"ಸಮಯ ತೆಗೆದುಕೊಳ್ಳುತ್ತದೆ, ಆದರೆ ನಾವು ನಿಮ್ಮನ್ನು ಹಿಡಿಯುತ್ತೇವೆ": ಬಿಜೆಪಿ, ಚುನಾವಣಾ ಆಯೋಗದ ವಿರುದ್ಧ ಬೆಂಗಳೂರಿನಲ್ಲಿ ರಾಹುಲ್ ಗಾಂಧಿ ವಾಗ್ದಾಳಿ

ರಾಹುಲ್ ಗಾಂಧಿ (PTI)
ಬೆಂಗಳೂರು : ಚುನಾವಣಾ ಆಯೋಗ ಎಲೆಕ್ಟ್ರಾನಿಕ್ ಮತದಾರರ ಪಟ್ಟಿ ಮತ್ತು ಮತಗಟ್ಟೆ ವೀಡಿಯೊಗಳನ್ನು ಹಂಚಿಕೊಳ್ಳಲು ನಿರಾಕರಿಸುವ ಮೂಲಕ ದೊಡ್ಡ ಅಪರಾಧ ಮಾಡಿದೆ ಎಂದು ಲೋಕಸಭೆಯ ವಿಪಕ್ಷ ನಾಯಕ ರಾಹುಲ್ ಗಾಂಧಿ ಆರೋಪಿಸಿದ್ದಾರೆ.
ಕರ್ನಾಟಕ ಮತ್ತು ಇತರ ರಾಜ್ಯಗಳಲ್ಲಿ 2024ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯ ʼಮತಗಳ ಕಳ್ಳತನʼವನ್ನು ಮುಚ್ಚಿ ಹಾಕಲು ಎಲೆಕ್ಟ್ರಾನಿಕ್ ಮತದಾರರ ಪಟ್ಟಿ ಮತ್ತು ಮತಗಟ್ಟೆ ವೀಡಿಯೊಗಳನ್ನು ಹಂಚಿಕೊಳ್ಳಲು ನಿರಾಕರಿಸಲಾಗಿದೆ ಎಂದು ರಾಹುಲ್ ಗಾಂಧಿ ಹೇಳಿದ್ದಾರೆ.
ಬೆಂಗಳೂರಿನಲ್ಲಿ ಬೃಹತ್ ಪ್ರತಿಭಟನಾ ಸಮಾವೇಶದಲ್ಲಿ ಮಾತನಾಡಿದ ರಾಹುಲ್ ಗಾಂಧಿ, 2024ರ ಚುನಾವಣೆಯಲ್ಲಿ ಮತದಾರರ ಪಟ್ಟಿಯಲ್ಲಿ ದೊಡ್ಡ ಪ್ರಮಾಣದ ಅಕ್ರಮ ಮತ್ತು ಸಂವಿಧಾನದಲ್ಲಿ ಪ್ರತಿಪಾದಿಸಲಾದ "ಒಬ್ಬ ವ್ಯಕ್ತಿ, ಒಂದು ಮತ" ತತ್ವವನ್ನು ಉಲ್ಲಂಘಿಸಲಾಗಿದೆ ಎಂದು ಹೇಳಿದ್ದಾರೆ.
ʼಸಮಯ ತೆಗೆದುಕೊಳ್ಳುತ್ತದೆ, ಆದರೆ ನಾವು ನಿಮ್ಮನ್ನು ಹಿಡಿಯುತ್ತೇವೆ, ನೀವು ಸಂವಿಧಾನದ ಮೇಲೆ ದಾಳಿ ಮಾಡಿದರೆ, ನಾವು ನಿಮ್ಮ ಮೇಲೆ ದಾಳಿ ಮಾಡುತ್ತೇವೆ. ಇದು ರಾಷ್ಟ್ರದ ಧ್ವನಿʼ ಎಂದು ರಾಹುಲ್ ಗಾಂಧಿ ಹೇಳಿದರು.
