‘ರಾಜ್ಯ ಸರಕಾರದ ಸಾಧನೆ ಕುರಿತ ಸಂವಾದಕ್ಕೆ ಬನ್ನಿ’ : ಸಿಎಂಗೆ ರಾಜ್ಯ ಬಿಜೆಪಿ ಉಸ್ತುವಾರಿ ರಾಧಾಮೋಹನ್ ದಾಸ್ ಸವಾಲು

ಬೆಂಗಳೂರು : ಕಾಂಗ್ರೆಸ್ ಸರಕಾರವು ತನ್ನ ಎರಡು ವರ್ಷಗಳ ಸಾಧನೆಗೆ ಇತ್ತೀಚೆಗೆ ಸಮಾವೇಶ ಮಾಡಿತ್ತು. ಇನ್ನೊಂದೆಡೆ ಕಾಂಗ್ರೆಸ್ ಸರಕಾರದ ವಿಫಲತೆಗಳ ಕುರಿತು ಬಿಜೆಪಿಯು ಪತ್ರಿಕೆಗಳ ಮೂಲಕ ಜಾಹೀರಾತು ನೀಡಿ ಜನರಿಗೆ ಮಾಹಿತಿ ಕೊಟ್ಟಿತ್ತು. ನಮ್ಮ ಆರೋಪಗಳು ಸತ್ಯಕ್ಕೆ ದೂರವಾಗಿದ್ದರೆ, ಮುಖ್ಯಮಂತ್ರಿ ಸಿದ್ದರಾಮಯ್ಯ, ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಜೊತೆ ಸಂವಾದಕ್ಕೆ ಬರಲಿ ಎಂದು ರಾಜ್ಯ ಬಿಜೆಪಿ ಉಸ್ತುವಾರಿ ಡಾ.ರಾಧಾಮೋಹನ್ ದಾಸ್ ಸವಾಲು ಹಾಕಿದರು.
ಬುಧವಾರ ಮಲ್ಲೇಶ್ವರದಲ್ಲಿರುವ ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ನಾವು ಚಾರ್ಜ್‍ಶೀಟ್ ಬಿಡುಗಡೆ ಮಾಡಿದ್ದೆವು. ನಾವು ಸತ್ಯಾಂಶಗಳನ್ನು ಜನರಿಗೆ ತಿಳಿಸಿದ್ದರಿಂದ ಕಾಂಗ್ರೆಸ್ ಪಕ್ಷವು ಆತಂಕಗೊಂಡಿತ್ತು. ಸರಕಾರ ಈ ಬಗ್ಗೆ ಜನರಿಗೆ ಉತ್ತರ ಕೊಡಬೇಕಿತ್ತು. ಪ್ರಜಾಸತ್ತೆಯಲ್ಲಿ ಆರೋಪ-ಪ್ರತ್ಯಾರೋಪವು ಸಾಮಾನ್ಯ ಪ್ರಕ್ರಿಯೆ. ಆದರೆ, ಈ ಸರಕಾರ ನಮ್ಮ ವಿರುದ್ಧ ಮಾನನಷ್ಟ ಮೊಕದ್ದಮೆ ಹಾಕಿದೆ ಎಂದು ಟೀಕಿಸಿದರು.
ರಾಜ್ಯದಲ್ಲಿ ಬಿಜೆಪಿ ಕಡೆ ಜನರ ಒಲವು ಹೆಚ್ಚಾಗಿದ್ದು, ಈಗ ಚುನಾವಣೆ ನಡೆದರೆ ಬಿಜೆಪಿ 150ರಿಂದ 155 ಸೀಟುಗಳನ್ನು ಪಡೆಯುವ ಸಾಧ್ಯತೆ ಇದೆ ಎಂಬುದಾಗಿ ಸಮೀಕ್ಷೆಗಳು ತಿಳಿಸಿವೆ. ಕಾಂಗ್ರೆಸ್ ಆಡಳಿತದಲ್ಲಿ ಭ್ರಷ್ಟಾಚಾರ ತೀವ್ರವಾಗಿದೆ. ಮುಸ್ಲಿಂ ತುಷ್ಟೀಕರಣ ಗರಿಷ್ಠ ಪ್ರಮಾಣಕ್ಕೆ ತಲುಪಿದೆ. ಇದೇ ರೀತಿ ಮುಂದುವರೆದಲ್ಲಿ ಕಾಂಗ್ರೆಸ್ ಪಕ್ಷವು ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಕನಿಷ್ಠ ಸೀಟುಗಳಿಗೆ ಕುಸಿಯಬಹುದು ಎಂದು ರಾಧಾಮೋಹನ್ ದಾಸ್ ತಿಳಿಸಿದರು.
