ನಾನು ಸಂಸತ್ತಿನಲ್ಲಿ ಸಂವಿಧಾನವನ್ನು ಹಿಡಿದು ಪ್ರಮಾಣ ಮಾಡಿದ್ದೇನೆ: ಪ್ರಮಾಣ ಪತ್ರ ಕೇಳಿದ ಚುನಾವಣಾ ಆಯೋಗಕ್ಕೆ ರಾಹುಲ್ ಗಾಂಧಿ ತಿರುಗೇಟು

ರಾಹುಲ್ ಗಾಂಧಿ (Photo: PTI)
ಬೆಂಗಳೂರು: ಕೇಂದ್ರ ಚುನಾವಣಾ ಆಯೋಗವು ಇಲೆಕ್ಟ್ರಾನಿಕ್ ರೂಪದಲ್ಲಿ ಮತದಾರರ ಪಟ್ಟಿಯನ್ನು ಹಾಗೂ ಮತಗಟ್ಟೆಗಳಲ್ಲಿ ನಡೆಸಿರುವ ವಿಡಿಯೋ ಚಿತ್ರೀಕರಣವನ್ನು ನಮಗೆ ನೀಡಬೇಕು. ಇಲ್ಲದಿದ್ದರೆ, ನೀವು ದೊಡ್ಡ ಅಪರಾಧವನ್ನು ಮುಚ್ಚಿಡುವಂತೆ ಆಗುತ್ತದೆ ಎಂದು ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ವಾಗ್ದಾಳಿ ನಡೆಸಿದರು.
ಶುಕ್ರವಾರ ನಗರದ ಸ್ವಾತಂತ್ರ್ಯ ಉದ್ಯಾನದಲ್ಲಿ ಲೋಕಸಭಾ ಚುನಾವಣೆಯಲ್ಲಿ ನಡೆದ ಚುನಾವಣಾ ಅಕ್ರಮ ಮತ್ತು ಮತಗಳ್ಳತನ ವಿರೋಧಿಸಿ ಕಾಂಗ್ರೆಸ್ ಪಕ್ಷದ ವತಿಯಿಂದ ಆಯೋಜಿಸಿದ್ದ ‘ನಮ್ಮ ಮತ, ನಮ್ಮ ಹಕ್ಕು, ನಮ್ಮ ಹೋರಾಟ’ ಬೃಹತ್ ಪ್ರತಿಭಟನಾ ಸಮಾವೇಶವನ್ನುದ್ದೇಶಿಸಿ ಅವರು ಮಾತನಾಡಿದರು.
ಲೋಕಸಭಾ ಚುನಾವಣೆಯಲ್ಲಿ ಇಂಡಿಯಾ ಮೈತ್ರಿಕೂಟ ಮಹಾರಾಷ್ಟ್ರದಲ್ಲಿ ಹೆಚ್ಚಿನ ಸ್ಥಾನಗಳಲ್ಲಿ ಗೆಲುವು ಸಾಧಿಸಿತು. ನಾಲ್ಕು ತಿಂಗಳ ಬಳಿಕ ಮಹಾರಾಷ್ಟ್ರದ ವಿಧಾನಸಭೆಗೆ ನಡೆದ ಚುನಾವಣೆಯಲ್ಲಿ ಆಶ್ಚರ್ಯಕರವಾಗಿ ಬಿಜೆಪಿ ಗೆಲುವು ಸಾಧಿಸಿತು. ಈ ಚುನಾವಣೆಯಲ್ಲಿ ಒಂದು ಕೋಟಿ ಹೊಸ ಮತದಾರರು ಮತ ಚಲಾಯಿಸಿದ್ದರು ಎಂದು ಅವರು ಆರೋಪಿಸಿದ್ದಾರೆ.
ನಮ್ಮ ಒಕ್ಕೂಟಕ್ಕೆ ಸಿಕ್ಕಿದ್ದ ಮತಗಳ ಸಂಖ್ಯೆ ಇಳಿಕೆಯಾಗಿರಲಿಲ್ಲ. ಆದರೆ, ಹೊಸ ಮತದಾರರೆಲ್ಲ ಬಿಜೆಪಿಗೆ ಮತ ಹಾಕಿರುವುದು ಗಮನಕ್ಕೆ ಬಂತು. ಕರ್ನಾಟಕದಲ್ಲಿ 15-16 ಲೋಕಸಭಾ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಗೆಲುವು ನಿಶ್ಚಿತವಾಗಿತ್ತು. ಆದರೆ, ನಾವು 9 ಸ್ಥಾನಗಳಲ್ಲಿ ಮಾತ್ರ ಗೆಲ್ಲುವಂತಾಯಿತು ಎಂದು ರಾಹುಲ್ ಗಾಂಧಿ ಹೇಳಿದರು.
