ಗೃಹಲಕ್ಷ್ಮಿ ಯೋಜನೆಯ 3 ವರ್ಷಗಳ ಸಂಭ್ರಮಕ್ಕೆ ಆರ್. ಅಶೋಕ್ ಟೀಕೆ
‘ಇದು ಸಂಭ್ರಮಿಸುವ ದಿನವಲ್ಲ, ರಾಜ್ಯದ ಮಹಿಳೆಯರಿಗೆ ಲೆಕ್ಕ ಕೊಡುವ ದಿನ’

Photo: x.com/RAshokaBJP
ಬೆಂಗಳೂರು, ಆ.30: ಗೃಹಲಕ್ಷ್ಮಿ ಯೋಜನೆಯ ಮೂರು ವರ್ಷಗಳ ಸಂಭ್ರಮಾಚರಣೆಯನ್ನು ಟೀಕಿಸಿರುವ ವಿಧಾನಸಭೆ ವಿಪಕ್ಷ ನಾಯಕ ಆರ್. ಅಶೋಕ್, ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಈ ಕುರಿತು ಸಾಮಾಜಿಕ ಜಾಲತಾಣ Xನಲ್ಲಿ ಪೋಸ್ಟ್ ಮಾಡಿರುವ ಅವರು, ಕಾಂಗ್ರೆಸ್ ಸರ್ಕಾರದ ವಿರುದ್ಧ ಹಲವು ಗಂಭೀರ ಆರೋಪಗಳನ್ನು ಮಾಡಿದ್ದಾರೆ.
‘ಯಾವ ಪುರುಷಾರ್ಥಕ್ಕಾಗಿ ಈ ಸಂಭ್ರಮ, ಸಿಎಂ ಡಿಕೆ ಶಿವಕುಮಾರ್ ಅವರೇ?’ ಮೂರು ವರ್ಷಗಳ ಹಿಂದೆ ಕಾಂಗ್ರೆಸ್ ಪಕ್ಷ ಕರ್ನಾಟಕದ ಸ್ವಾಭಿಮಾನಿ ಮಹಿಳೆಯರಿಗೆ ಕೊಟ್ಟ ಮಾತೇನು ಎಂದು ಪ್ರಶ್ನಿಸಿದ್ದಾರೆ.
"ರಾಹುಲ್ ಗಾಂಧಿ ಮತ್ತು ಪ್ರಿಯಾಂಕಾ ಗಾಂಧಿ ವೇದಿಕೆ ಏರಿ ಕರ್ನಾಟಕದ ಪ್ರತಿ ಮನೆಯ ಯಜಮಾನಿಗೆ ʼಕಟಾ ಕಟ್… ಕಟಾ ಕಟ್…ʼ ಎಂದು ಪ್ರತಿ ತಿಂಗಳು 2,000 ರೂ. ಖಾತೆಗೆ ತಲುಪುತ್ತದೆ ಬೊಗಳೆ ಬಿಟ್ಟಿದ್ದರು. ಆದರೆ ಇಂದು ಗೃಹಲಕ್ಷ್ಮಿ ಯೋಜನೆಯ ಮೂರು ವರ್ಷಗಳ ‘ಸಂಭ್ರಮ’ ಆಚರಿಸುತ್ತಿರುವ ಕಾಂಗ್ರೆಸ್ ಸರ್ಕಾರ ಮೊದಲು ಮಹಿಳೆಯರ ಬಾಕಿ ಹಣವನ್ನು ಪಾವತಿಸಬೇಕು" ಎಂದು ಆಗ್ರಹಿಸಿದ್ದಾರೆ.
“ನಿಮಗೆ ಕನಿಷ್ಠ ನಾಚಿಕೆ, ಮಾನ-ಮರ್ಯಾದೆ ಇದ್ದರೆ, ಮೊದಲು ಮಾತು ಕೊಟ್ಟಂತೆ ಮಹಿಳೆಯರ ಬಾಕಿ ಹಣ ಕೊಡಿ. ಆಮೇಲೆ ಜಾಹೀರಾತು ಕೊಟ್ಟು ಸಂಭ್ರಮಿಸಿ!” ಎಂದು ಕುಟುಕಿದ್ದಾರೆ.
