‘ಶೃಂಗೇರಿ’ ಅಂಚೆ ಮತಗಳ ಮರು ಎಣಿಕೆ ವಿಚಾರ | ರಾಜ್ಯಪಾಲರ ಮಧ್ಯಪ್ರವೇಶಕ್ಕೆ ಬಿಜೆಪಿ ಮನವಿ; ಗೆದ್ದವರನ್ನು ಗೌರವಿಸಿ : ಆರ್.ಅಶೋಕ್

ಬೆಂಗಳೂರು : ‘ಮುಖ್ಯಮಂತ್ರಿ ಸಿದ್ದರಾಮಯ್ಯನವರು ಮನಸೋ ಇಚ್ಛೆ ಹೇಳಿಕೆ ಕೊಡುವುದು ಒಳ್ಳೆಯದಲ್ಲ, ಗೆದ್ದವರಿಗೆ ಸಂವಿಧಾನ ತಿಳಿಸಿದಂತೆ ಗೌರವ ಕೊಡುವುದು ಕರ್ತವ್ಯ. ಅದನ್ನು ಉಲ್ಲಂಘಿಸುವುದು ಅಕ್ಷಮ್ಯ ಅಪರಾಧ’ ಎಂದು ವಿಪಕ್ಷ ನಾಯಕ ಆರ್.ಅಶೋಕ್ ತಿಳಿಸಿದ್ದಾರೆ.
ಮಂಗಳವಾರ ಲೋಕಭವನದಲ್ಲಿ ಶೃಂಗೇರಿ ಕ್ಷೇತ್ರದ ಅಂಚೆ ಮತಗಳ ಮರು ಎಣಿಕೆ ಹಿನ್ನೆಲೆಯಲ್ಲಿ ಜೀವರಾಜ್ ಗೆಲುವು ಸಾಧಿಸಿದ್ದು, ಅವರಿಗೆ ಪ್ರಮಾಣ ವಚನ ಬೋಧನೆ ಸಂಬಂಧ ರಾಜ್ಯಪಾಲರ ಮಧ್ಯಪ್ರವೇಶಕ್ಕೆ ಕೋರಿ ಮನವಿ ಸಲ್ಲಿಸಿದ ಬಳಿಕ ಮಾತನಾಡಿದ ಅವರು, ರಾಜ್ಯಪಾಲ ಥಾವರ್ ಚಂದ್ ಗೇಹ್ಲೋಟ್ ಅವರು ನಮ್ಮ ಮನವಿ ಸಂಬಂಧ ಸರಕಾರಕ್ಕೆ ಪತ್ರ ಬರೆಯುವುದಾಗಿ ಹೇಳಿದ್ದಾರೆ ಎಂದು ನುಡಿದರು.
ಸಂವಿಧಾನದತ್ತವಾಗಿ ವಿಧಾನಸಭಾ ಸ್ಪೀಕರ್ ಅವರು ಶಾಸಕತ್ವದ ಪ್ರಮಾಣ ವಚನ ಬೋಧಿಸಬೇಕು. ಇಲ್ಲವಾದರೆ ರಾಜ್ಯಪಾಲರು ಪ್ರಮಾಣ ವಚನ ಬೋಧಿಸಬೇಕು. ಲೋಕಭವನದಲ್ಲಿಯೇ ನಾವು ಪ್ರತಿಜ್ಞಾವಿಧಿ ಪಡೆಯುತ್ತೇವೆ. ಹಾಗಾದರೆ ಸ್ಪೀಕರ್ ಅವರಿಗೆ ಏನು ಗೌರವ ಉಳಿಯಲಿದೆ ಎಂದು ಅವರು ಪ್ರಶ್ನಿಸಿದರು.
