ಹನೂರು ಶೂಟೌಟ್ ಪ್ರಕರಣ | ನ್ಯಾಯಾಂಗ ತನಿಖೆ ಆದರೆ ಮಾತ್ರ ಸತ್ಯ ತಿಳಿಯಲಿದೆ : ಆರ್.ಅಶೋಕ್

ಬೆಂಗಳೂರು : ಚಾಮರಾಜನಗರ ಜಿಲ್ಲೆ ಹನೂರು ತಾಲೂಕಿನ ಕಾವೇರಿ ವನ್ಯಜೀವಿಧಾಮದ ಮರಿಯ ಮಂಗಲ ಅರಣ್ಯ ಪ್ರದೇಶದಲ್ಲಿ ನಡೆದ ಎನ್‍ಕೌಂಟರ್‌ನ ಸತ್ಯಾಸತ್ಯತೆ ತಿಳಿಯಲು ಪ್ರಕರಣವನ್ನು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ನ್ಯಾಯಾಂಗ ತನಿಖೆಗೆ ಒಪ್ಪಿಸಬೇಕು ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್.ಅಶೋಕ್ ಅವರು ಆಗ್ರಹಿಸಿದ್ದಾರೆ.
ನಗರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಮುಖ್ಯಮಂತ್ರಿಗಳು ಆಪಾದನೆ ಬರುತ್ತದೆ ಎಂದು ಎ.ಸಿ ನೇತೃತ್ವದಲ್ಲಿ ತನಿಖಾ ಸಂಸ್ಥೆ ರಚನೆ ಮಾಡಿದ್ದಾರೆ. ಅಧಿಕಾರಿಗಳ ಮೇಲೆ ಅಧಿಕಾರಿಗಳೇ ತನಿಖೆ ಮಾಡಿದರೆ ತನಿಖೆ ಹಳ್ಳ ಹಿಡಿಯುವುದು ಶತಸಿದ್ಧ. ಈವರೆಗೆ ನಡೆದ ನೂರು ತನಿಖೆಗಳು ಅಧಿಕಾರಿಗಳ ಪರವಾಗಿಯೇ ಬಂದಿವೆ. ಆದ್ದರಿಂದ ನ್ಯಾಯಾಂಗ ತನಿಖೆ ಆದರೆ ಮಾತ್ರವೇ ಸತ್ಯ ತಿಳಿಯಲಿದೆ ಎಂದು ತಿಳಿಸಿದರು.
ತನಿಖೆ ಆಗುವವರೆಗೆ ಪ್ರಕರಣದಲ್ಲಿ ಭಾಗಿಯಾದವರನ್ನು ಕರ್ತವ್ಯದಿಂದ ಮುಕ್ತಿಗೊಳಿಸಬೇಕು. ಜನರ ಗೊಂದಲ ನಿವಾರಣೆಯಾಗಲು ನ್ಯಾಯಾಂಗ ತನಿಖೆ ಸೂಕ್ತ. ಗುಂಡಿನ ದಾಳಿ ಮಾಡಲೇ ಬೇಕಿತ್ತೇ ಎಂಬ ಪ್ರಶ್ನೆಯೂ ಇಲ್ಲಿ ಉದ್ಬವಿಸಲಿದೆ. ಮೂರು ಜನರ ಮೇಲೆ ಗುಂಡು ಹಾರಿಸಬೇಕಾದ ಅವಶ್ಯಕತೆ ಇತ್ತೇ ಎಂದು ಪ್ರಶ್ನಿಸಿದರು.
ಬೇಟೆಗಾರರ ಬಳಿ ಯಾವ ಬಂದೂಕುಗಳಿದ್ದವು ಎಂಬುದನ್ನು ಅರಣ್ಯ ಇಲಾಖೆ ಈವರೆಗೆ ಬಹಿರಂಗ ಮಾಡಿಲ್ಲ. ಮಾಂಸವಿತ್ತೇ ಎಂದು ಹೇಳಿಲ್ಲ. ಆದ್ದರಿಂದ ಇಲಾಖೆ ತನಿಖೆ ನಡೆದರೆ ಸತ್ಯ ಹೊರಬರುವುದಿಲ್ಲ. ರಾಮಲಿಂಗಾರೆಡ್ಡಿ ಅವರು ಅರಣ್ಯ ಸಚಿವರಾದ ಕೂಡಲೇ ಮೂವರು ಎನ್‍ಕೌಂಟರ್ ಆಗಿದ್ದಾರೆ. ಸಚಿವರು ಈವರೆಗೂ ಸ್ಥಳಕ್ಕೆ ಭೇಟಿ ನೀಡಿಲ್ಲ. ಸಚಿವರು ಅರಣ್ಯ ಸಿಬ್ಬಂದಿ ಸಭೆ ಮಾಡಬೇಕಿತ್ತು. ಎನ್‍ಕೌಂಟರ್ ವಿರೋಧಿಸಿ ಪ್ರತಿಭಟನೆ ಮಾಡುತ್ತಿರುವವರ ಮಾತನ್ನೂ ಕೇಳಬೇಕಿತ್ತು. ಯಾವ ಕಾರಣಕ್ಕೆ ಹೋಗಿಲ್ಲ ಎಂಬುದು ತಿಳಿಯುತ್ತಿಲ್ಲ ಎಂದು ದೂರಿದರು.
ನೈಸ್ ಸಂಬಂಧ ಕುಮಾರಸ್ವಾಮಿ ಹೇಳಿಕೆಗೆ ಬೆಂಬಲ ಇದೆ :
ನೈಸ್ ಸಂಬಂಧ ಕುಮಾರಸ್ವಾಮಿ ಹೇಳಿಕೆಗೆ ಬೆಂಬಲ ಇದೆ. ಈ ಹಿಂದೆ ಮೊದಲ ಬಾರಿಗೆ ನೈಸ್ ವಿರುದ್ಧ ಪ್ರತಿಭಟನೆ ಮಾಡಿದ್ದೆ. ರೈತರ ವಿರುದ್ಧ ಯೋಜನೆ ಎಂದು ವಿರೋಧಿಸಿದ್ದೆ. ನೈಸ್ ಎಂಬುದು ನೈಸ್ ಆಗಿ ಕರ್ನಾಟಕದ ಜನತೆ ಲೂಟಿ ಹೊಡೆದ ಸಂಸ್ಥೆ. ಟೋಲ್ ಹೆಸರಲ್ಲಿ ಕೋಟ್ಯಂತರ ಹಣ ಲೂಟಿಯಾಗ್ತಿದೆ. ನೈಸ್ ನವರು ಅಗ್ರಿಮೆಂಟ್ ಪ್ರಕಾರ ರಸ್ತೆ ಮಾಡಿಲ್ಲ. ಟೋಲ್ ದರವನ್ನೂ ವರ್ಷ ವರ್ಷ ಏರಿಕೆ ಮಾಡ್ತಾ ಇದ್ದಾರೆ. ಮೂವತ್ತು ವರ್ಷ ಮಾತ್ರ ಟೋಲ್ ಸಂಗ್ರಹ ಮಾಡಬೇಕು ಎಂಬ ನಿಯಮ ಇತ್ತು. ಆದರೆ ಈಗಲೂ ಸಂಗ್ರಹ ಮಾಡ್ತ ಇದ್ದಾರೆ ಎಂದರು.






