಪಿ ಇದ್ದಾಗ ಜನರಿಗೆ ಉತ್ತಮ ಪರಿಹಾರ ನೀಡಲಾಗಿತ್ತು. ಈಗ ಕಾಂಗ್ರೆಸ್ ಏನೂ ನೀಡುತ್ತಿಲ್ಲ. ರೈತರಿಗೆ ಬೆಳೆ ಪರಿಹಾರ ನೀಡಿಲ್ಲ ಎಂದು ಅವರು ತಿಳಿಸಿದರು.