ತಮಿಳುನಾಡಿನಲ್ಲಿ ನಟ ವಿಜಯ್ ಹೆಚ್ಚು ಸ್ಥಾನ ಪಡೆದರೂ ಬಹುಮತ ಸಿಕ್ಕಿಲ್ಲ. ಕಾಂಗ್ರೆಸ್ಸಿನವರು ಎಲ್ಲಿ ಊಟ ಚೆನ್ನಾಗಿ ಸಿಗುತ್ತದೋ ಅಲ್ಲಿಗೆ ಓಡಿ ಹೋಗುತ್ತಾರೆ. ಅವರಿಗೆ ನೀತಿ-ನಿಯತ್ತು ಏನೂ ಇಲ್ಲ. ಇಷ್ಟು ದಿನ ನಮ್ಮ ಡಿಎಂಕೆ ಎಂದು ಹಾಡಿ ಹೊಗಳಿದರು. ಇದೀಗ ಕಾಂಗ್ರೆಸ್ಸಿನ ತಮಿಳುನಾಡು ಘಟಕವು ವಿಜಯ್‍ಗೆ ಬೆಂಬಲ ನೀಡಬೇಕೆಂದು ತೀರ್ಮಾನಿಸಿದೆ. ಇವರಿಗೆ ನಾಚಿಕೆ ಆಗಬೇಕು ಎಂದು ಅವರು ಟೀಕಿಸಿದರು.
ಇಂಡಿಯಾ ಒಕ್ಕೂಟವು ಕಳ್ಳರ ಕೂಟದಂತಿದೆ. ಕಾಂಗ್ರೆಸ್ಸಿನವರನ್ನು ನಂಬಬೇಡಿ ಎಂದು ಮೋದಿ ಬಹಳ ದಿನಗಳಿಂದ ಹೇಳುತ್ತಿದ್ದಾರೆ. ತಮಿಳುನಾಡಿನ ರಾಜಕೀಯ ಬೆಳವಣಿಗೆಗಳನ್ನು ಗಮನಿಸಿದರೆ, ಕಾಂಗ್ರೆಸ್ ಪಕ್ಷವು ಡಿಎಂಕೆಗೆ ಕೈಕೊಡುವುದು ಸ್ಪಷ್ಟಗೊಂಡಿದೆ. ಕಾಂಗ್ರೆಸ್ಸಿನ ಚಿಹ್ನೆ ಕೈ ಎಂಬುದು ಕೈಕೊಡುವ ಗುರುತು ಎಂದು ದೂರಿದರು.
ಇವತ್ತು ಡಿಎಂಕೆಗೆ ಕೈಕೊಡುವ ಗುರುತನ್ನು ತೋರಿಸಲಿದ್ದಾರೆ. ಕಾಂಗ್ರೆಸ್ಸಿಗೆ ಸಿದ್ಧಾಂತವೂ ಇಲ್ಲ, ಗೆದ್ದೆತ್ತಿನ ಬಾಲ ಹಿಡಿಯುವುದೇ ಕಾಂಗ್ರೆಸ್ಸಿನ ಧರ್ಮ. ಚಿನ್ನ, ಗ್ಯಾಸ್, ಸೀರೆ, ಓಲೆ ಕೊಡುವುದಾಗಿ ಹೇಳಿದ್ದಾರೆ. ಒಂದು ವರ್ಷ ಬಿಡಿ. ಏನೆಲ್ಲ ಕೊಡುತ್ತಾರೆ ನೋಡೋಣ. ವಿಜಯ್ ಸರಕಾರಕ್ಕೆ ಎಲ್ಲಿಂದ ಬೆಂಬಲ ಸಿಗಲಿದೆ? ಕಾಂಗ್ರೆಸ್ಸಿನವರು ಅವರಿಗೆ ಯಾವ ರೀತಿ ಬೆಂಬಲ ನೀಡುತ್ತಾರೆಂದು ನೋಡೋಣ ಎಂದು ವಾಗ್ದಾಳಿ ನಡೆಸಿದರು.
ಈ ವೇಳೆ ಮಾಜಿ ಸಚಿವ ಆರಗ ಜ್ಞಾನೇಂದ್ರ, ಶೃಂಗೇರಿ ವಿಧಾನಸಭಾ ಕ್ಷೇತ್ರದ ನೂತನ ಶಾಸಕ ಡಿ.ಎನ್. ಜೀವರಾಜ್ ಹಾಜರಿದ್ದರು.






