‘ಬರ’ ಕರ್ನಾಟಕಕ್ಕೆ ಭೇಟಿ ನೀಡಿ; ರಾಹುಲ್ ಗಾಂಧಿಗೆ ಪ್ರತಿಪಕ್ಷ ನಾಯಕ ಆರ್.ಅಶೋಕ್ ಪತ್ರ

ಬೆಂಗಳೂರು : ಬರ ಪೀಡಿತ ಪ್ರದೇಶಗಳಿಗೆ ಮುಖ್ಯಮಂತ್ರಿ ಹಾಗೂ ಸಚಿವರು ಭೇಟಿ ನೀಡಿ ಬರಗಾಲದ ಭೀಕರತೆಯನ್ನು ಅರ್ಥ ಮಾಡಿಕೊಂಡು ರೈತರಿಗೆ ತಕ್ಷಣ ಹೆಚ್ಚಿನ ಪರಿಹಾರ ಕೊಡಬೇಕು. ಇದಕ್ಕಾಗಿ ರಾಜ್ಯಕ್ಕೆ ಭೇಟಿ ನೀಡಿ ಎಂದು ಕೋರಿ, ಲೋಕಸಭೆಯ ವಿಪಕ್ಷ ನಾಯಕ ರಾಹುಲ್ ಗಾಂಧಿ ಅವರಿಗೆ ಪ್ರತಿಪಕ್ಷ ನಾಯಕ ಆರ್.ಅಶೋಕ್ ಪತ್ರ ಬರೆದಿದ್ದಾರೆ.
ಬುಧವಾರ ಈ ಸಂಬಂಧ ರಾಹುಲ್ ಗಾಂಧಿ ಅವರಿಗೆ ಪತ್ರ ಬರೆದಿರುವ ಅವರು, ನಾಲ್ಕು ತಿಂಗಳು ಕಳೆದರೂ ರೈತರಿಗೆ ನಯಾಪೈಸೆ ಪರಿಹಾರ ನೀಡಿಲ್ಲ. ಕರ್ನಾಟಕವು ಇತ್ತೀಚಿನ ವರ್ಷಗಳಲ್ಲೇ ಅತ್ಯಂತ ತೀವ್ರ ಬರ ಪರಿಸ್ಥಿತಿಗೆ ಸಿಲುಕಿದೆ. ನೈಋತ್ಯ ಮುಂಗಾರು ಮಳೆಯಲ್ಲಿ ಶೇ.35ರಷ್ಟು ಕೊರತೆ ಉಂಟಾಗಿದೆ. 1971ರಿಂದ ಇತ್ತೀಚಿನ ವರೆಗೆ ಇದು ರಾಜ್ಯದಲ್ಲಿ ದಾಖಲಾದ ಕೆಟ್ಟ ಪರಿಸ್ಥಿತಿ ಎಂದು ಉಲ್ಲೇಖಿಸಿದ್ದಾರೆ.