ಗೃಹಲಕ್ಷ್ಮಿ ಯೋಜನೆಯ ಹೆಸರಿನಲ್ಲಿ ಸರ್ಕಾರದ ಸಾಧನೆಯಾದರೂ ಏನು ಎಂದು ಪ್ರಶ್ನಿಸಿರುವ ಅವರು, CAG ಪರಿಶೀಲನೆಯಲ್ಲಿ 225 ಕೋಟಿ ರೂ.ಗೂ ಹೆಚ್ಚು ಅಕ್ರಮ ಪತ್ತೆಯಾಗಿದೆ. 2.88 ಲಕ್ಷ ಮೃತ ಫಲಾನುಭವಿಗಳ ಹೆಸರಿನಲ್ಲಿ ಹಣ ಪಾವತಿಸಲಾಗಿದೆ, ಸತ್ತವರ ಖಾತೆಗೆ 115 ಕೋಟಿ ರೂ. ಜಮೆಯಾಗಿದೆ ಎಂದು ಸರ್ಕಾರವೇ ಒಪ್ಪಿಕೊಂಡಿದೆ ಹಾಗೂ ಖಾತೆ ಸಂಖ್ಯೆಯೇ ಇಲ್ಲದೆ 23,262 ಪಾವತಿಗಳ ಮೂಲಕ 46.52 ಕೋಟಿ ರೂ. ಪಾವತಿಸಲಾಗಿದೆ ಎಂದು ಅವರು ಆರೋಪಿಸಿದ್ದಾರೆ.
ಅಲ್ಲದೆ, ಒಂದೇ ಖಾತೆಗೆ 10 ಲಕ್ಷಕ್ಕೂ ಹೆಚ್ಚು ಫಲಾನುಭವಿಗಳನ್ನು ಲಿಂಕ್ ಮಾಡಿ ಅಕ್ರಮ ಎಸಗಲಾಗಿದೆ ಎಂದು ಆರೋಪಿಸಿರುವ ಆರ್. ಅಶೋಕ್, 2025ರ ಫೆಬ್ರವರಿ ಮತ್ತು ಮಾರ್ಚ್ ತಿಂಗಳ ಎರಡು ಕಂತುಗಳ ಸುಮಾರು 5,000 ಕೋಟಿ ರೂ. ಹಣವನ್ನು ಮಹಿಳೆಯರಿಗೆ ನೀಡದೆ ವಂಚಿಸಲಾಗಿದೆ ಎಂದು ಹೇಳಿದ್ದಾರೆ.
“ಇದು ಗೃಹಲಕ್ಷ್ಮಿಯ ಯಶೋಗಾಥೆಯಲ್ಲ, ‘ಕಾಂಗ್ರೆಸ್ ಸರ್ಕಾರದ ಅವ್ಯವಹಾರ, ಅಕ್ರಮ ಮತ್ತು ಲೂಟಿಯ ಯಶೋಗಾಥೆ’!” ಎಂದು ಅವರು ಟೀಕಿಸಿದ್ದಾರೆ.
ಹಣ ತಲುಪಬೇಕಾದ ಅರ್ಹ ಮಹಿಳೆಯರ ಖಾತೆ ಖಾಲಿಯಾಗಿದ್ದು, ಸತ್ತವರ ಖಾತೆಗೆ ಕೋಟಿ ಕೋಟಿ ಜಮೆಯಾಗಿದೆ. ಖಾತೆ ಸಂಖ್ಯೆಯೇ ಇಲ್ಲದೆ ಕೋಟ್ಯಂತರ ರೂಪಾಯಿ ಪಾವತಿಸಲಾಗಿದೆ ಎಂದು ಆರೋಪಿಸಿರುವ ಅವರು, ಇದೀಗ ಅಕ್ರಮ ಮುಚ್ಚಿಕೊಳ್ಳಲು ‘ಪರಿಷ್ಕರಣೆ’ ನೆಪ ಹೇಳಿ ಮಹಿಳೆಯರನ್ನು ಕಚೇರಿಯಿಂದ ಕಚೇರಿಗೆ ಅಲೆದಾಡಿಸಿ ಕಣ್ಣೀರು ಹಾಕಿಸಲಾಗುತ್ತಿದೆ ಎಂದು ಹೇಳಿದ್ದಾರೆ.