ಲೋಕಸಭಾ ಚುನಾವಣೆಗೆ ಮುನ್ನ ಕಾಂಗ್ರೆಸ್ ನಡೆಸಿದ ಆಂತರಿಕ ಸಮೀಕ್ಷೆಯು ಕರ್ನಾಟಕದಲ್ಲಿ ಕನಿಷ್ಠ 16 ಸ್ಥಾನಗಳಲ್ಲಿ ಪಕ್ಷ ಮುನ್ನಡೆ ಸಾಧಿಸಲಿದೆ ಎಂದು ಅಂದಾಜಿಸಿದೆ. ಆದರೆ, ಅದು ಕೇವಲ ಒಂಬತ್ತು ಸ್ಥಾನಗಳಲ್ಲಿ ಮಾತ್ರ ಗೆದ್ದಿದೆ. ಆ ದಿನ, ಚುನಾವಣೆಯಲ್ಲಿ ಏನೋ ತಪ್ಪಾಗಿದೆ ಎಂಬುದು ನಮ್ಮ ಗಮನಕ್ಕೆ ಬಂದಿದೆ. ಎಲೆಕ್ಟ್ರಾನಿಕ್ ಮತದಾರರ ಪಟ್ಟಿ ಮತ್ತು ಮತಗಟ್ಟೆಗಳ ವೀಡಿಯೊ ರೆಕಾರ್ಡಿಂಗ್ ಬಿಡುಗಡೆ ಮಾಡುವಂತೆ ಚುನಾವಣಾ ಆಯೋಗಕ್ಕೆ ಮಾಡಿದ ವಿನಂತಿಗಳನ್ನು ಪದೇ ಪದೇ ನಿರಾಕರಿಸಲಾಯಿತು. ನಂತರ 45 ದಿನಗಳಲ್ಲಿ ವೀಡಿಯೊಗಳನ್ನು ಅಳಿಸುವುದನ್ನು ಕಡ್ಡಾಯಗೊಳಿಸಲು ಕಾನೂನನ್ನು ಬದಲಾಯಿಸಲಾಯಿತು ಎಂದು ರಾಹುಲ್ ಗಾಂಧಿ ಆರೋಪಿಸಿದರು.
ಬೆಂಗಳೂರು ಕೇಂದ್ರ ಲೋಕಸಭಾ ಕ್ಷೇತ್ರದ ವ್ಯಾಪ್ತಿಯ ಮಹದೇವಪುರ ವಿಧಾನಸಭಾ ಕ್ಷೇತ್ರದಲ್ಲಿ ಆರು ತಿಂಗಳ ಕಾಲ ನಡೆಸಿದ ಸಂಶೋಧನೆಯಲ್ಲಿ ಮತದಾರರ ಪಟ್ಟಿಯಲ್ಲಿ ವಂಚನೆಗೆ ಸಂಬಂಧಿಸಿ ಶೇಕಡಾ100ರಷ್ಟು ಪುರಾವೆ ಸಿಕ್ಕಿದೆ ಎಂದು ರಾಹುಲ್ ಗಾಂಧಿ ಹೇಳಿದ್ದಾರೆ.
ಇದು "ಸಂವಿಧಾನಕ್ಕೆ ವಿರುದ್ಧವಾಗಿದೆ" ಮತ್ತು ಬಡವರು, ಸಣ್ಣ ವ್ಯಾಪಾರಿಗಳು ಮತ್ತು ಸಾಮಾನ್ಯ ಜನರ ಮೇಲೆ ದಾಳಿ ಮಾಡಲು ಈ ತಂತ್ರಗಳನ್ನು ಅಸ್ತ್ರವಾಗಿ ಬಳಸುತ್ತಿದ್ದಾರೆ. ಪ್ರತಿಯೊಬ್ಬ ಕಾಂಗ್ರೆಸ್ ಕಾರ್ಯಕರ್ತನು ಸಂವಿಧಾನ ಮತ್ತು ಪ್ರಜಾಪ್ರಭುತ್ವವನ್ನು ರಕ್ಷಿಸಲು ಬದ್ಧನಾಗಿದ್ದಾನೆ ಎಂದು ತಿಳಿಸಿದ್ದಾರೆ.
ಆಪಾದಿತ ವಂಚನೆಯನ್ನು "ಕರ್ನಾಟಕದ ಜನರ ವಿರುದ್ಧದ ಕ್ರಿಮಿನಲ್ ಕೃತ್ಯ" ಎಂದು ಕರೆದ ರಾಹುಲ್, ಪಟ್ಟಿಗೆ ನಕಲಿ ಹೆಸರುಗಳನ್ನು ಸೇರಿಸಿದ್ದಕ್ಕಾಗಿ ತನಿಖೆ ನಡೆಸಿ ಅಧಿಕಾರಿಗಳನ್ನು ಹೊಣೆಗಾರರನ್ನಾಗಿ ಮಾಡಬೇಕೆಂದು ರಾಜ್ಯ ಸರಕಾರಕ್ಕೆ ಒತ್ತಾಯಿಸಿದರು.







