ರಸ್ತೆ ಗುಂಡಿಗಳನ್ನು ಮುಚ್ಚಲು ಕಾಂಗ್ರೆಸ್ ಸರಕಾರದ ಬಳಿ ಹಣವಿಲ್ಲ: ಆರ್.ಅಶೋಕ್ ಟೀಕೆ

ಬೆಂಗಳೂರು : ‘ರಾಜ್ಯದಲ್ಲಿನ ಆಡಳಿತಾರೂಢ ಕಾಂಗ್ರೆಸ್ ಸರಕಾರ ಗುಂಡಿಗಳ ಸರಕಾರ, ಗುಂಡಿಗಳ ಸಚಿವ ಸಂಪುಟ ಆಗಿದೆ. ಎರಡುವರೆ ವರ್ಷಗಳಿಂದ ಯಾವುದೇ ಅಭವೃದ್ದಿ ಕೆಲಸ ಆಗಿಲ್ಲ. ಗ್ಯಾರೆಂಟಿ, ಗ್ಯಾರೆಂಟಿ ಎಂದು ಹೇಳುತ್ತಿದ್ದು, ರಸ್ತೆ ಗುಂಡಿಗಳನ್ನು ಮುಚ್ಚಲು ಇವರ ಬಳಿ ಹಣವಿಲ್ಲ’ ಎಂದು ವಿಪಕ್ಷ ನಾಯಕ ಆರ್.ಅಶೋಕ್ ಟೀಕಿಸಿದ್ದಾರೆ.
ಶನಿವಾರ ಇಲ್ಲಿನ ಗೋವಿಂದರಾಜನಗರ ಕ್ಷೇತ್ರದಲ್ಲಿ ರಸ್ತೆ ಗುಂಡಿ ದುರಸ್ತಿ ಮತ್ತು ಕಸ ವಿಲೇವಾರಿ ಮಾಡದ ಸರಕಾರ ವೈಫಲ್ಯ ಖಂಡಿಸಿ ಕ್ಷೇತ್ರದ ವಿವಿಧ ಬಡಾವಣೆಗಳಲ್ಲಿ ಬಿಜೆಪಿಯಿಂದ ಹಮ್ಮಿಕೊಂಡಿದ್ದ ಜನಜಾಗೃತಿ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಗುಂಡಿ ಮುಚ್ಚಲು 1800 ಕೋಟಿ ರೂ.ಖರ್ಚು ಮಾಡಲಾಗಿದೆ ಎಂದು ಹೇಳುತ್ತಾರೆ, ಎಲ್ಲಿ ರಸ್ತೆ ಗುಂಡಿ ಮುಚ್ಚಿದ್ದಾರೆ. ರಸ್ತೆ ಗುಂಡಿಗಳಿಂದ ಈವರೆಗೆ 12 ಮಂದಿ ಸಾವನ್ನಪ್ಪಿದ್ದಾರೆ. ಸಾವಿರಾರು ಕೋಟಿ ರೂ. ಜನರ ತೆರಿಗೆ ಹಣದಲ್ಲಿ ಒಂದೇ ಒಂದು ಉತ್ತಮ ರಸ್ತೆ ಮಾಡಲ್ಲಿಲ ಎಂದು ದೂರಿದರು.
ಬೆಂಗಳೂರು ನಗರಕ್ಕೆ ಬಿಜೆಪಿ ಕೊಡುಗೆ ಏನು ಎಂದು ಕೇಳುವ ಡಿಸಿಎಂ ಡಿ.ಕೆ.ಶಿವಕುಮಾರ್ ಅವರಿಗಾಗಿ ಬಿಜೆಪಿ ಶೀಘ್ರದಲ್ಲೇ ಬಿಜೆಪಿ ಕೊಡುಗೆಯ ಬಗ್ಗೆ ಶ್ವೇತಪತ್ರ ಹೊರಡಿಸುತ್ತೇವೆ. ಆದರೆ, ಬೆಂಗಳೂರು ಅಭಿವೃದ್ಧಿಗೆ ಕಾಂಗ್ರೆಸ್ ಏನು ಮಾಡಿದೆ ಎಂದು ಹೇಳಬೇಕು. ಗುಂಡಿ ಮುಚ್ಚುವ ವಿಷಯ ಸಿಎಂಗೆ ಹೇಳಿದರೆ ಉಪಮುಖ್ಯಮಂತ್ರಿಯವರನ್ನು ಹೇಳಿ ಎಂದು ಹೇಳುತ್ತಾರೆ. ಇದು ಜವಾಬ್ದಾರಿ ಇಲ್ಲದ ಸರಕಾರವಾಗಿದೆ ಎಂದು ಅವರು ಟೀಕಿಸಿದರು.
ನಗರದಲ್ಲಿ ಕಸ ವಿಲೇವಾರಿ ಸಮರ್ಪಕವಾಗಿ ಆಗುತ್ತಿಲ್ಲ. ನಗರದ ತುಂಬ ಕಸದ ರಾಶಿ ತುಂಬಿದೆ. ಬಿಜೆಪಿ ಆಡಳಿತದಲ್ಲಿ ಕಸದ ತೆರಿಗೆ 120 ರೂ.ಸಂಗ್ರಹ ಮಾಡಲಾಗುತ್ತಿತು. ಕಾಂಗ್ರೆಸ್ ಸರಕಾರ 700 ರೂ.ಕಸ ಸಂಗ್ರಹಕ್ಕೆ ವಸೂಲಿ ಮಾಡುತ್ತಿದ್ದಾರೆ. ಆದರೂ ಕಸವನ್ನು ಸೂಕ್ತ ರೀತಿಯಲ್ಲಿ ಇವರಿಗೆ ವಿಲೇವಾರಿ ಮಾಡಲು ಸಾಧ್ಯವಾಗುತ್ತಿಲ್ಲ ಎಂದು ಅವರು ವಾಗ್ದಾಳಿ ನಡೆಸಿದರು.
ಈ ವೇಳೆ ಶಾಸಕರಾದ ಎಸ್.ಸುರೇಶ್ ಕುಮಾರ್, ಡಾ.ಅಶ್ವಥ್ ನಾರಾಯಣ್, ಮುನಿರತ್ನ, ಪರಿಷತ್ ಮಾಜಿ ಸದಸ್ಯ ಅಶ್ವಥ್ ನಾರಾಯಣ್, ಬಿಜೆಪಿ ಮುಖಂಡರಾದ ಎಸ್.ಹರೀಶ್, ಕೆ.ಉಮೇಶ್ ಶೆಟ್ಟಿ ಸೇರಿದಂತೆ ಮತ್ತಿತರರು ಹಾಜರಿದ್ದರು.







