ರಾಹುಲ್ ಗಾಂಧಿ ಪ್ರತಿಭಟನೆ : ಬೆಂಗಳೂರಿನಲ್ಲಿ ವಾಹನ ಸಂಚಾರ ಮಾರ್ಪಾಡು

ರಾಹುಲ್ ಗಾಂಧಿ (PTI)
ಬೆಂಗಳೂರು, ಆ.7: ಮತಗಳ್ಳತನ ಆರೋಪದ ಕುರಿತು ಲೋಕಸಭೆ ವಿಪಕ್ಷ ನಾಯಕ ರಾಹುಲ್ ಗಾಂಧಿ ನಾಳೆ(ಆ.8) ನಗರದ ಫ್ರೀಡಂ ಪಾರ್ಕ್ನಲ್ಲಿ ಹಮ್ಮಿಕೊಂಡಿರುವ ಪ್ರತಿಭಟನೆಯಲ್ಲಿ ಪಾಲ್ಗೊಳ್ಳಲಿದ್ದು, ಈ ಸಂಬಂಧ ಪ್ರಯಾಣಿಕರಿಗೆ ಸಂಚಾರ ದಟ್ಟಣೆಯ ಬಿಸಿ ತಪ್ಪಿಸುವ ನಿಟ್ಟಿನಲ್ಲಿ ನಗರ ಪೊಲೀಸರು, ಕೆಲವು ರಸ್ತೆಗಳಲ್ಲಿ ವಾಹನ ಸಂಚಾರಕ್ಕೆ ನಿರ್ಬಂಧಿಸಿ, ಪರ್ಯಾಯ ಮಾರ್ಗಗಳನ್ನು ಸೂಚಿಸಿದ್ದಾರೆ.
ಬೆಂಗಳೂರು ನಗರದ ಶಾಂತಲಾ ಜಂಕ್ಷನ್ ಮತ್ತು ಖೋಡ್ ಸರ್ಕಲ್ನಿಂದ ಆನಂದ್ ರಾವ್ ಮೇಲ್ಸೇತುವೆ, ಒಲ್ಡ್ ಜೆಡಿಎಸ್ ರಸ್ತೆ, ಶೇಷಾದ್ರಿಪುರ ರಸ್ತೆಯಲ್ಲಿ ಸಂಚಾರ ನಿರ್ಬಂದ ಗೊಳಿಸಲಾಗಿದೆ. ಇವುಗಳ ಬದಲು ಲುಲು ಮಾಲ್, ರಾಜೀವ್ ಗಾಂಧಿ ಸರ್ಕಲ್, ಮಂತ್ರಿ ಮಾಲ್, ಸ್ವಸ್ತಿಕ್ ಸರ್ಕಲ್, ಶೇಷಾದ್ರಿಪುರಂ, ನೆಹರು ಸರ್ಕರ್, ರೇಸ್ ಕೋರ್ಸ್ ಮೇಲ್ಸೇತುವೆ ಕಡೆಯಿಂದ ಪ್ರಯಾಣಿಸಬಹುದು.
ಮೈಸೂರು ಬ್ಯಾಂಕ್ ಕಡೆಯಿಂದ ಚಾಲುಕ್ಯ ಕಡೆಗೆ ಸಂಚಾರ ನಿರ್ಬಂಧಿಸಲಾಗಿದೆ. ಪರ್ಯಾಯವಾಗಿ ಕೆ.ಜಿ.ರಸ್ತೆ, ಮೈಸೂರು ಬ್ಯಾಂಕ್ ಜಂಕ್ಷನ್, ಸಾಗರ್ ಜಂಕ್ಷನ್, ರಾಜೀವ್ ಗಾಂಧಿ ಸರ್ಕಲ್, ರೇಸ್ ಕೋರ್ಸ್ ಮೇಲ್ಸೇತುವೆ ಮೂಲಕ ಹೋಗಬಹುದು. ಚಾಲುಕ್ಯದಿಂದ ಮೈಸೂರು ಬ್ಯಾಂಕ್ ಕಡೆಗೆ ಸಂಚಾರ ನಿಷೇಧಿಸಲಾಗಿದ್ದು, ಚಾಲುಕ್ಯ ಸರ್ಕಲ್, ರಾಜಭವನ ರಸ್ತೆ, ಇನ್ಫೆಂಟ್ರಿ ರಸ್ತೆ, ಇಂಡಿಯನ್ ಎಕ್ಸ್ ಪ್ರೆಸ್ನಿಂದ ಸಂಚರಿಸಲು ಸೂಚಿಸಲಾಗಿದೆ.