ನಾವು ಸೋತಿದ್ದೇವಾ? ಎಂಬ ಪ್ರಶ್ನೆ ಕಾಡಿತು. ಚುನಾವಣಾ ಆಯೋಗಕ್ಕೆ ನಾವು ಮತದಾರರ ಪಟ್ಟಿ ಕೊಡುವಂತೆ ಕೇಳಿದರೆ ಕೊಟ್ಟಿಲ್ಲ. ವಿಡಿಯೋ ಚಿತ್ರೀಕರಣ ಮಾಡಿರುವುದು ಕೊಡಿ ಎಂದರೆ ಅದನ್ನು ಕೊಟ್ಟಿಲ್ಲ. ಬಳಿಕ 45 ದಿನಗಳ ನಂತರ ವಿಡಿಯೋ ಚಿತ್ರೀಕರಣ ನಾಶ ಮಾಡುವಂತೆ ಕಾನೂನು ಬದಲಾಯಿಸಿಕೊಂಡಿದ್ದಾರೆ ಎಂದು ರಾಹುಲ್ ಗಾಂಧಿ ಟೀಕಿಸಿದರು.
ಬೆಂಗಳೂರು ಕೇಂದ್ರ ಲೋಕಸಭಾ ಕ್ಷೇತ್ರದ ಮಹದೇವಪುರ ವಿಧಾನಸಭಾ ಕ್ಷೇತ್ರವನ್ನು ಆಯ್ಕೆ ಮಾಡಿಕೊಂಡು ನಾವು ವಿಶ್ಲೇಷಣೆ ಮಾಡಿದೆವು. ಚುನಾವಣಾ ಆಯೋಗ ಹಾಗೂ ಬಿಜೆಪಿ ಸೇರಿ ನಿಮ್ಮಿಂದ ಒಂದು ಲೋಕಸಭಾ ಕ್ಷೇತ್ರವನ್ನು ಕಸಿದಿದ್ದಾರೆ. ಈ ಬಗ್ಗೆ ನಿನ್ನೆ ನನ್ನ ಪತ್ರಿಕಾಗೋಷ್ಠಿಯಲ್ಲಿ ಎಲ್ಲ ವಿವರಗಳನ್ನು ನೀಡಿದ್ದೇನೆ ಎಂದು ಅವರು ತಿಳಿಸಿದರು.
ಮಹದೇವಪುರದಲ್ಲಿ 6.50 ಲಕ್ಷ ಮತದಾರರು ಇದ್ದಾರೆ. ಅದರಲ್ಲಿ 1,00,250 ಮತಗಳನ್ನು ಕಳವು ಮಾಡಲಾಗಿದೆ. ಪ್ರತಿ ಆರು ಮತಗಳಲ್ಲಿ ಒಂದು ಮತವನ್ನು ಕಳವು ಮಾಡಿದ್ದಾರೆ. ನಕಲಿ ಮತದಾರರ ಪಟ್ಟಿಯಲ್ಲಿರುವ ಒಬ್ಬ ವ್ಯಕ್ತಿ, ಬೆಂಗಳೂರು, ಲಕ್ನೋ, ವಾರಣಾಸಿಯಲ್ಲೂ ಮತದಾನ ಮಾಡಿರುವುದು ಕಂಡು ಬಂದಿದೆ ಎಂದು ರಾಹುಲ್ ಗಾಂಧಿ ಹೇಳಿದರು.
ಚುನಾವಣಾ ಆಯೋಗ ಇಡೀ ದೇಶದ ಇಲೆಕ್ಟ್ರಾನಿಕ್ ಮತದಾರರ ಪಟ್ಟಿ, ವಿಡಿಯೋ ಚಿತ್ರೀಕರಣ ಕೊಟ್ಟರೆ, ನಾವು ಮತಗಳ್ಳತನ ಆಗಿರುವುದನ್ನು ಸಾಬೀತು ಮಾಡುತ್ತೇವೆ. ಇದು ಕೇವಲ ಕರ್ನಾಟಕದಲ್ಲಿ ಮಾತ್ರ ನಡೆದಿಲ್ಲ. ದೇಶದ ಇತರ ಭಾಗಗಳಲ್ಲೂ ನಡೆದಿದೆ ಎಂದು ರಾಹುಲ್ ಗಾಂಧಿ ಆರೋಪಿಸಿದರು.