ರಾಜ್ಯ ಸರಕಾರದಿಂದ 226 ತಾಲೂಕುಗಳನ್ನು ಬರಪೀಡಿತ ಎಂದು ಘೋಷಿಸಲಾಗಿದೆ. ಸುಮಾರು 47.09 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಅಂದಾಜು 46,324.50 ಕೋಟಿ ನಷ್ಟವಾಗಿದೆ. ಈ ಅಂಕಿ-ಅಂಶಗಳು ಲಕ್ಷಾಂತರ ರೈತ ಕುಟುಂಬಗಳ ಜೀವನೋಪಾಯ, ಆರ್ಥಿಕ ಭದ್ರತೆ ಮತ್ತು ಭವಿಷ್ಯದ ಮೇಲಿನ ಭೀಕರತೆಯನ್ನು ತಿಳಿಸುತ್ತದೆ. ಇಂತಹ ನಿರ್ಣಾಯಕ ಸಂದರ್ಭದಲ್ಲಿ ಸಂಕಷ್ಟಕ್ಕೆ ಸಿಲುಕಿರುವ ರೈತರಿಗೆ ಸಕಾಲದಲ್ಲಿ, ಸಮರ್ಪಕವಾಗಿ ಮತ್ತು ಅರ್ಥಪೂರ್ಣವಾಗಿ ಪರಿಹಾರ ಒದಗಿಸುವುದು ಸರಕಾರದ ಪ್ರಮುಖ ಜವಾಬ್ದಾರಿ. ಆದರೆ, ಕಾಂಗ್ರೆಸ್ ಸರ್ಕಾರದ ನಡೆ ಮತ್ತು ಕ್ರಮಗಳನ್ನು ನೋಡಿದರೆ, ರೈತರ ಬಗ್ಗೆ ಸರಕಾರಕ್ಕೆ ಬದ್ಧತೆ ಇದೆಯೇ ಹಾಗೂ ಕೈಗೊಂಡ ನಿರ್ಧಾರಗಳಿಗೆ ಹೊಣೆಗಾರಿಕೆ ಇದೆಯೇ ಎಂದು ಅನುಮಾನ ಮೂಡುತ್ತದೆ ಎಂದು ಅವರು ತಿಳಿಸಿದ್ದಾರೆ.
ಇದೀಗ ಬರ ತೀವ್ರತೆ ಇಷ್ಟಿದ್ದರೂ ಪ್ರತಿ ರೈತನಿಗೆ ಕೇವಲ 2,500 ರೂ.ಗಳ ನೆರವನ್ನು ಏಕೆ ನೀಡಲಾಗುತ್ತಿದೆ?. ಕರ್ನಾಟಕದ ರೈತರ ವಿಚಾರದಲ್ಲಿ ಹಿಂದಿನ ಸರಕಾರಗಳಂತೆಯೇ ಬದ್ಧತೆಯನ್ನು ಪ್ರದರ್ಶಿಸಲು ಕಾಂಗ್ರೆಸ್ ಸರಕಾರ ಏಕೆ ವಿಫಲವಾಗಿದೆ ಎಂಬುದನ್ನು ಸ್ಪಷ್ಟಪಡಿಸಬೇಕು. ಬರದಿಂದ ಉಂಟಾಗಿರುವ ಆರ್ಥಿಕ ಹೊರೆಯನ್ನು ಈಗಾಗಲೇ ತಮ್ಮ ಬೆಳೆ, ಆದಾಯ ಮತ್ತು ಹೂಡಿಕೆಗಳನ್ನು ಕಳೆದುಕೊಂಡಿರುವ ರೈತರ ಮೇಲೆ ಹೊರಿಸಲು ಸಾಧ್ಯವಿಲ್ಲ ಎಂದು ಅವರು ಗಮನ ಸೆಳೆದಿದ್ದಾರೆ.
ರಾಜ್ಯದ ವಾಸ್ತವಾಂಶ ನಿಮ್ಮ ಮುಂದಿಡುವುದು ಮತ್ತು ನಿಮ್ಮ ಮಧ್ಯಸ್ಥಿಕೆಗೆ ಮನವಿ ಮಾಡುವುದು ನನ್ನ ಜವಾಬ್ದಾರಿ. ನಿಮ್ಮದೇ ಪಕ್ಷದ ಸರಕಾರ ಇಲ್ಲಿ ಆಡಳಿತ ಮಾಡುತ್ತಿದೆ. ಆದುದರಿಂದ ನಿಮ್ಮದೇ ಸರಕಾರದಿಂದ ನೀವು ಉತ್ತರ ಕೇಳಬೇಕು ಮತ್ತು ನೆಪ ಹೇಳದಂತೆ ಕರ್ತವ್ಯ ನಿರ್ವಹಿಸಲು ಸೂಚಿಸಬೇಕು. ವಾಸ್ತವ ಪರಿಸ್ಥಿತಿ ಅರ್ಥ ಮಾಡಿಕೊಳ್ಳಲು ರಾಜ್ಯಕ್ಕೆ ಖುದ್ದು ಭೇಟಿ ನೀಡಬೇಕು ಎಂದು ಅವರು ಆಗ್ರಹಿಸಿದ್ದಾರೆ.
