ಸಿಎಂ ಬದಲಾದರೆ ಸಾಕೇ?, ಬೆಂಗಳೂರು ಬದಲಾಗುವುದು ಯಾವಾಗ? : ಆರ್.ಅಶೋಕ್

ಬೆಂಗಳೂರು : ‘ಮುಖ್ಯಮಂತ್ರಿ ಬದಲಾದರೆ ಸಾಕೇ?, ಬೆಂಗಳೂರು ನಗರ ಬದಲಾಗುವುದು ಯಾವಾಗ?’ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್.ಅಶೋಕ್ ಇಂದಿಲ್ಲಿ ಖಾರವಾಗಿ ಪ್ರಶ್ನಿಸಿದ್ದಾರೆ.
ರವಿವಾರ ಎಕ್ಸ್ ನಲ್ಲಿ ಪೋಸ್ಟ್ ಹಾಕಿರುವ ಅವರು, ‘ಬ್ರ್ಯಾಂಡ್ ಬೆಂಗಳೂರು’ ಎನ್ನುವುದು ಕೇವಲ ಜಾಹೀರಾತಿಗೆ ಸೀಮಿತವಾಗಿದೆ. ಒಂದೆಡೆ ಮಳೆ ಬಂದರೆ ರಸ್ತೆಗಳಲ್ಲಿ ಪ್ರವಾಹ, ಮತ್ತೊಂದೆಡೆ ಗುಂಡಿಗಳ ಹಾವಳಿ, ಇನ್ನೊಂದೆಡೆ ಜೀವಹಾನಿ. ಈಗ ಬೆಂಗಳೂರಿನಲ್ಲಿ ಕಸ ವಿಲೇವಾರಿ ಸ್ಥಗಿತಗೊಳ್ಳುವ ಎಚ್ಚರಿಕೆ. ಗುತ್ತಿಗೆದಾರರ ಸಂಘವೇ ಜಿಬಿಎ ಆಯುಕ್ತರಿಗೆ ಪತ್ರ ಬರೆದು ಸೇವೆ ನಿಲ್ಲಿಸುವ ಎಚ್ಚರಿಕೆ ನೀಡಿರುವುದು ಕಾಂಗ್ರೆಸ್ ಸರಕಾರದ ಆಡಳಿತದ ಮತ್ತೊಂದು ಕೆಟ್ಟ ಬೆಳವಣಿಗೆ’ ಎಂದು ಟೀಕಿಸಿದ್ದಾರೆ.
‘ಭಾವಿ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ‘ಬ್ರ್ಯಾಂಡ್ ಬೆಂಗಳೂರು’ ಎಂದು ದೊಡ್ಡ ಘೋಷಣೆ ಮಾಡುತ್ತಿದ್ದಾರೆ. ಆದರೆ ವಾಸ್ತವದಲ್ಲಿ ಬೆಂಗಳೂರು ಎದುರಿಸುತ್ತಿರುವ ಸಮಸ್ಯೆಗಳು ದಿನದಿಂದ ದಿನಕ್ಕೆ ಹೆಚ್ಚುತ್ತಿವೆ. ಕಸದ ಸಮಸ್ಯೆ, ಹದಗೆಟ್ಟ ರಸ್ತೆಗಳು, ಸಂಚಾರ ದಟ್ಟಣೆ, ಮಳೆ ನೀರು ನಿರ್ವಹಣೆಯ ವೈಫಲ್ಯ, ಕುಡಿಯುವ ನೀರಿನ ಸಮಸ್ಯೆ ಹಾಗೂ ಮೂಲಸೌಕರ್ಯಗಳ ಕೊರತೆಯಿಂದ ಜನರು ತತ್ತರಿಸಿದ್ದಾರೆ’ ಎಂದು ಅವರು ಗಮನ ಸೆಳೆದಿದ್ದಾರೆ.
‘ರಾಜ್ಯದ ಆರ್ಥಿಕ ಶಕ್ತಿ ಕೇಂದ್ರವಾಗಿರುವ ಬೆಂಗಳೂರಿನ ಅಭಿವೃದ್ಧಿಗೆ ಆದ್ಯತೆ ನೀಡುವ ಬದಲು ಕಾಂಗ್ರೆಸ್ ಅಧಿಕಾರದ ಹಪಾಹಪಿಯಲ್ಲಿ ತೊಡಗಿದೆ. ಮಾತಲ್ಲಿ ಮಾತ್ರ ‘ಬ್ರ್ಯಾಂಡ್ ಬೆಂಗಳೂರು’, ಆದರೆ ಜನರ ಅನುಭವದಲ್ಲಿ ‘ದುರಾವಸ್ಥೆಯ ಬೆಂಗಳೂರು’ ಆಗಿದೆ. ನಗರದ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಕಲ್ಪಿಸುವ ಮೂಲಕ ಸರಕಾರ ತನ್ನ ಜವಾಬ್ದಾರಿ ನಿರ್ವಹಿಸಬೇಕು. ಜನರ ಸಹನೆಗೂ ಒಂದು ಮಿತಿ ಇದೆ’ ಎಂದು ಅಶೋಕ್ ಎಚ್ಚರಿಕೆ ನೀಡಿದ್ದಾರೆ.