ಸಂವಿಧಾನದ ಮೂಲ ಆಶಯ ಒಬ್ಬ ವ್ಯಕ್ತಿ, ಒಂದು ಮತ. ಅದರ ಮೇಲೆ ಚುನಾವಣಾ ಆಯೋಗ ಹಾಗೂ ಅವರ ಅಧಿಕಾರಿಗಳು ದಾಳಿ ಮಾಡುತ್ತಿದ್ದಾರೆ. ನೀವು ಸಂವಿಧಾನದ ಮೇಲೆ ದಾಳಿ ಮಾಡಿ ಸುರಕ್ಷಿತವಾಗಿರುತ್ತೇವೆ ಎಂದು ಭಾವಿಸಿದ್ದರೆ, ಈ ಬಗ್ಗೆ ಮತ್ತೊಮ್ಮೆ ಆಲೋಚನೆ ಮಾಡಿ. ನಿಮಗೆ ತಕ್ಕ ಪಾಠ ಕಲಿಸುವ ಸಮಯ ಬರುತ್ತದೆ ಎಂದು ಅವರು ಎಚ್ಚರಿಕೆ ನೀಡಿದರು.
ನರೇಂದ್ರ ಮೋದಿ ಕೇವಲ 25 ಸ್ಥಾನಗಳ ಅಂತರದಲ್ಲಿ ಪ್ರಧಾನಿಯಾಗಿದ್ದಾರೆ. ಒಂದು ಕ್ಷೇತ್ರದಲ್ಲಿನ ಮತಗಳ್ಳತನ ಮಾತ್ರ ಈಗ ತೋರಿಸಿದ್ದೇವೆ. 25 ಕ್ಷೇತ್ರಗಳಲ್ಲಿ 34 ಸಾವಿರಕ್ಕಿಂತ ಕಡಿಮೆ ಅಂತರದಿಂದ ಬಿಜೆಪಿ ಗೆದ್ದಿದೆ. ಮತಗಳ್ಳತನ ಮಾಡಿ ಮೋದಿ ಪ್ರಧಾನಿಯಾಗಿದ್ದಾರೆ ಎಂದು ರಾಹುಲ್ ಗಾಂಧಿ ದೂರಿದರು.
ಚುನಾವಣಾ ಆಯೋಗ ನನ್ನ ಬಳಿ ಪ್ರಮಾಣ ಪತ್ರ ಕೇಳುತ್ತಿದೆ. ನಾನು ಸಂಸತ್ತಿನಲ್ಲಿ ಸಂವಿಧಾನವನ್ನು ಕೈಯಲ್ಲಿ ಹಿಡಿದು ಪ್ರಮಾಣ ಮಾಡಿದ್ದೇನೆ. ಇವತ್ತು ದೇಶದ ಜನ ನಮ್ಮ ಮಾಹಿತಿ ಪಡೆದು ಚುನಾವಣಾ ಆಯೋಗದ ವೆಬ್ಸೈಟ್ನಲ್ಲಿ ಪ್ರಶ್ನೆ ಮಾಡುತ್ತಿದ್ದಾರೆ. ಆದರೆ, ಚುನಾವಣಾ ಆಯೋಗ ಮಧ್ಯಪ್ರದೇಶ, ರಾಜಸ್ತಾನ, ಬಿಹಾರದ ವೆಬ್ಸೈಟ್ ಬಂದ್ ಮಾಡಿದೆ. ಅವರ ಅಕ್ರಮ ಬಯಲು ಆಗುತ್ತದೆ ಎಂಬ ಭಯ ಕಾಡುತ್ತಿದೆ ಎಂದು ವಾಗ್ದಾಳಿ ನಡೆಸಿದರು.