‘ಬೆಳೆ ನಷ್ಟದ ಪ್ರಮಾಣ ಮತ್ತು ಬರದ ತೀವ್ರತೆ ಇದ್ದರೂ, ಪ್ರತಿ ರೈತನಿಗೆ ಕೇವಲ 2,500 ಮಾತ್ರ ಏಕೆ ನೀಡಲಾಗುತ್ತಿದೆ?. ಹಿಂದಿನ ಬರ ಪರಿಸ್ಥಿತಿಗಳಲ್ಲಿ ನೀಡಿದಂತೆ, ರಾಜ್ಯದ ಸ್ವಂತ ಸಂಪನ್ಮೂಲಗಳಿಂದ ಹೆಚ್ಚಿನ ನೆರವನ್ನು ಒದಗಿಸಲು ಸರಕಾರ ಏಕೆ ವಿಫಲವಾಗಿದೆ?. ಬೆಳೆ ನಷ್ಟ ಮತ್ತು ರೈತರ ಸಂಕಷ್ಟದ ಕುರಿತು ಪದೇ ಪದೇ ವರದಿಗಳು ಬಂದಿದ್ದರೂ, ಹಲವು ಬರಪೀಡಿತ ತಾಲ್ಲೂಕುಗಳನ್ನು ಸರಿಯಾದ ಸಮಯದಲ್ಲಿ ಬರಪೀಡಿತ ಎಂದು ಏಕೆ ಘೋಷಿಸಲಿಲ್ಲ?’ ಎಂದು ಅವರು ಪ್ರಶ್ನಿಸಿದ್ದಾರೆ.
ಬರದಿಂದ ಬಾಧಿತರಾದ ಪ್ರತಿ ರೈತನಿಗೂ ಸಮರ್ಪಕ ಪರಿಹಾರವನ್ನು ತಕ್ಷಣ ವಿತರಿಸಲು ಸರಕಾರ ಯಾವ ಕ್ರಮಗಳನ್ನು ಕೈಗೊಳ್ಳುತ್ತಿದೆ?. ಕುಡಿಯುವ ನೀರು ಮತ್ತು ಮೇವು ಕೊರತೆ ನಿವಾರಿಸಲು, ಜಾನುವಾರುಗಳನ್ನು ರಕ್ಷಿಸಲು ಹಾಗೂ ತೀವ್ರ ಸಂಕಷ್ಟ ಎದುರಿಸುತ್ತಿರುವ ಗ್ರಾಮೀಣ ಕುಟುಂಬಗಳಿಗೆ ನೆರವು ನೀಡಲು ಯಾವ ಕ್ರಮಗಳನ್ನು ಜಾರಿಗೊಳಿಸಲಾಗುತ್ತಿದೆ?. ಬೆಳೆ ನಷ್ಟ ಅಂದಾಜಿಸಲು, ಎಲ್ಲ ಫಲಾನುಭವಿಗಳನ್ನು ಗುರುತಿಸಲು ಮತ್ತು ಯಾವುದೇ ರೈತ ಪರಿಹಾರದಿಂದ ವಂಚಿತರಾಗದಂತೆ ನೋಡಿಕೊಳ್ಳಲು ಸರ್ಕಾರವು ನಿಗದಿತ ಕಾಲಮಿತಿಯೊಂದಿಗೆ ಯಾವ ಕಾರ್ಯಯೋಜನೆಯನ್ನು ರೂಪಿಸಿದೆ? ಎಂದು ಅವರು ಕೇಳಿದ್ದಾರೆ.






