ಸಿದ್ದರಾಮಯ್ಯ ಸಿಎಂ ಕುರ್ಚಿ ಬಿಟ್ಟುಕೊಡುವುದಿಲ್ಲ, ಡಿಕೆಶಿ ಕಾಯುವುದು ವ್ಯರ್ಥ : ಆರ್.ಅಶೋಕ್

ಆರ್.ಅಶೋಕ್
ಬೆಂಗಳೂರು : ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಮ್ಮ ಸ್ಥಾನ ಬಿಟ್ಟುಕೊಡುವುದಿಲ್ಲ. ಅವರು ಮುಂದಿನ ಬಜೆಟ್ ಅನ್ನು ಮಂಡನೆ ಮಾಡಲಿದ್ದು, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಕಾಯುವುದು ವ್ಯರ್ಥ ಎಂದು ವಿಧಾನಸಭೆಯ ವಿಪಕ್ಷ ನಾಯಕ ಆರ್.ಅಶೋಕ್ ವ್ಯಂಗ್ಯವಾಡಿದ್ದಾರೆ.
ಗುರುವಾರ ವಿಧಾನಸೌಧದಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಮುಖ್ಯಮಂತ್ರಿ ಸಿದ್ದರಾಮಯ್ಯ ಯಾವುದೇ ಕುರ್ಚಿ ಖಾಲಿ ಇದ್ದರೂ ಮೊದಲು ಕುಳಿತುಕೊಳ್ಳುತ್ತಾರೆ. ಹೀಗಾಗಿ, ಸಂಕ್ರಮಣವೂ ಮುಗಿದಿದ್ದು, ಸಿಎಂ ಸ್ಥಾನಕ್ಕಾಗಿ ಡಿ.ಕೆ.ಶಿವಕುಮಾರ್ ಕಾಯುವುದು ವ್ಯರ್ಥ ಎಂದು ಟೀಕಿಸಿದರು.
ಅಧ್ಯಯನ ನೆಪದಲ್ಲಿ ಆಡಳಿತ ಪಕ್ಷದ ಶಾಸಕರು ವಿದೇಶಿ ಪ್ರವಾಸ ಹೋಗಲು ಮುಂದಾಗಿದ್ದಾರೆ. ಆದರೆ, ಇದಕ್ಕೆ ಯಾರ ಹಣ ಖರ್ಚು ಮಾಡಲಾಗುತ್ತಿದೆ ಎನ್ನುವುದು ಬಹಿರಂಗವಾಗಬೇಕು. ದನಗಳ ಬಗ್ಗೆ ಅಧ್ಯಯನವೋ? ಕುರಿಗಳ ಬಗ್ಗೆ ಅಧ್ಯಯನೋ?. ಅಥವಾ ನಾಲ್ಕು ಕುರ್ಚಿ ಕಾಲುಗಳ ಬಗ್ಗೆ ಅಧ್ಯಯನ ಮಾಡಲು ಹೋಗಿದ್ದಾರೊ? ಎಂದು ಅವರು ಟೀಕಿಸಿದರು.
ಔಷಧ: ಸರಕಾರಿ ಆಸ್ಪತ್ರೆಗಳಲ್ಲಿ ಔಷಧಗಳ ತೀವ್ರ ಕೊರತೆ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಸರಕಾರ ದಿವಾಳಿ ಆಗಿ ತಿಂಗಳುಗಳೇ ಆಗಿದೆ. ಔಷಧ ಖರೀದಿಗೂ ಖಜಾನೆಯಲ್ಲಿ ಹಣ ಇಲ್ಲ. ಆರೋಗ್ಯ ಇಲಾಖೆ ದಿವಾಳಿ ಹಂತಕ್ಕೆ ಹೋಗಿದ್ದು, ಚಳಿಗಾಲ ಹಿನ್ನೆಲೆಯ ಜನರಿಗೆ ಈಗ ಆರೋಗ್ಯ ಸಮಸ್ಯೆ ಇದೆ. ಆದರೆ ಆರೋಗ್ಯ ಇಲಾಖೆಯೇ ಅನಾರೋಗ್ಯಕ್ಕೆ ಒಳಗಾಗಿದೆ ಎಂದು ಆರೋಪಿಸಿದರು.
ಸುಮಾರು 800 ವಿವಿಧ ಮಾದರಿಯ ಔಷಧಗಳ ಅಗತ್ಯ ಇದೆ. ಈ ಪಟ್ಟಿಯನ್ನು ನಾನು ಸದನದಲ್ಲಿಟ್ಟಿದ್ದೆ. ಇನ್ನೊಂದೇ ವಾರದಲ್ಲಿ ಔಷಧಗಳು ಬರುತ್ತವೆ ಎಂದು ದಿನೇಶ್ ಗುಂಡೂರಾವ್ ಹೇಳಿದರು. ಆದರೆ ಯಾವುದೇ ಔಷಧಗಳು ಇನ್ನೂ ಬಂದಿಲ್ಲ, ಶೇಖರಿಸಿ ಇಟ್ಟಿದ್ದ ಔಷಧ ಈಗಾಗಲೇ ಖಾಲಿ ಆಗಿದೆ ಎಂದು ಅಶೋಕ್ ಆರೋಪಿಸಿದರು.







