‘ಬರ’ 50 ಸಾವಿರ ರೂ.ವರೆಗೆ ಸಾಲಮನ್ನಾ ತಕ್ಷಣವೇ ಘೋಷಿಸಬೇಕು : ಸಿಎಂ ಡಿ.ಕೆ.ಶಿವಕುಮಾರ್ಗೆ ಆರ್.ಅಶೋಕ್ ಪತ್ರ

ಆರ್.ಅಶೋಕ್/ಡಿ.ಕೆ.ಶಿವಕುಮಾರ್
ಬೆಂಗಳೂರು : ‘ರಾಜ್ಯದಲ್ಲಿ ತೀವ್ರ ಸ್ವರೂಪದ ಬರ ಮತ್ತು ಪ್ರವಾಹ ಪರಿಸ್ಥಿತಿಯಿಂದ ಸಂಕಷ್ಟಕ್ಕೆ ಸಿಲುಕಿರುವ ಎಲ್ಲ ರೈತರಿಗೆ ಕನಿಷ್ಠ 50 ಸಾವಿರ ರೂ.ವರೆಗಿನ ಸಾಲಮನ್ನಾ ತಕ್ಷಣವೇ ಘೋಷಿಸಬೇಕು’ ಎಂದು ವಿಧಾನಸಭೆ ಪ್ರತಿಪಕ್ಷ ನಾಯಕ ಆರ್.ಅಶೋಕ್ ಆಗ್ರಹಿಸಿದ್ದಾರೆ.
ಬುಧವಾರ ಈ ಸಂಬಂಧ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ಗೆ ಪತ್ರ ಬರೆದಿರುವ ಆರ್.ಅಶೋಕ್, ‘ಲಭ್ಯವಿರುವ ತುರ್ತು ನಿಧಿಯಿಂದ ತಕ್ಷಣವೇ ಸಂತ್ರಸ್ತ ರೈತರಿಗೆ ಮಧ್ಯಂತರ ಪರಿಹಾರ ಬಿಡುಗಡೆ ಮಾಡಿ, ಯಾರೂ ವಂಚಿತರಾಗದಂತೆ ನೋಡಿಕೊಳ್ಳಬೇಕು. ಪ್ರತಿ ತಾಲೂಕಿನಲ್ಲಿ ಸ್ಥಳೀಯ ಶಾಸಕರ ನೇತೃತ್ವದಲ್ಲಿ ವಿಶೇಷ ಟಾಸ್ಕ್ ಫೋರ್ಸ್ ರಚಿಸಿ, ಬೆಳೆಹಾನಿ ಸಮೀಕ್ಷೆ, ಪರಿಹಾರ ವಿತರಣೆ ಮತ್ತು ಪುನರ್ವಸತಿ ಕಾರ್ಯಗಳ ಉಸ್ತುವಾರಿ ವಹಿಸಬೇಕು’ ಎಂದು ಕೋರಿದ್ದಾರೆ.
‘ಜಿಲ್ಲಾಧಿಕಾರಿಗಳ ಖಾತೆಗೆ ತುರ್ತು ಅನುದಾನ ಬಿಡುಗಡೆ ಮಾಡಿ, ಪರಿಹಾರ ಕಾರ್ಯಗಳಿಗೆ ಹೆಚ್ಚಿನ ವೇಗ ನೀಡಬೇಕು. ಬೆಳೆಹಾನಿ ಸಮೀಕ್ಷೆಯನ್ನು ಯುದ್ಧೋಪಾದಿಯಲ್ಲಿ ಪೂರ್ಣಗೊಳಿಸಿ, ರಾಜ್ಯಕ್ಕೆ ಸಿಗಬೇಕಾದ ಕೇಂದ್ರ ಸರಕಾರದ ನೆರವನ್ನು ಶೀಘ್ರವಾಗಿ ಪಡೆದುಕೊಳ್ಳಲು ವರದಿ ಸಲ್ಲಿಸಬೇಕು. ಜಿಲ್ಲಾ ಉಸ್ತುವಾರಿ ಸಚಿವರುಗಳು ತಕ್ಷಣವೇ ಪ್ರವಾಹ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಿ, ರೈತರ ಅಹವಾಲುಗಳನ್ನು ಆಲಿಸಿ ಸ್ಥಳದಲ್ಲೇ ಪರಿಹಾರ ಕ್ರಮಗಳನ್ನು ಜಾರಿಗೊಳಿಸಬೇಕು’ ಎಂದು ಅವರು ಮನವಿ ಮಾಡಿದ್ದಾರೆ.
‘ಪ್ರಕೃತಿ ವಿಕೋಪದಂತಹ ಸೂಕ್ಷ್ಮ ವಿಚಾರಗಳಲ್ಲೂ ರಾಜಕೀಯ ನಿರ್ಣಯಗಳನ್ನು ಕೈಗೊಳ್ಳುತ್ತಾ, ಕೇಂದ್ರ ಸರಕಾರದ ಮೇಲೆ ಗೂಬೆ ಕೂರಿಸಿ ಹೊಣೆಗಾರಿಕೆಯಿಂದ ನುಣುಚಿಕೊಳ್ಳುವ ಪ್ರಯತ್ನವನ್ನು ಕಾಂಗ್ರೆಸ್ ಪಕ್ಷ ಮತ್ತು ರಾಜ್ಯ ಸರಕಾರ ಕೈಬಿಡಬೇಕು. ರೈತರಿಗೆ ಈಗ ಬೇಕಾಗಿರುವುದು ಕೇವಲ ಆಶ್ವಾಸನೆಗಳಲ್ಲ, ತಕ್ಷಣದ ಪರಿಹಾರ’ ಎಂದು ಅಶೋಕ್ ಸಲಹೆ ನೀಡಿದ್ದಾರೆ.
‘ರಾಜ್ಯ ಸರಕಾರ ರಾಜಕೀಯ ಪ್ರೇರಿತ ಆರೋಪಗಳನ್ನು ಬದಿಗಿಟ್ಟು, ತನ್ನ ಆಡಳಿತಾತ್ಮಕ ಜವಾಬ್ದಾರಿಯನ್ನು ಪ್ರಾಮಾಣಿಕವಾಗಿ ನಿರ್ವಹಿಸಬೇಕು. ಸಿಎಂ ಡಿ.ಕೆ.ಶಿವಕುಮಾರ್ ತಾವು ನೀಡಿರುವ ರೈತರ ಸಾಲಮನ್ನಾ ಭರವಸೆಯನ್ನು ತಕ್ಷಣವೇ ಈಡೇರಿಸಿ ಸಂತ್ರಸ್ತ ರೈತರ ನೆರವಿಗೆ ಧಾವಿಸಬೇಕು’ ಎಂದು ಆರ್. ಅಶೋಕ್ ಆಗ್ರಹಿಸಿದ್ದಾರೆ.






