ನಾಗೇಂದ್ರ ರಾಜೀನಾಮೆ ನೀಡುವುದು ಖಚಿತ : ಆರ್.ಅಶೋಕ್

ಬೆಂಗಳೂರು : ‘ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ಅಕ್ರಮ ಆರೋಪಕ್ಕೆ ಸಿಲುಕಿರುವ ಸಚಿವ ನಾಗೇಂದ್ರ ವಿರುದ್ಧ ಸದನದಲ್ಲಿ ನಿರಂತರ ಹೋರಾಟ ಮಾಡಿದ್ದೇವೆ. ಆದುದರಿಂದ ಅವರು ರಾಜೀನಾಮೆ ನೀಡುವುದು ಖಚಿತ’ ಎಂದು ವಿಪಕ್ಷ ನಾಯಕ ಆರ್.ಅಶೋಕ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಗುರುವಾರ ವಿಧಾನಸೌಧದಲ್ಲಿ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ನಾಗೇಂದ್ರ ವಿಚಾರಕ್ಕೆ ಸಂಬಂಧಿಸಿದಂತೆ ಸಿಬಿಐ ಹಾಗೂ ಇಡಿ ತನಿಖೆಗೆ ಅನುಮತಿ ಕೋರಿ ರಾಜ್ಯಪಾಲರಿಗೆ ಮನವಿ ಸಲ್ಲಿಸಿದೆ. ದಲಿತರ ಹಣ ಲೂಟಿ ಮಾಡಿದಾಗ ಇವರಿಗೆ ತಾವು ದಲಿತರು ಎಂದು ಗೊತ್ತಿರಲಿಲ್ಲ. ಈಗ ಮಾತ್ರ ಜಾತಿಯ ರಕ್ಷಣೆ ಪಡೆಯುತ್ತಿದ್ದಾರೆ. ಹಗರಣ ನಡೆದಿಲ್ಲವೆಂದಾದರೆ ಚಂದ್ರಶೇಖರ್ ಏಕೆ ಆತ್ಮಹತ್ಯೆ ಮಾಡಿಕೊಳ್ಳಬೇಕಿತ್ತು? ಅವರನ್ನು ಮರಳಿ ಸಂಪುಟಕ್ಕೆ ಸೇರಿಸಿದ್ದು ಏಕೆಂದು ಕಾರಣ ನೀಡಬೇಕು ಎಂದು ಆಗ್ರಹಿಸಿದರು.
ಹಗರಣದ ಮೂಲ ಸೂತ್ರದಾರರು ಹೈಕಮಾಂಡ್ ಎಂಬುದು ಬಯಲಾಗುತ್ತದೆ ಎಂಬ ಕಾರಣಕ್ಕೆ ಅವರನ್ನು ಮತ್ತೆ ಸಂಪುಟಕ್ಕೆ ತೆಗೆದುಕೊಳ್ಳಲಾಗಿದೆ. ದಲಿತರ ಹಣ ನುಂಗಿದವರು ಸಂಪುಟದಲ್ಲಿ ಇರಬಾರದು ಎಂಬ ಸಂದೇಶವನ್ನು ನಾವು ನೀಡಿದ್ದೇವೆ. ನಮ್ಮ ಹೋರಾಟಕ್ಕೆ ಖಂಡಿತ ಬೆಲೆ ಸಿಗಲಿದ್ದು, ಸಚಿವ ನಾಗೇಂದ್ರ ರಾಜೀನಾಮೆ ನೀಡುವುದು ಖಚಿತ. ಒಂದು ವಾರದಲ್ಲಿ ತೀರ್ಮಾನವಾಗದೇ ಇದ್ದರೆ ಸಿಎಂ ಮನೆಗೂ ಮುತ್ತಿಗೆ ಹಾಕುತ್ತೇವೆ ಎಂದು ಎಚ್ಚರಿಸಿದರು.
‘ಬರ’ ಹಣ ಬಿಡುಗಡೆ ಮಾಡಿ: ರಾಜ್ಯ ಸರಕಾರವು ಕಾಟಾಚಾರಕ್ಕೆ ಬರಗಾಲ ಘೋಷಣೆ ಮಾಡಿದೆ. ಆದರೆ 175 ತಾಲೂಕುಗಳಲ್ಲಿ ಬರ ಘೋಷಿಸಿ, ಹಣ ಬಿಡುಗಡೆ ಬಗ್ಗೆ ಸರಿಯಾಗಿ ತಿಳಿಸಬೇಕು. ಕೊಳ್ಳೆ ಹೊಡೆದ ಮೇಲೆ ಕೋಟೆಯ ಬಾಗಿಲು ಹಾಕಿದಂತೆ ರಾಜ್ಯ ಸರಕಾರ ನಾಲ್ಕು ತಿಂಗಳ ಬರಗಾಲ ಘೋಷಣೆ ಮಾಡಿದೆ. ಎಕರೆಗೆ 50 ಸಾವಿರ ರೂ.ನೀಡಬೇಕೆಂದು ಆಗ್ರಹ ಮಾಡಿದ್ದರೂ ಅದನ್ನು ಪರಿಗಣಿಸಿಲ್ಲ ಎಂದು ಅವರು ಆಕ್ಷೇಪಿಸಿದರು.
ಕಂದಾಯ ಸಚಿವರು ಕೇವಲ ಬರ ಘೋಷಣೆ ಮಾಡುವುದಲ್ಲ. ಯಾವ ಕ್ರಮ ವಹಿಸಲಾಗಿದೆ, ಎಷ್ಟು ಹಣ ನೀಡಲಾಗಿದೆ ಎಂದು ನಿಖರವಾಗಿ ಹೇಳಬೇಕು. ಕೇಂದ್ರ ಸರಕಾರ ಪ್ರತಿ ನಾಲ್ಕು ತಿಂಗಳಿಗೊಮ್ಮೆ ಹಣ ನೀಡುತ್ತದೆ. ಆ ಹಣ ಎಷ್ಟಿದೆ ಎಂದು ತಿಳಿಸಬೇಕು. ತಮಿಳುನಾಡಿನ ಸಿಎಂ ಬೆಳೆ ಬೆಳೆಯಿರಿ ಎಂದು ರೈತರಿಗೆ ಕರೆ ನೀಡಿದರೆ, ನಮ್ಮ ಸಿಎಂ ಬೆಳೆ ಬೆಳೆಯಬೇಡಿ ಎಂದು ಹೇಳುತ್ತಿದ್ದಾರೆಂದು ಅವರು ಟೀಕಿಸಿದರು.
ಸಾಲ ಮನ್ನಾ: ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಸಾಲಮನ್ನಾ ಬಗ್ಗೆ ಹೇಳಿ ಎರಡು ತಿಂಗಳು ಕಳೆದಿದೆ. ಪ್ರತಿ ರೈತರಿಗೆ ಕನಿಷ್ಠ 1ಲಕ್ಷ ರೂ.ಸಾಲ ಮನ್ನಾ ಮಾಡಬೇಕು. ವಿಬಿ ಜಿ ರಾಮ್‍ಜೀ ಯೋಜನೆಯನ್ನು ಸರಿಯಾಗಿ ಬಳಸಿಕೊಂಡರೆ ವಲಸೆ ತಪ್ಪಿಸಬಹುದು. ಆ ಬಗ್ಗೆಯೂ ಕ್ರಮ ವಹಿಸಬೇಕು ಎಂದು ಅಶೋಕ್ ಆಗ್ರಹಿಸಿದರು.