ಕಾಳಿದಾಸ ರಸ್ತೆ, ಕನಕದಾಸ ಜಂಕ್ಷನ್ ಕಡೆಯಿಂದ ಫ್ರೀಡಂಪಾರ್ಕ್ ಕಡೆಗೆ ಸಂಚರಿಸುವ ವಾಹನಗಳು ಕನಕದಾಸ ಜಂಕ್ಷನ್ನಿಂದ ಬಲ ತಿರುವು ಪಡೆದು ಸಾಗರ ಜಂಕ್ಷನ್ ಕಡೆಗೆ ಸಂಚರಿಸಬಹುದು. ಮೌರ್ಯ ಸುಬ್ಬಣ್ಣ ಜಂಕ್ಷನ್ನಿಂದ ಫ್ರೀಡಂಪಾರ್ಕ್ಗೆ ತೆರಳುವವರು ಸುಬ್ಬಣ್ಣ ಜಂಕ್ಷನ್ನಿಂದ ಬಲ ತಿರುವು ಆನಂದ್ ರಾವ್ ಸರ್ಕಲ್ ಕಡೆಗೆ ಸಂಚರಿಸಬಹುದು ಎಂದು ಸಂಚಾರ ಪೊಲೀಸರು ಮಾಹಿತಿ ನೀಡಿದ್ದಾರೆ.
ಪೊಲೀಸ್ ಭದ್ರತೆ: ಬೆಂಗಳೂರಿನ ಹೃದಯಭಾಗವಾದ ಫ್ರೀಡಂ ಪಾರ್ಕ್ನಲ್ಲಿ ರಾಹುಲ್ ಗಾಂಧಿ ನೇತೃತ್ವದಲ್ಲಿ ನಡೆಯುತ್ತಿರುವ ಬೃಹತ್ ಪ್ರತಿಭಟನಾ ಸಮಾವೇಶಕ್ಕೆ ರಾಜ್ಯದ ವಿವಿಧ ಜಿಲ್ಲೆಗಳಿಂದ ಸಾವಿರಾರು ಕಾರ್ಯಕರ್ತರು ಆಗಮಿಸುವ ನಿರೀಕ್ಷೆಯಿದ್ದು, ಮುಂಜಾಗ್ರತ ಕ್ರಮವಾಗಿ ಹೆಚ್ಚಿನ ಸಂಖ್ಯೆಯಲ್ಲಿ ಪೊಲೀಸರನ್ನು ಭದ್ರತೆಗೆ ನಿಯೋಜಿಸಲಾಗಿದೆ.
ಭದ್ರತೆಗೆ 12 ಡಿಸಿಪಿ, 45 ಎಸಿಪಿ, 128 ಮಂದಿ ಇನ್ಸ್ಪೆಕ್ಟರ್ಗಳು, 421 ಪಿಎಸ್ಸೈ, 591 ಮಂದಿ ಮಹಿಳಾ ಸಿಬ್ಬಂದಿ ಸೇರಿದಂತೆ 14 ಪುರುಷ ಕೆಎಸ್ಆರ್ಪಿ ಪಡೆ, 2 ಮಹಿಳಾ ತುಕಡಿಗಳು ಒಳಗೊಂಡಂತೆ ಒಟ್ಟು 4,459 ಮಂದಿ ಪೊಲೀಸರನ್ನು ನಿಯೋಜಿಸಲಾಗಿದೆ ಎಂದು ಪೊಲೀಸ್ ಇಲಾಖೆ ತಿಳಿಸಿದೆ.