“ಸಿಎಂ ಡಿ.ಕೆ ಶಿವಕುಮಾರ್ ಅವರೇ, ಪ್ರಚಾರಕ್ಕಾಗಿ ಪತ್ರಿಕಾ ಜಾಹೀರಾತಿಗೆ ತೆರಿಗೆದಾರರ ಸಾವಿರಾರು ಕೋಟಿ ಸುರಿಯುವ ನಿಮ್ಮ ಸರ್ಕಾರಕ್ಕೆ, ಮಹಿಳೆಯರ ಖಾತೆಗೆ 2,000 ರೂ.ಹಾಕಲು ಹಣವಿಲ್ಲವೇ?” ಎಂದು ಆರ್. ಅಶೋಕ್ ಪ್ರಶ್ನಿಸಿದ್ದಾರೆ.
ಪಿಂಕ್ ಲೈಟ್ ಹಾಕಿ, ಫ್ರಂಟ್ ಪೇಜ್ ಜಾಹೀರಾತು ನೀಡಿ ಸಂಭ್ರಮಿಸಿದ ತಕ್ಷಣ ಸರ್ಕಾರದ ವೈಫಲ್ಯ ಮತ್ತು ಹಗರಣಗಳು ಮುಚ್ಚಿಹೋಗುವುದಿಲ್ಲ. ಇದು ಸಂಭ್ರಮಿಸುವ ದಿನವಲ್ಲ, ರಾಜ್ಯದ ಮಹಿಳೆಯರಿಗೆ ಲೆಕ್ಕ ಕೊಡುವ ದಿನ ಎಂದು ಅವರು ಹೇಳಿದ್ದಾರೆ.
2025ರ ಫೆಬ್ರವರಿ ಮತ್ತು ಮಾರ್ಚ್ ತಿಂಗಳ 5,000 ಕೋಟಿ ರೂ. ಬಾಕಿ ಹಣವನ್ನು ಪ್ರತಿಯೊಬ್ಬ ಮಹಿಳೆಯ ಖಾತೆಗೆ ತಕ್ಷಣ ಜಮೆ ಮಾಡಬೇಕು. CAG ಎತ್ತಿರುವ 225 ರೂ. ಕೋಟಿ ಅಕ್ರಮ ಹಾಗೂ ಮೃತರ ಖಾತೆಗೆ ಹೋದ ಹಣದ ಬಗ್ಗೆ ಹೈಕೋರ್ಟ್ ನ್ಯಾಯಾಧೀಶರಿಂದ ತನಿಖೆ ನಡೆಸಬೇಕು. ಗ್ಯಾರಂಟಿ ಹೆಸರಿನಲ್ಲಿ ಲೂಟಿ ಹೊಡೆದ ಕಮಿಷನ್ ಏಜೆಂಟ್ಗಳನ್ನು ಜೈಲಿಗಟ್ಟಬೇಕು ಎಂದು ಆರ್. ಅಶೋಕ್ ಆಗ್ರಹಿಸಿದ್ದಾರೆ.
“ಮಾತು ಕೊಟ್ಟು ಮಹಿಳೆಯರಿಗೆ ಮೋಸ ಮಾಡುವುದು ಗ್ಯಾರಂಟಿ ಅಲ್ಲ, ಸಿಎಂ ಡಿಕೆಶಿ ಅವರೇ, ಅದು ಕರ್ನಾಟಕದ ಸ್ವಾಭಿಮಾನಿ ಮಹಿಳೆಯರಿಗೆ ಕಾಂಗ್ರೆಸ್ ಪಕ್ಷ ಮಾಡಿರುವ ನಂಬಿಕೆ ದ್ರೋಹ ಮತ್ತು ವಂಚನೆ. ಗ್ಯಾರೆಂಟಿ ಹೆಸರಿನಲ್ಲಿ ಮಾಡಿರುವ ಈ ಲೂಟಿಯನ್ನ ಕರ್ನಾಟಕದ ಮಹಿಳೆಯರು ಎಂದಿಗೂ ಕ್ಷಮಿಸುವುದಿಲ್ಲ” ಎಂದು ಅವರು ಎಕ್ಸ್ ಪೋಸ್ಟ್ನಲ್ಲಿ ಹೇಳಿದ್ದಾರೆ.