ಬಿಜೆಪಿಯಿಂದ ಶಾಸಕರಾದ ಎಸ್.ಟಿ.ಸೋಮಶೇಖರ್ ಹಾಗೂ ಶಿವರಾಮ್ ಹೆಬ್ಬಾರ್ ಅವರನ್ನು ಉಚ್ಛಾಟನೆ ಮಾಡಿರುವ ಕುರಿತು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ಸೋಮಶೇಖರ್ ಮತ್ತು ಶಿವರಾಮ ಹೆಬ್ಬಾರ್ ಅವರಿಗೆ ಸುಧಾರಣೆಗೆ ಅವಕಾಶ ನೀಡಿದ್ದೇವೆ. ಇಂಥ ಕ್ರಮಗಳಿಂದ ಬಿಜೆಪಿ ಇನ್ನಷ್ಟು ದೃಢ-ಸಶಕ್ತವಾಗಿ ಹೊರಹೊಮ್ಮುತ್ತದೆ ಎಂದು ಹೇಳಿದರು.
ಕೇಂದ್ರ ಸರಕಾರವು ಶೀಘ್ರವೇ 11 ವರ್ಷಗಳನ್ನು ಪೂರೈಸಲಿದೆ. ನಾವು ಮಾಡಿದ ಸಾಧನೆಗಳ ಪಟ್ಟಿ ದೊಡ್ಡದಿದೆ. ಅದನ್ನು ಬರೆದು ಸುಸ್ತಾಗುವಷ್ಟು ಸಾಧನೆಗಳನ್ನು ತಿಳಿಸುತ್ತೇವೆ. ಕಾಗದದ ಹಾಳೆಗಳನ್ನು ಖಾಲಿ ಇಟ್ಟುಕೊಳ್ಳಿ, ಜೂ.9ರಂದು ವೃತ್ತಪತ್ರಿಕೆಯನ್ನೂ ಖಾಲಿ ಇಟ್ಟುಕೊಳ್ಳಿ ಎಂದು ಅವರು ಹೇಳಿದರು.
ಕಾಂಗ್ರೆಸ್ ಪಕ್ಷದ ಒಳಜಗಳದಿಂದ ಯಾವುದೇ ಕ್ಷಣದಲ್ಲಿ ಸರಕಾರ ಬೀಳಬಹುದು. ಸಿದ್ದರಾಮಯ್ಯ ಸಿಎಂ ಆಗಿ ಉಳಿಯುತ್ತಾರಾ? ಅವರು ಪದತ್ಯಾಗ ಮಾಡಿದರೆ, ಪರಮೇಶ್ವರ್, ಶಿವಕುಮಾರ್, ಪ್ರಿಯಾಂಕ್ ಖರ್ಗೆ ಪೈಕಿ ಯಾರ ನೇತೃತ್ವ ಎಂಬುದನ್ನು ತಿಳಿಯಲು ಜನತೆ ಬಯಸುತ್ತಿದ್ದಾರೆ ಎಂದು ಪ್ರಶ್ನೆಯೊಂದಕ್ಕೆ ರಾಧಾಮೋಹನ್ ದಾಸ್ ಉತ್ತರಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ, ರಾಜ್ಯಸಭಾ ಸದಸ್ಯ ಲೆಹರ್ ಸಿಂಗ್ ಸಿರೋಯಾ, ಶಾಸಕರಾದ ಹರೀಶ್ ಪೂಂಜಾ, ಮಾನಪ್ಪ ಡಿ.ವಜ್ಜಲ್, ಡಾ.ಶೈಲೇಂದ್ರ ಬೆಲ್ದಾಳೆ, ಡಾ.ಅವಿನಾಶ್ ಜಾಧವ್, ಡಾ.ಚಂದ್ರು ಲಮಾಣಿ, ಕೃಷ್ಣ ನಾಯ್ಕ್ ಹಾಗೂ ಪಕ್ಷದ ಮುಖಂಡರು ಭಾಗವಹಿಸಿದ್ದರು.