ಚುನಾವಣಾ ಆಯೋಗ ಇಲೆಕ್ಟ್ರಾನಿಕ್ ಮತದಾರರ ಪಟ್ಟಿ ಹಾಗೂ ವಿಡಿಯೋ ಚಿತ್ರೀಕರಣ ಯಾಕೆ ಕೊಡುತ್ತಿಲ್ಲ ಎಂದು ಇಡೀ ದೇಶ ಪ್ರಶ್ನಿಸಬೇಕಿದೆ. ನಾನು ವಿರೋಧ ಪಕ್ಷದ ನಾಯಕನಾಗಿರಬಹುದು, ಆದರೆ, ದೇಶದ ಎಲ್ಲ ವಿಪಕ್ಷಗಳು ಈ ಪ್ರಶ್ನೆ ಕೇಳುತ್ತಿವೆ. ಕರ್ನಾಟಕದಲ್ಲಿ ನಾವು ಸಂಗ್ರಹಿಸಿರುವ ಈ ದಾಖಲೆ ಒಂದು ದೊಡ್ಡ ಕುತಂತ್ರದ ಸಾಕ್ಷಿ ಗುಡ್ಡೆ. ಈ ಮಾಹಿತಿ ಸಂಗ್ರಹಿಸಲು ನಮಗೆ ಆರು ತಿಂಗಳು ಸಮಯ ಆಯಿತು ಎಂದು ಅವರು ಹೇಳಿದರು.
ಕರ್ನಾಟಕ ಸರಕಾರ ಈ ಮತಗಳ್ಳತನ ಅಪರಾಧದ ತನಿಖೆ ಮಾಡಿ ಕ್ರಮ ಕೈಗೊಳ್ಳಬೇಕು. ನಕಲಿ ಮತದಾರರನ್ನು ಸೇರಿಸಿರುವ ಚುನಾವಣಾ ಆಯೋಗದ ಅಧಿಕಾರಿಗಳನ್ನು ಪ್ರಶ್ನಿಸಬೇಕು. ಮಹದೇವಪುರ ಕ್ಷೇತ್ರದ ಸತ್ಯವನ್ನು ಹೊರಗೆ ತರಬೇಕು ಎಂದು ರಾಹುಲ್ ಗಾಂಧಿ ಆಗ್ರಹಿಸಿದರು.
ಮಹದೇವಪುರದಲ್ಲಿ ಐದು ಮಾದರಿಯಲ್ಲಿ ಮತಗಳ್ಳತನ
►11,965- ನಕಲಿ ಮತದಾರರ ಸೃಷ್ಠಿ
►40,009- ಸರಿಯಾದ ವಿಳಾಸ ಇಲ್ಲದವರು
►10,452- ಮತದಾರರು ಒಂದೇ ವಿಳಾಸದಲ್ಲಿ ನೋಂದಣಿ
►4,132- ಅಮಾನ್ಯ ಭಾವಚಿತ್ರವಿರುವ ಮತದಾರರು
►33,692- ನಮೂನೆ 6ರ ದುರ್ಬಳಕೆ ಮೂಲಕ ಹೊಸ ಮತದಾರರ ಸೇರ್ಪಡೆ
ಚುನಾವಣಾ ಆಯೋಗಕ್ಕೆ ಐದು ಪ್ರಶ್ನೆ ಕೇಳಿದ ರಹುಲ್ ಗಾಂಧಿ
►ನಮಗೆ ಇಲೆಕ್ಟ್ರಾನಿಕ್ ಮತದಾರರ ಪಟ್ಟಿಯನ್ನು ಯಾಕೆ ನೀಡುತ್ತಿಲ್ಲ?
►ಮತಗಟ್ಟೆಗಳ ವಿಡಿಯೋ ರೆಕಾರ್ಡಿಂಗ್ ನಾಶ ಮಾಡಿದ್ದು ಯಾಕೆ?
►ಮತದಾರರ ಪಟ್ಟಿಯಲ್ಲಿ ಇಷ್ಟೊಂದು ಅಕ್ರಮ ನಡೆದಿರುವುದು ಯಾಕೆ?
►ವಿಪಕ್ಷಗಳಿಗೆ ಉತ್ತರ ನೀಡುವ ಬದಲು ಬೆದರಿಕೆ ಹಾಕುತ್ತಿರುವುದು ಯಾಕೆ?
►ಚುನಾವಣಾ ಆಯೋಗ ಬಿಜೆಪಿಯ ಏಜೆಂಟ್ ರೀತಿ ವರ್ತಿಸುತ್ತಿರುವುದು ಏಕೆ?







